×
Ad

ರೈಲು ನಿಲ್ದಾಣದಲ್ಲಿ ಕದ್ದ ಮಗು ಖರೀದಿಸಿ ಸಿಕ್ಕಿಬಿದ್ದ ಬಿಜೆಪಿ ಪಾಲಿಕೆ ಸದಸ್ಯೆ!

Update: 2022-08-30 08:01 IST

ಮಥುರಾ: ಮಥುರಾ ಜಂಕ್ಷನ್ ರೈಲು ನಿಲ್ದಾಣದಲ್ಲಿ ಆರು ದಿನಗಳ ಹಿಂದೆ ಕಳವಾಗಿದ್ದ ಏಳು ತಿಂಗಳ ಮಗುವನ್ನು ಪತ್ತೆ ಮಾಡಿರುವ ಸರ್ಕಾರಿ ರೈಲ್ವೆ ಪೊಲೀಸರು ಈ ಸಂಬಂಧ ಫಿರೋಝಾಬಾದ್ ಪಾಲಿಕೆಯ ಬಿಜೆಪಿ ಸದಸ್ಯೆ ಸೇರಿದಂತೆ ಎಂಟು ಮಂದಿಯನ್ನು ಬಂಧಿಸಿದ್ದಾರೆ.

ಬಂಧಿತರಲ್ಲಿ ಇಬ್ಬರು ಎಎನ್‍ಎಂಗಳು, ಫಿರೋಝಾಬಾದ್ ಪಾಲಿಕೆ ಸದಸ್ಯೆ ಹಾಗೂ ಆಕೆಯ ಪತಿ ಸೇರಿದ್ದಾರೆ ಎಂದು ರೈಲ್ವೆ ಎಸ್ಪಿ ಮುಸ್ತಾಕ್ ಅಹ್ಮದ್ ಹೇಳಿದ್ದಾರೆ.

ರೈಲು ನಿಲ್ದಾಣದ ಪ್ಲಾಟ್‍ಫಾರಂ (platform) 8/9ರಲ್ಲಿ ಪೋಷಕರು ನಿದ್ರಿಸುತ್ತಿದ್ದ ವೇಳೆ ಆಗಸ್ಟ್ 24ರ ಮುಂಜಾನೆ 4ರ ಸುಮಾರಿಗೆ ಸಂಜಯ್ ಎಂಬ ಏಳು ತಿಂಗಳ ಮಗುವನ್ನು ಅಪಹರಿಸಲಾಗಿತ್ತು. ಅಪಹೃತ ಮಗು ಮಥುರಾ ಜಿಲ್ಲೆಯ ಫರಹ್ ಠಾಣೆ ವ್ಯಾಪ್ತಿಯ ಪರ್ಕಮ್ ಎಂಬಲ್ಲಿನ ರಾಧಾ ಎಂಬಾಕೆಯ ಮಗು.

ಸಿಸಿಟಿವಿ ದೃಶ್ಯಾವಳಿಯ ಆಧಾರದಲ್ಲಿ ಕಣ್ಗಾವಲು ತಂಡ ಸೇರಿದಂತೆ ಆರು ತಂಡಗಳು ಪ್ರಕರಣ ಬೇಧಿಸುವ ನಿಟ್ಟಿಲ್ಲಿ ಕಾರ್ಯೋನ್ಮುಖವಾಗಿದ್ದವು.

ರೈಲು ನಿಲ್ದಾಣದಲ್ಲಿ ಇಂಗು ಮಾರುತ್ತಿದ್ದ ಹತ್ರಾಸ್‍ನ ದಿಲೀಪ್ ಕುಮಾರ್ ಎಂಬಾತ ಮಗುವನ್ನು ಪ್ಲಾಟ್‍ಫಾರಂನಿಂದ ಕದ್ದುಕೊಂಡು ಬಂದಿದ್ದಾನೆ. ಇದು ಹತ್ರಾಸ್ ಹಾಗೂ ಫಿರೋಝಾಬಾದ್‍ನಲ್ಲಿ ನಿಯುಕ್ತರಾಗಿದ್ದ ಇಬ್ಬರು ಎಎನ್‍ಎಂಗಳು ಸೇರಿದಂತೆ ಸಂಘಟಿತ ಗ್ಯಾಂಗ್‍ನ ಯೋಜಿತ ಕೃತ್ಯವಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಈ ಅಪಹೃತ ಮಗುವನ್ನು ಬಿಜೆಪಿ ಪಾಲಿಕೆ ಸದಸ್ಯೆ ವಿನೀತಾ ಅಗರ್‍ವಾಲ್ ಹಾಗೂ ಆಕೆಯ ಪತಿ ಕೃಷ್ಣ ಮುರಾರಿ ಅಗರ್‍ವಾಲ್ 1.8 ಲಕ್ಷ ರೂಪಾಯಿಗೆ ಖರೀದಿಸಿದ್ದರು. ಇವರಿಗೆ ಪುತ್ರಿ ಇದ್ದರೂ, ಗಂಡು ಮಗು ಬೇಕು ಎಂಬ ಬಯಕೆಯಿಂದ ಮಗುವನ್ನು ಖರೀದಿಸಿದ್ದರು ಎಂದು ಅಧಿಕಾರಿಗಳು ವಿವರಿಸಿರುವುದಾಗಿ newindianexpress.com ವರದಿ ಮಾಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News