ದಲಿತ ಯುವಕನ ಮೃತದೇಹ ಪತ್ತೆ; ಕೊಲೆ ಶಂಕೆ
ಬಸ್ತಿ: ದಲಿತ ಯುವಕನೋರ್ವನ ಮೃತದೇಹ ಉತ್ತರ ಪ್ರದೇಶದ ಪದಾರಿಯಾ ಚೇತ್‍ಸಿಂಗ್ ಗ್ರಾಮದಲ್ಲಿ ಪತ್ತೆಯಾಗಿದ್ದು, ಯುವಕನ ಜತೆಗೆ ಸಂಬಂಧ ಸಹಿಸದ ಯುವತಿಯ ಕುಟುಂಬ ಈ ಕೃತ್ಯ ಎಸಗಿರಬಹುದು ಎಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ.
ಈ ಸಂಬಂಧ ಮೂರು ಮಂದಿಯನ್ನು ಬಂಧಿಸಲಾಗಿದೆ. ಯವತಿಯನ್ನು ಹೂತು ಹಾಕಲಾಗಿತ್ತು. ದಲಿತ ಯುವಕನ ಶವ ಕಬ್ಬಿನ ಗದ್ದೆಯಲ್ಲಿ ಪತ್ತೆಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಪಾರಸ್‍ನಾಥ್ ಚೌಧರಿ ಎಂಬ ವ್ಯಕ್ತಿ ಶನಿವಾರ ಗದ್ದೆಯಲ್ಲಿ ಅಂಕಿತ್ ಎಂಬ ಯುವಕನ ಶವವನ್ನು ಗುರುತಿಸಿ ಪೊಲೀಸರಿಗೆ ಮಾಹಿತಿ ನೀಡಿದ ಬಳಿಕ ತನಿಖೆ ನಡೆಸಿದಾಗ ಈ ಪ್ರಕರಣ ಬೆಳಕಿಗೆ ಬಂದಿದೆ. ಮೃತ ಯುವಕನ ತಂದೆ ನೀಡಿದ ಹೇಳಿಕೆಯಂತೆ ಅಂಕಿತ್, ಮುಜೀಬುಲ್ಲಾ ಎಂಬವರ ಟ್ರ್ಯಾಕ್ಟರ್ ಚಾಲಕನಾಗಿ ಕೆಲಸ ಮಾಡುತ್ತಿದ್ದ. ಇದೀಗ ಟ್ರ್ಯಾಕ್ಟರ್ ಮಾಲಕ ತಲೆ ಮರೆಸಿಕೊಂಡಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ತನ್ನ ಪ್ರಿಯಕರನನ್ನು ಹತ್ಯೆ ಮಾಡಿದ ವಿಷಯ ತಿಳಿದು ಯುವತಿ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಬಳಿಕ ಮುಜೀಬುಲ್ಲಾ ತಲೆ ಮರೆಸಿಕೊಂಡಿರಬೇಕು ಎಂದು ಪೊಲೀಸರು ಶಂಕಿಸಿದ್ದಾರೆ. ಗಾಯದ ಗುರುತುಗಳಿದ್ದ ಯುವತಿಯ ಶವವನ್ನು ಹೂತಲ್ಲಿಂದ ಹೊರ ತೆರೆದು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ ಎಂದು ಪೊಲೀಸರು ವಿವರಿಸಿದ್ದಾರೆ.
ಯುವತಿಯ ಸಾವಿನ ಕಾರಣ ಮರಣೋತ್ತರ ಪರೀಕ್ಷೆ ಬಳಿಕ ತಿಳಿಯಲಿದೆ ಎಂದು ಹೆಚ್ಚುವರಿ ಎಸ್ಪಿ ದೀಪೇಂದ್ರ ಚೌಧರಿ ಹೇಳಿದ್ದಾರೆ ಎಂದು newindianexpress.com ವರದಿ ಮಾಡಿದೆ.