ಹೊಸ ಸಿಜೆಐ ಅಧಿಕಾರ ವಹಿಸಿಕೊಂಡ ದಿನ 592 ಪ್ರಕರಣಗಳ ವಿಚಾರಣೆ
ಹೊಸದಿಲ್ಲಿ: ಭಾರತದ ಮುಖ್ಯ ನ್ಯಾಯಮೂರ್ತಿಯಾಗಿ ಉದಯ್ ಉಮೇಶ್ ಲಲಿತ್ ಅವರು ಅಧಿಕಾರ ವಹಿಸಿಕೊಂಡ ಮೊದಲ ದಿನ ಸುಪ್ರೀಂಕೋರ್ಟ್ ದಾಖಲೆ 592 ಹೊಸ ಪ್ರಕರಣಗಳ ವಿಚಾರಣೆ ನಡೆಸಿದೆ.
ಹಲವು ವರ್ಷಗಳಿಂದ ಸುಪ್ರೀಂಕೋರ್ಟ್‍ನಲ್ಲಿ ನನೆಗುದಿಗೆ ಬಿದ್ದಿರುವ ಹಲವು ಸೂಕ್ಷ್ಮ ಹಾಗೂ ಗಣ್ಯ ವ್ಯಕ್ತಿಗಳನ್ನು ಒಳಗೊಂಡ ಪ್ರಕರಣಗಳು ಮರುಜೀವ ಪಡೆಯಲಿವೆ ಎಂಬ ನಿರೀಕ್ಷೆಗೆ ಈ ನಡೆ ಕಾರಣವಾಗಿದೆ.
ಅಧಿಕಾರ ವಹಿಸಿಕೊಂಡ ಬಳಿಕ ವಕೀಲರನ್ನು ಉದ್ದೇಶಿಸಿ ಮಾತನಾಡಿದ ಸಿಜೆಐಯವರು, ತುರ್ತು ಪ್ರಕರಣಗಳನ್ನು ವಿಚಾರಣೆಗೆ ಪಟ್ಟಿ ಮಾಡುವ ವಿಚಾರದಲ್ಲಿ ಹೊಸ ಹಾಗೂ ಪಾರದರ್ಶಕ ವಿಧಾನವನ್ನು ಗುರುವಾರದೊಳಗೆ ಆರಂಭಿಸುವುದಾಗಿ ಹೇಳಿದರು. ಬಾಕಿ ಪ್ರಕರಣಗಳನ್ನು ವಿಲೇವಾರಿ ಮಾಡುವುದು ಮತ್ತು ಪ್ರತಿದಿನ ಸಾಧ್ಯವಾದಷ್ಟು ಗರಿಷ್ಠ ಪ್ರಕರಣಗಳ ವಿಚಾರಣೆ ನಡೆಸಲು ಆದ್ಯತೆ ನೀಡುವುದಾಗಿ ನ್ಯಾಯಮೂರ್ತಿ ಲಲಿತ್ ಸ್ಪಷ್ಟಪಡಿಸಿದ್ದಾರೆ.
ಕೇವಲ 74 ದಿನಗಳ ಅಧಿಕಾರಾವಧಿಯಲ್ಲಿ ಪ್ರಕರಣಗಳನ್ನು ವಿಚಾರಣೆಗೆ ಪಟ್ಟಿ ಮಾಡುವಲ್ಲಿ ಪಾರದರ್ಶಕತೆ ತರುವುದು, ತುರ್ತು ಪ್ರಕರಣಗಳ ಕಣ್ಗಾವಲು ವ್ಯವಸ್ಥೆಯನು ಸಾಂಸ್ಥೀಕರಿಸುವುದು ಮತ್ತು ಸಂವಿಧಾನ ಪೀಠಗಳನ್ನು ಸ್ಥಾಪಿಸಲು ಆದ್ಯತೆ ನೀಡುವುದಾಗಿ ಇತ್ತೀಚೆಗೆ ನ್ಯಾಯಮೂರ್ತಿ ಲಲಿತ್ ಹೇಳಿದ್ದರು.
ಮೊದಲ ದಿನದ ಸಿಜೆಐ ಕಾರ್ಯವೈಖರಿ ಅಪಾರ ನಿರೀಕ್ಷೆ ಹುಟ್ಟುಹಾಕಿದೆ. ಇಬ್ಬರು ನ್ಯಾಯಮೂರ್ತಿಗಳನ್ನು ಒಳಗೊಂಡ 15 ಪೀಠಗಳು ಕನಿಷ್ಠ ತಲಾ 60 ಪ್ರಕರಣಗಳ ವಿಚಾರಣೆ ನಡೆಸಿವೆ. ಇದು ಹಿಂದೆ ವಿಚಾರಣೆ ನಡೆಸುತ್ತಿದ್ದ ಪ್ರಕರಣಗಳ ಸಂಖ್ಯೆಯ ದುಪ್ಪಟ್ಟಾಗಿದೆ. ಸೋಮವಾರಕ್ಕೆ ಪಟ್ಟಿ ಮಾಡಲಾದ 900ಕ್ಕೂ ಹೆಚ್ಚು ಪ್ರಕರಣಗಳ ಪೈಕಿ 592 ಪ್ರಕರಣಗಳನ್ನು ಹೊಸದಾಗಿ ವಿಚಾರಣೆ ನಡೆಸಲಾಯಿತು. ಈ ಪೈಕಿ ರಫೇಲ್ ಒಪ್ಪಂದ, ಕರ್ನಾಟಕದ ಹಿಜಾಬ್ ವಿವಾದಗಳು ಸೇರಿವೆ ಎಂದು hindustantimes.com ವರದಿ ಮಾಡಿದೆ.