ಪ್ರಶಾಂತ್ ಭೂಷಣ್ ವಿರುದ್ಧದ ನ್ಯಾಯಾಂಗ ನಿಂದನೆ ಪ್ರಕರಣ ಕೈಬಿಟ್ಟ ಸುಪ್ರೀಂ ಕೋರ್ಟ್

Update: 2022-08-30 07:31 GMT

ಹೊಸದಿಲ್ಲಿ: ಹಿಂದಿನ ಹಲವಾರು ಮುಖ್ಯ ನ್ಯಾಯಮೂರ್ತಿಗಳು ಭ್ರಷ್ಟರಾಗಿದ್ದರು ಎಂಬ ಹೇಳಿಕೆಯನ್ನು ತೆಹೆಲ್ಕಾ ಮ್ಯಾಗಜೀನ್‍ಗೆ ನೀಡಿದ್ದ ಸಂದರ್ಶನದಲ್ಲಿ ಹೇಳಿದ್ದ ಹಿರಿಯ ವಕೀಲ ಪ್ರಶಾಂತ್ ಭೂಷಣ್(Prashant Bhushan) ಅವರ ವಿರುದ್ಧ 2009ರಲ್ಲಿ ದಾಖಲಾಗಿದ್ದು ನ್ಯಾಯಾಂಗ ನಿಂದನೆ ಪ್ರಕರಣವನ್ನು ಸುಪ್ರೀಂ ಕೋರ್ಟ್(Supreme court) ಇಂದು ಮುಚ್ಚಿದೆ.

ಈ ಪ್ರಕರಣದ ಆರೋಪಿಗಳ ಸ್ಥಾನದಲ್ಲಿದ್ದವರು ಕ್ಷಮೆಯಾಚಿಸಿರುವ ಹಿನ್ನೆಲೆಯಲ್ಲಿ ಪ್ರಕರಣವನ್ನು ಜಸ್ಟಿಸ್ ಇಂದಿರಾ ಬ್ಯಾನರ್ಜಿ(Indira Banarjee), ಜಸ್ಟಿಸ್ ಸೂರ್ಯಕಾಂತ್ ಮತ್ತು ಜಸ್ಟಿಸ್ ಎಂ ಎಂ ಸುಂದರೇಶ್ ಅವರ ಪೀಠ ಕೈಬಿಟ್ಟಿದೆ.

ಭೂಷಣ್ ಪರ ಹಾಜರಿದ್ದ ಹಿರಿಯ ವಕೀಲ ಕಪಿಲ್ ಸಿಬಲ್(Kapil Sibal) ನ್ಯಾಯಾಲಯದ ಮುಂದೆ ವಾದ ಮಂಡಿಸಿ ತಮ್ಮ ಕಕ್ಷಿಗಾರರು ಈಗಾಗಲೇ ವಿವರಣೆ ನೀಡಿರುವುದರಿಂದ ಮತ್ತೆ ಈ ಪ್ರಕರಣವನ್ನು ಮುಂದುವರಿಸುವ ಅಗತ್ಯವಿದೆಯೇ ಎಂದು ಪ್ರಶ್ನಿಸಿದರು.

ನ್ಯಾಯಾಲಯ ಕೂಡ ಇದನ್ನು ಒಪ್ಪಿ ಪ್ರಕರಣವನ್ನು ಕೈಬಿಟ್ಟಿದೆ.

ಈ ಪ್ರಕರಣವನ್ನು 2009ರಲ್ಲಿಯೇ ದಾಖಲಿಸಲಾಗಿದ್ದರೂ, ಹಲವು ವರ್ಷ ಕಡತದಲ್ಲಿಯೇ ಬಾಕಿಯಾದ ಪ್ರಕರಣವನ್ನು 2020 ರಲ್ಲಿ ಭೂಷಣ್ ಅವರ ಟ್ವೀಟ್‍ಗೆ ಸಂಬಂಧಿಸಿದ ಬೇರೊಂದು ಪ್ರಕರಣದ ಜೊತೆಯಲ್ಲಿ ಪರಿಗಣಿಸಲಾಗಿತ್ತು.

ಭೂಷಣ್ ಅವರು ನ್ಯಾಯಾಲಯಕ್ಕೆ ನೀಡಿದ್ದ ಕ್ಷಮಾಪಣೆಯಲ್ಲಿ ತಾವು ಉದ್ದೇಶಪೂರ್ವಕವಾಗಿ ನ್ಯಾಯಾಂಗದ ಘನತೆಯನ್ನು ತಗ್ಗಿಸುವ ಕೆಲಸ ಮಾಡಿಲ್ಲ ಹಾಗೂ ತಮಗೆ ನ್ಯಾಯಾಂಗದ ಮೇಲೆ ಸಂಪೂರ್ಣ ವಿಶ್ವಾಸವಿದೆ ಎಂದಿದ್ದರಲ್ಲದೆ ತಮ್ಮ ಸಂದರ್ಶನವನ್ನು ತಪ್ಪಾಗಿ ಅರ್ಥೈಸಲಾಗಿರುವುದಕ್ಕೆ ವಿಷಾದಿಸಿದರಲ್ಲದೆ  ಹಾಗೂ ನ್ಯಾಯಾಂಗ, ಮುಖ್ಯವಾಗಿ ಸುಪ್ರೀಂ ಕೋರ್ಟಿನ ಘನತೆ ತಗ್ಗಿಸುವ ಉದ್ದೇಶ ತಮಗಿರಲಿಲ್ಲ ಎಂದಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News