ಶಾಸಕರಿಂದ ಆಹೋರಾತ್ರಿ ಪ್ರತಿಭಟನೆ: ದಿಲ್ಲಿ ವಿಧಾನ ಸಭೆಯ ಸಚಿವಾಲಯಕ್ಕೆ ಸಂಸದರಿಗೆ ನಿಷೇಧ

Update: 2022-08-30 18:17 GMT

ಹೊಸದಿಲ್ಲಿ, ಆ. 30: ಆಡಳಿತಾರೂಡ ಆಮ್ ಆದ್ಮಿ ಪಕ್ಷ ಹಾಗೂ ಪ್ರತಿಪಕ್ಷ ಬಿಜೆಪಿ ಶಾಸಕರು ವಿಧಾನ ಸಭೆ ಆವರಣದಲ್ಲಿ ಆಹೋರಾತ್ರಿ ಪ್ರತಿಭಟನೆ ನಡೆಸಿದ ಪರಿಣಾಮ ಪರಿಸ್ಥಿತಿ ಉದ್ವಿಗ್ನವಾದ ಹಿನ್ನೆಲೆಯಲ್ಲಿ ವಿಧಾನ ಸಭೆಯ ಸಚಿವಾಲಯದ ಆವರಣಕ್ಕೆ  ಸಂಸದರು ಹಾಗೂ ರಾಜಕೀಯ ಪಕ್ಷಗಳ ನಾಯಕರ ಪ್ರವೇಶ ನಿಷೇಧಿಸಿ ವಿಧಾನ ಸಭೆಯ ಸಚಿವಾಲಯ ಮಂಗಳವಾರ ಆದೇಶ ಹೊರಡಿಸಿದೆ.

ಬಿಜೆಪಿ ನಾಯಕ ಹಾಗೂ ಸಂಸದ ರಮೇಶ್ ಬಿದುರಿ ಅವರು ವಿಧಾನ ಸಭೆಯ ಸ್ವಾಗತ ಕಚೇರಿಗೆ ಆಗಮಿಸಿದರು ಹಾಗೂ ಸಚಿವಾಲಯದ  ಆದೇಶವನ್ನು ಲೆಕ್ಕಿಸದೆ ತನ್ನ ಪಕ್ಷದ ಎಲ್ಲ ಕಾರ್ಯಕರ್ತರು ಅಧಿವೇಶನದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದರು. ಆದರೆ, ಅವರನ್ನು ಗೇಟಿನಲ್ಲಿ ತಡೆ ಹಿಡಿಯಲಾಯಿತು. 

‘‘ಆಡಳಿತಾರೂಡ ಹಾಗೂ ಪ್ರತಿ ಪಕ್ಷದ ಸದಸ್ಯರು ವಿಧಾನ ಸಭೆಯ ಒಳಗೆ ಪ್ರತಿಭಟನೆ ನಡೆಸುತ್ತಿದ್ದಾರೆ. ಅಹಿತಕರ ಘಟನೆಗಳು ನಡೆಯದಂತೆ ವಿಧಾನ ಸಭೆಯ ಸಂಕೀರ್ಣದ ಸುತ್ತಮುತ್ತ ಭದ್ರತಾ ವ್ಯವಸ್ಥೆಯನ್ನು ಬಿಗಿಗೊಳಿಸಬೇಕು ಎಂದು ಉಪ ಸ್ವೀಕರ್ ಅಭಿಪ್ರಾಯಿಸಿದ್ದಾರೆ’’ಎಂದು ಆದೇಶ ತಿಳಿಸಿದೆ. 

ಶಾಸಕರೊಂದಿಗೆ ಬರುವ ಓರ್ವ ಸಂದರ್ಶಕನನ್ನು ಮಾತ್ರ ಗುರುತು ಪರಿಶೀಲನೆ ನಡೆಸಿದ ಬಳಿಕ ವಿಧಾನ ಸಭೆ ಸಂಕೀರ್ಣದ ಒಳಗೆ ಪ್ರವೇಶಿಸಲು ಅವಕಾಶ ನೀಡಲಾಗುವುದು ಎಂದು ಆದೇಶ ಹೇಳಿದೆ. ‘‘ಆದರೆ, ಭದ್ರತೆ ಹಾಗೂ ಪ್ರಸಕ್ತ ಉದ್ವಿಗ್ನ ಪರಿಸ್ಥಿತಿಯ ಹಿನ್ನೆಲೆಯಲ್ಲಿ ಸಂಸದರು ಅಥವಾ ರಾಜಕೀಯ ಪಕ್ಷಗಳ ನಾಯಕರು ವಿಧಾನ ಸಭೆ ಸಂಕೀರ್ಣಕ್ಕೆ ಪ್ರವೇಶಿಸಲು ಅವಕಾಶ ನೀಡುವುದಿಲ್ಲ’’ ಎಂದು ಅದು ಹೇಳಿದೆ.

ಈ ಆದೇಶದ ಪ್ರತಿಯನ್ನು ಶೇರ್ ಮಾಡಿರುವ ರೋಹಿಣಿಯ ಬಿಜೆಪಿ ಶಾಸಕ ವಿಜೇಂದರ್ ಗುಪ್ತಾ ಅವರು ಟ್ವಟರ್‌ನಲ್ಲಿ, ‘‘ಕೇಜ್ರಿವಾಲ್ ಅವರ ಸರಕಾರ ಹೆದರಿದೆ ! ವಿಧಾನ ಸಭೆಗೆ ಪ್ರವೇಶಿಸುವ ಸಂಸದರಿಗೆ ನಿಷೇಧ ಹೇರಲಾಗಿದೆ’’ ಎಂದಿದ್ದಾರೆ. 

ಈ ನಡುವೆ ಲೆಫ್ಟಿನೆಟ್ ಗವರ್ನರ್ ವಿ.ಕೆ. ಸೆಕ್ಸೇನಾ ಅವರ 6 ವರ್ಷಗಳ ಹಿಂದಿನ ಪ್ರಕರಣದ ತನಿಖೆ ನಡೆಸುವಂತೆ ಆಪ್ ಶಾಸಕರು ಆಗ್ರಹಿಸಿದರೆ, ಮನೀಶ್ ಸಿಸೋಡಿಯಾ ಹಾಗೂ ಸತ್ಯೇಂದ್ರ ಜೈನ್ ಅವರನ್ನು ವಜಾಗೊಳಿಸುವಂತೆ ಬಿಜೆಪಿ ನಾಯಕರು ಆಗ್ರಹಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News