ದ್ವೇಷ ಭಾಷಣದ ಇತಿಹಾಸವಿರುವ ಸಾಧ್ವಿ ರಿತಂಬರರ ಅಮೆರಿಕಾ ಕಾರ್ಯಕ್ರಮಗಳನ್ನು ರದ್ದುಗೊಳಿಸುವಂತೆ ಹಲವು ಸಂಘಟನೆಗಳ ಆಗ್ರಹ

Update: 2022-08-30 06:34 GMT

ಅಟ್ಲಾಂಟ: ದ್ವೇಷ ಭಾಷಣಗಳನ್ನು (Hatespeech) ನೀಡಿರುವ ಇತಿಹಾಸ ಹೊಂದಿರುವ ವಿಶ್ವ ಹಿಂದು ಪರಿಷದ್ ನಾಯಕಿ ಸಾಧ್ವಿ ರಿತಂಬರ ಅವರನ್ನು ಹಿಂದು ಸ್ವಯಂಸೇವಕ ಸಂಘ ಮತ್ತು ವಿಶ್ವ ಹಿಂದು ಪರಿಷದ್ ಆಫ್ ಅಮೆರಿಕಾ(Vishwa Hindu Parishad of America) ಅಲ್ಲಿನ ಅಟ್ಲಾಂಟ ಸಹಿತ  ಹಲವಾರು ನಗರಗಳಲ್ಲಿ ಸತ್ಸಂಗ ಮತ್ತು ಧಾರ್ಮಿಕ ಪ್ರವಚನಗಳನ್ನು ನೀಡಲು ಆಹ್ವಾನಿಸಿರುವುದನ್ನು  ಹಲವಾರು ಬಹು-ಧರ್ಮೀಯ ಮತ್ತು ನಾಗರಿಕ ಸಂಘಟನೆಗಳು ಬಲವಾಗಿ ಖಂಡಿಸಿವೆ. ಕಾರ್ಯಕ್ರಮ ಆಯೋಜಕ ಸಂಘಟನೆಗಳು ಅಮೆರಿಕಾದಲ್ಲಿ ಆಕೆಯ ಎಲ್ಲಾ ಕಾರ್ಯಕ್ರಮಗಳನ್ನು ರದ್ದುಗೊಳಿಸುವಂತೆ ಹಾಗೂ ಆಕೆ ಸಹಿತ  ಭಾರತದಿಂದ ಇತರ ಹಿಂದು ತೀವ್ರವಾದಿ ನಾಯಕರನ್ನು ಭವಿಷ್ಯದಲ್ಲಿ ಆಹ್ವಾನಿಸಬಾರದೆಂದು ಆಗ್ರಹಿಸಿವೆ.

ಇಂಡಿಯನ್ ಅಮೆರಿಕನ್ ಮುಸ್ಲಿಂ ಕೌನ್ಸಿಲ್‍ನ(Indian American Muslim Council) ಅಟ್ಲಾಂಟ ಘಟಕದ ಅಧ್ಯಕ್ಷ  ಝಮೀರ್ ಖಾನ್ ಅವರು ಅಟ್ಲಾಂಟಾದ ನೋರ್‍ಕ್ರಾಸ್ ಎಂಬಲ್ಲಿರುವ ಗ್ಲೋಬಲ್ ಮಾಲ್ ಮಾಲೀಕರಾದ ಶಿವ್ ಅಗರ್ವಾಲ್ ಅವರಿಗೆ ಪತ್ರ ಬರೆದು  ಸಾಧ್ವಿ ರಿತಾಂಬರ ಅವರ ಜೊತೆಗಿನ ಕಾರ್ಯಕ್ರಮ ರದ್ದುಗೊಳಿಸುವಂತೆ ಕೋರಿದ್ದಾರೆ.

ಹಿಂದೂಸ್ ಫಾರ್ ಹ್ಯೂಮನ್ ರೈಟ್ಸ್(Hindus for Human Rights) ಸಂಸ್ಥೆಯ ಸಹ ಸ್ಥಾಪಕಿ ಮತ್ತು ಕಾರ್ಯನಿರ್ವಾಹಕ ನಿರ್ದೇಶಕಿ ಸುನೀತಾ ವಿಶ್ವನಾಥ್ ಅವರು ಕೂಡ ಕಾರ್ಯಕ್ರಮ ರದ್ದುಗೊಳಿಸುವಂತೆ ಹಾಗೂ ಆಕೆಯ ಎಲ್ಲಾ ದ್ವೇಷಕಾರಕ ಹೇಳಿಕೆಗಳನ್ನು ಖಂಡಿಸಬೇಕೆಂದು ಆಗ್ರಹಿಸಿದ್ದಾರೆ.

ಸಾಧ್ವಿ ರಿತಂಬರ(Sadhvi Ritambara) ಅವರ ಕಾರ್ಯಕ್ರಮವನ್ನು ಪ್ರವರ್ತಿಸುವ ಟಿವಿ ಏಷ್ಯಾ, ರಾಷ್ಟ್ರ ದರ್ಪಣ್, ಅಟ್ಲಾಂಟ ದುನಿಯಾ ಎನ್‍ಆರ್‌ಐ ಪಲ್ಸ್, ಎಸ್&ಎಸ್ ಡಿಜಿಟಲ್ ಮೀಡಿಯಾ ಯುಎಸ್‍ಇ ಇವುಗಳು ಕ್ಷಮೆಯಾಚಿಸಬೇಕೆಂದು ಇಂಡಿಯಾ ಸಿವಿಲ್ ವಾಚ್ ಇಂಟರ್‍ನ್ಯಾಷನಲ್ ಸಹ-ಸ್ಥಾಪಕ ಬಿಜು ಮ್ಯಾಥ್ಯೂ ಆಗ್ರಹಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News