ಗುಜರಾತ್ ಗಲಭೆ: 'ಸರಿಯಾಗಿ ತನಿಖೆ ನಡೆಸುವಂತೆʼ ಕೋರಿದ್ದ ಹಲವು ಪ್ರಕರಣಗಳನ್ನು ವಿಲೇವಾರಿಗೊಳಿಸಿದ ಸುಪ್ರೀಂಕೋರ್ಟ್

Update: 2022-08-30 18:39 GMT

ಹೊಸದಿಲ್ಲಿ,ಆ.30: 2002ರ ಗುಜರಾತ್ ಗಲಭೆಗಳ ಸಂದರ್ಭ ಸಂಭವಿಸಿದ್ದ ಹಿಂಸಾಚಾರದ ಕುರಿತು ಸೂಕ್ತ ತನಿಖೆಯನ್ನು ಕೋರಿ ಸಲ್ಲಿಸಲಾಗಿದ್ದ 10 ಅರ್ಜಿಗಳನ್ನು ಸರ್ವೋಚ್ಚ ನ್ಯಾಯಾಲಯವು ಮಂಗಳವಾರ ವಿಲೇವಾರಿಗೊಳಿಸಿದೆ.

ಪ್ರಕರಣಗಳನ್ನು ಗುಜರಾತ್ ಪೊಲೀಸರಿಂದ ಸಿಬಿಐಗೆ ವರ್ಗಾವಣೆಗೊಳಿಸುವಂತೆ ಕೋರಿ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ ಸಲ್ಲಿಸಿದ್ದ ಅರ್ಜಿಗಳು,ಸಂತ್ರಸ್ತರು ಸಲ್ಲಿಸಿದ್ದ ವಿಶೇಷ ರಜಾ ಅರ್ಜಿ (ಎಸ್ಎಲ್ಪಿ)ಗಳು ಮತ್ತು ಪ್ರಸ್ತುತ ಬಂಧನದಲ್ಲಿರುವ ಸಾಮಾಜಿಕ ಕಾರ್ಯಕರ್ತೆ ತೀಸ್ತಾ ಸೆಟ್ಲವಾಡ್ ನೇತೃತ್ವದ ಎನ್ಜಿಒ ಸಿಟಿಜನ್ಸ್ ಫಾರ್ ಜಸ್ಟೀಸ್ ಆ್ಯಂಡ್ ಪೀಸ್ ಸಲ್ಲಿಸಿದ್ದ ಅರ್ಜಿ ವಿಲೇವಾರಿಗೊಂಡಿರುವ ಅರ್ಜಿಗಳಲ್ಲಿ ಸೇರಿವೆ.

ಆದಾಗ್ಯೂ,ನ್ಯಾಯಾಲಯವು ಪ್ರಕರಣಗಳ ತನಿಖೆಗಾಗಿ ವಿಶೇಷ ತನಿಖಾ ತಂಡ (ಸಿಟ್)ವನ್ನು ರಚಿಸಿತ್ತು ಮತ್ತು ಒಂದನ್ನು ಹೊರತುಪಡಿಸಿ ಇತರ ಎಲ್ಲ ಒಂಭತ್ತೂ ಪ್ರಕರಣಗಳಲ್ಲಿ ತನಿಖೆ ಮತ್ತು ಕಾನೂನು ಕ್ರಮ ಪೂರ್ಣಗೊಂಡಿವೆ,ಹೀಗಾಗಿ ಈ ಅರ್ಜಿಗಳು ಈಗ ನೆಲೆ ಕಳೆದುಕೊಂಡಿವೆ ಎಂದು ಮುಖ್ಯ ನ್ಯಾಯಮೂರ್ತಿ ಯು.ಯು.ಲಲಿತ್, ನ್ಯಾಯಮೂರ್ತಿಗಳಾದ ಎಸ್.ರವೀಂದ್ರ ಭಟ್ ಮತ್ತು ಜೆ.ಬಿ.ಪರ್ಡಿವಾಲಾ ಅವರ ಪೀಠವು ಬೆಟ್ಟು ಮಾಡಿತು.

ನರೋಡಾ ಗಾಂವ್ ಹಿಂಸಾಚಾರ ಪ್ರಕರಣದಲ್ಲಿ ಮಾತ್ರ ವಿಚಾರಣೆ ಬಾಕಿಯಿದೆ ಮತ್ತು ಇತರ ಎಂಟು ಪ್ರಕರಣಗಳು ಈಗಾಗಲೇ ಉಚ್ಚ ನ್ಯಾಯಾಲಯಗಳು ಮತ್ತು ಸರ್ವೋಚ್ಚ ನ್ಯಾಯಾಲಯದಲ್ಲಿ ಮೇಲ್ಮನವಿ ಹಂತಗಳಲ್ಲಿವೆ ಎಂದು ಸಿಟ್ ಪರ ಹಿರಿಯ ನ್ಯಾಯವಾದಿ ಮುಕುಲ್ ರೋಹ್ಟಗಿ ಅವರು ನ್ಯಾಯಾಲಯಕ್ಕೆ ತಿಳಿಸಿದರು.

ಇದಲ್ಲದೆ,ಅರ್ಜಿದಾರರ ಪರ ವಕೀಲರು ಸಿಟ್ ಹೇಳಿಕೆಯನ್ನು ನ್ಯಾಯಯುತವಾಗಿ ಒಪ್ಪಿಕೊಂಡಿದ್ದಾರೆ ಎನ್ನುವುದನ್ನು ಸರ್ವೋಚ್ಚ ನ್ಯಾಯಾಲಯವು ಗಮನಿಸಿತು.ಆದಾಗ್ಯೂ ಬಾಕಿಯುಳಿದಿರುವ ನರೋಡಾ ಗಾಂವ್ ಪ್ರಕರಣವನ್ನು ಕಾನೂನಿಗೆ ಅನುಗುಣವಾಗಿ ತೀರ್ಮಾನಿಸುವಂತೆ ನಿರ್ದೇಶನ ನೀಡಿದ ಸರ್ವೋಚ್ಚ ನ್ಯಾಯಾಲಯವು,ಅಷ್ಟರ ಮಟ್ಟಿಗೆ ಕಾನೂನಿಗೆ ಅನುಗುಣವಾಗಿ ಸೂಕ್ತ ಕ್ರಮಗಳನ್ನು ತೆಗೆದುಕೊಳ್ಳಲು ಸಿಟ್ ಖಂಡಿತವಾಗಿಯೂ ಅರ್ಹವಾಗಿದೆ ಎಂದು ಹೇಳಿತು.

ಅರ್ಜಿದಾರರ ಪರ ವಕೀಲರಲ್ಲೋರ್ವರಾದ ಅಪರ್ಣಾ ಭಟ್ ಅವರು,ಪ್ರಸ್ತುತ ವಿಷಯದಲ್ಲಿ ರಕ್ಷಣೆ ಕೋರಿರುವ ಅರ್ಜಿದಾರರಾದ ಸೆಟ್ಲವಾಡ್ ಗುಜರಾತ್ ಪೊಲೀಸರ ವಶದಲ್ಲಿರುವುದರಿಂದ ಅವರಿಂದ ನಿರ್ದೇಶನಗಳನ್ನು ಪಡೆದುಕೊಳ್ಳಲು ತನಗೆ ಸಾಧ್ಯವಾಗುತ್ತಿಲ್ಲ ಎಂದು ನ್ಯಾಯಾಲಯಕ್ಕೆ ತಿಳಿಸಿದರು.

ಇದಕ್ಕೆ ಸ್ಪಂದಿಸಿದ ಸರ್ವೋಚ್ಚ ನ್ಯಾಯಾಲಯವು ಸೂಕ್ತವಾದ ಮನವಿಯನ್ನು ಮಾಡಿಕೊಳ್ಳಲು ಮತ್ತು ಸಂಬಂಧಿತ ಪ್ರಾಧಿಕಾರಕ್ಕೆ ಅರ್ಜಿಯನ್ನು ಸಲ್ಲಿಸಲು ಸೆಟ್ಲವಾಡ್ ಅವರಿಗೆ ಸ್ವಾತಂತ್ರವನ್ನು ನೀಡಿತು. ಇಂತಹ ಅರ್ಜಿಯನ್ನು ಸಲ್ಲಿಸಿದಾಗ ಕಾನೂನಿಗೆ ಅನುಗುಣವಾಗಿ ಅದನ್ನು ನಿರ್ವಹಿಸಲಾಗುತ್ತದೆ ಎಂದು ಅದು ಹೇಳಿತು.

ಗುಜರಾತ್ ದಂಗೆಗಳಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ಪಾತ್ರಕ್ಕಾಗಿ ಅವರ ವಿರುದ್ಧ ಪ್ರಕರಣವನ್ನು ದಾಖಲಿಸಲು ಕೆಳ ನ್ಯಾಯಾಲಯವು ನಿರಾಕರಿಸಿದ್ದನ್ನು ಪ್ರಶ್ನಿಸಿ ಝಕಿಯಾ ಜಾಫ್ರಿ ಅವರು ಸಲ್ಲಿಸಿದ್ದ ಅರ್ಜಿಯನ್ನು ಸರ್ವೋಚ್ಚ ನ್ಯಾಯಾಲಯವು ವಜಾಗೊಳಿಸಿದ ಮರುದಿನ,ಜೂ.25ರಂದು ಗುಜರಾತ ಪೊಲೀಸ್ನ ಭಯೋತ್ಪಾದನೆ ನಿಗ್ರಹ ದಳವು ಸೆಟ್ಲವಾಡ್ರನ್ನು ಬಂಧಿಸಿತ್ತು.

ಸೆಟ್ಲವಾಡ್ ಅವರ ಎನ್ಜಿಒ ದಂಗೆ ಸಂತ್ರಸ್ತರಿಗೆ ಕಾನೂನು ನೆರವು ಒದಗಿಸಲು ಶ್ರಮಿಸಿತ್ತು. ಅಮಾಯಕ ವ್ಯಕ್ತಿಗಳನ್ನು ಜೈಲಿಗಟ್ಟಲು ಸಂಚು ರೂಪಿಸಿದ್ದ ಆರೋಪವನ್ನು ಅವರ ವಿರುದ್ಧ ಹೊರಿಸಲಾಗಿದ್ದು,ಆಗಿನಿಂದ ಕಸ್ಟಡಿಯಲ್ಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News