1400ಕೋಟಿ ರೂ. ಅಮಾನ್ಯ ನೋಟುಗಳನ್ನು ಬದಲಿಸಲು ಉದ್ಯೋಗಿಗಳಿಗೆ ಒತ್ತಡ ಹೇರಿದ್ದ ದಿಲ್ಲಿ ಲೆ. ಗವರ್ನರ್: ಆಪ್ ಆರೋಪ

Update: 2022-08-30 09:19 GMT

ಹೊಸದಿಲ್ಲಿ:  ದಿಲ್ಲಿಯ ಲೆಫ್ಟಿನೆಂಟ್ ಗವರ್ನರ್ ವಿ.ಕೆ ಸಕ್ಸೇನಾ(V.K. Saxena) ಅವರು 2016 ರಲ್ಲಿ ಕೆವಿಐಸಿ ಅಧ್ಯಕ್ಷರಾಗಿದ್ದ ವೇಳೆ ರೂ. 1400 ಕೋಟಿ ಮೌಲ್ಯದ ಅಮಾನ್ಯ ನೋಟುಗಳನ್ನು ವಿನಿಮಯ ಮಾಡಿ ತರಲು ತಮ್ಮ ಉದ್ಯೋಗಿಗಳಿಗೆ ಒತ್ತಡ ಹೇರಿದ್ದರು ಎಂದು ಆಪ್ ಶಾಸಕ ದುರುಗೇಶ್ ಪಾಠಕ್ ಅವರು ಸೋಮವಾರ ದಿಲ್ಲಿ ವಿಧಾನಸಭೆಯಲ್ಲಿ ಆರೋಪಿಸಿದ್ದಾರೆ.

ಆದರೆ ಈ ಆರೋಪಗಳ ಕುರಿತು ಲೆಫ್ಟಿನೆಂಟ್ ಗವರ್ನರ್ ಅವರ ಕಚೇರಿ ಪ್ರತಿಕ್ರಿಯಿಸಿಲ್ಲ.

"ಸಕ್ಸೇನಾ ಅವರು ಕೆವಿಐಸಿ ಅಧ್ಯಕ್ಷರಾಗಿದ್ದ ಸಂದರ್ಭ ನೋಟು ಅಮಾನ್ಯೀಕರಣ(Demonitization) ನಡೆದಿತ್ತು. ಆಗ ಅವರ ಕಚೇರಿಯಲ್ಲಿ ಕೆಲಸ ಮಾಡುತ್ತಿದ್ದ ಕ್ಯಾಶಿಯರ್ ಒಬ್ಬರಿಗೆ ಅವರು  ಅಮಾನ್ಯ ನೋಟುಗಳನ್ನು ಬದಲಿಸಲು ಬಲವಂತಪಡಿಸಿದ್ದರೆಂದು ಆತ ಲಿಖಿತವಾಗಿ ತಿಳಿಸಿದ್ದಾರೆ. ಆದರೆ ದುರದೃಷ್ಟವಶಾತ್ ಅವರನ್ನು ಅಮಾನತುಗೊಳಿಸಲಾಗಿತ್ತು. ಅವರಿಗೆ ಈ ಬಗ್ಗೆ ತನಿಖೆ ಬೇಕಿದೆ. ಈ ಬಗ್ಗೆ ಮಾಧ್ಯಮ ವರದಿಯೂ ಇದೆ ಹಾಗೂ ಸಕ್ಸೇನಾ ಅವರಿಂದ ಬಾಧಿತ ಉದ್ಯೋಗಿಗಳ ಹೇಳಿಕೆಗಳೂ ಇವೆ" ಎಂದು ಪಾಠಕ್ ಹೇಳಿದರು.

"ದಿಲ್ಲಿ ಶಾಖೆಯೊಂದರಿಂದಲೇ ರೂ. 22 ಲಕ್ಷ ವಿನಿಮಯ ಮಾಡಲಾಗಿತ್ತು. ದೇಶಾದ್ಯಂತ 7000 ಶಾಖೆಗಳಿರುವುದರಿಂದ ಇಲ್ಲಿ ರೂ. 1400 ಕೋಟಿ ಹಗರಣ ನಡೆದಿರಬಹುದು, ಈ ಕುರಿತು ಸಿಬಿಐ, ಇಡಿ ತನಿಖೆ ನಡೆಯಬೇಕು ಹಾಗೂ ಲೆಫ್ಟಿನೆಂಟ್ ಗವರ್ನರ್ ಅವರನ್ನು ಬಂಧಿಸಬೇಕು" ಎಂದು ಆಪ್ ಶಾಸಕರು ಆಗ್ರಹಿಸಿದರು.

"ಎಲ್‍ಜಿ ವಿ ಕೆ ಸಕ್ಸೇನಾ ಚೋರ್ ಹೈ", "ಸಕ್ಸೇನಾ ಕೋ ಅರೆಸ್ಟ್ ಕರೋ" ಎಂದು ಬರೆಯಲಾದ ಭಿತ್ತಿ ಪತ್ರಗಳನ್ನೂ ಪ್ರತಿಭಟನಾಕಾರರು ಕೈಯಲ್ಲಿ ಹಿಡಿದುಕೊಂಡಿದ್ದರು.

ನಂತರ ಆಪ್ ಶಾಸಕರು ಲೆ.ಗವರ್ನರ್ ವಿರುದ್ಧ ಘೋಷಣೆ ಕೂಗುತ್ತಾ ಸದನದ ಬಾವಿ ಬಳಿ ಬಂದಾಗ ಉಪಸಭಾಪತಿ ರಾಖಿ ಬಿರ್ಲಾ ಅವರು ಕಲಾಪವನ್ನು 15  ನಿಮಿಷಗಳ ಕಾಲ ಮುಂದೂಡಿದರು. ಲೆಫ್ಟಿನೆಂಟ್ ಗವರ್ನರ್ ಅವರನ್ನು ಹುದ್ದೆಯಿಂದ ವಜಾಗೊಳಿಸಬೇಕೆಂದು ಆಪ್ ಶಾಸಕರು ಆಗ್ರಹಿಸಿದರು. ಈ ಬೆಳವಣಿಗೆ ಆಪ್ ಸರಕಾರ ಮತ್ತು ಎಲ್‍ಜಿ ನಡುವಿನ ಸಂಬಂಧವನ್ನು ಇನ್ನಷ್ಟು ಹದಗೆಡಿಸುವ ಸಾಧ್ಯತೆಯಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News