ಗಾಝಾದ ಸಾಮಾಜಿಕ ಕಾರ್ಯಕರ್ತನಿಗೆ ಇಸ್ರೇಲ್ ನಲ್ಲಿ 12 ವರ್ಷ ಜೈಲುಶಿಕ್ಷೆ
ಜೆರುಸಲೇಂ, ಆ.30: ಅಂತರಾಷ್ಟ್ರೀಯ ಕ್ರಿಶ್ಚಿಯನ್ ದತ್ತಿಸಂಸ್ಥೆ ವರ್ಲ್ಡ್ ವಿಷನ್’ನ ಗಾಝಾ ವಿಭಾಗದ ನಿರ್ದೇಶಕ, ನೆರವು ಕಾರ್ಯಕರ್ತ ಮುಹಮ್ಮದ್ ಅಲ್-ಹಲಾಬಿ ವಿರುದ್ಧದ ಹಲವು ಭಯೋತ್ಪಾದನೆ ಪ್ರಕರಣಗಳಲ್ಲಿ ಅಪರಾಧ ಸಾಬೀತಾಗಿರುವುದರಿಂದ 12 ವರ್ಷ ಜೈಲುಶಿಕ್ಷೆ ವಿಧಿಸಲಾಗಿದೆ ಎಂದು ಇಸ್ರೇಲ್ನ ನ್ಯಾಯಾಲಯ ಮಂಗಳವಾರ ಘೋಷಿಸಿದೆ.
ಆದರೆ ಈ ಪ್ರಕರಣದಲ್ಲಿ ಆರೋಪಿಯ ವಿರುದ್ಧ ಯಾವುದೇ ಪುರಾವೆ ಕಂಡುಬಂದಿಲ್ಲ ಎಂದು ಸ್ವತಂತ್ರ ಪರಿಶೋಧನೆ ಮತ್ತು ತನಿಖೆಯಲ್ಲಿ ವ್ಯಕ್ತವಾಗಿತ್ತು ಎಂದು ಮಾಧ್ಯಮಗಳು ವರದಿ ಮಾಡಿವೆ. ತಮ್ಮ ದತ್ತಿ ಸಂಸ್ಥೆಗೆ ದೇಣಿಗೆಯಾಗಿ ಸಂದಾಯವಾಗಿದ್ದ ಕೋಟ್ಯಾಂತರ ಡಾಲರ್ ಮೊತ್ತವನ್ನು ಇಸ್ಲಾಮಿಕ್ ಹೋರಾಟಗಾರರ ಸಂಘಟನೆ ಹಮಾಸ್‌ಗೆ ಪೂರೈಸಿದ್ದರು ಎಂಬ ಆರೋಪದಲ್ಲಿ ಮುಹಮ್ಮದ್ ಹಲಾಬಿಯನ್ನು 2016ರಲ್ಲಿ ಬಂಧಿಸಲಾಗಿತ್ತು.
ಇದೀಗ ಹೊರಬಿದ್ದಿರುವ ತೀರ್ಪು ಪೆಲೆಸ್ತೀನೀಯರಿಗೆ ನೆರವು ಒದಗಿಸುತ್ತಿರುವ ಮಾನವೀಯ ಸಂಘಟನೆಗಳು ಮತ್ತು ಇಸ್ರೇಲ್ ನಡುವಿನ ಸಂಬಂಧವನ್ನು ಮತ್ತಷ್ಟು ಹದಗೆಡಿಸಬಹುದು . ಇಡೀ ಪ್ರಕ್ರಿಯೆಯಲ್ಲಿ ಅವರು ಅನ್ಯಾಯವನ್ನು ಮುಂದುವರಿಸಿಕೊಂಡು ಬಂದರು ಎಂದು ಹಲಾಬಿ ಪರ ವಕೀಲರು ಪ್ರತಿಕ್ರಿಯಿಸಿದ್ದಾರೆ.
ಹಲಾಬಿ ವಿರುದ್ಧದ ಆರೋಪವನ್ನು ನಿರಾಕರಿಸಿದ್ದ ವರ್ಲ್ಡ್ ವಿಷನ್, 2017ರಲ್ಲಿ ಸ್ವತಂತ್ರ ಪರಿಶೀಲನಾ ಸಮಿತಿ ರಚಿಸಿತ್ತು. ಆರೋಪದಲ್ಲಿ ಯಾವುದೇ ಹುರುಳಿಲ್ಲ ಮತ್ತು ಅಪರಾಧವನ್ನು ಸಾಬೀತುಪಡಿಸುವ ಯಾವುದೇ ಪುರಾವೆಗಳಿಲ್ಲ ಎಂದು ಸಮಿತಿ ತೀರ್ಪು ನೀಡಿತ್ತು. ಈ ಪ್ರಕರಣದ ಬಗ್ಗೆ ಆಸ್ಟ್ರೇಲಿಯಾ ನಡೆಸಿದ ತನಿಖೆಯಲ್ಲೂ ಇದೇ ಅಭಿಪ್ರಾಯ ವ್ಯಕ್ತವಾಗಿತ್ತು.
ಬಂಧನ, 6 ವರ್ಷದ ವಿಚಾರಣಾ ಪ್ರಕ್ರಿಯೆ, ಅನ್ಯಾಯದ ತೀರ್ಪು ಮತ್ತು ನ್ಯಾಯಾಲಯದ ಆದೇಶವು ಗಾಝಾ ಮತ್ತು ಪಶ್ಚಿಮ ದಂಡೆ ಪ್ರದೇಶದಲ್ಲಿ ಮಾನವೀಯ ಕಾರ್ಯಕ್ಕೆ ಅಡ್ಡಿಯಾಗುವ ಕ್ರಮಗಳ ಸಂಕೇತವಾಗಿದೆ. ಇದು ಪೆಲೆಸ್ತೀನಿಯರಿಗೆ ನೆರವಾಗುವ ಕಾರ್ಯದಲ್ಲಿ ತೊಡಗಿರುವ ಕಾರ್ಯಕರ್ತರು ಮತ್ತು ಸಂಘಟನೆಗಳ ಮೇಲೆ ವ್ಯತಿರಿಕ್ತ ಪರಿಣಾಮ ಬೀರಲಿದೆ ಎಂದು ವರ್ಲ್ಡ್ ವಿಷನ್ ಪ್ರತಿಕ್ರಿಯಿಸಿದೆ.
ನ್ಯಾಯಾಲಯದ ಆದೇಶವನ್ನು ಇಸ್ರೇಲ್‌ನ ಸುಪ್ರೀಂಕೋರ್ಟ್‌ನಲ್ಲಿ ಪ್ರಶ್ನಿಸಲಾಗುವುದು ಎಂದು ವಕೀಲರು ಹೇಳಿದ್ದಾರೆ.