×
Ad

ನಿವೃತ್ತ ಪ್ರಾಂಶುಪಾಲ ಪ್ರೊ.ರಾಧಾಕೃಷ್ಣ ಆಚಾರ್ಯ ನಿಧನ

Update: 2022-08-31 21:03 IST

ಉಡುಪಿ, ಆ.31: ಪೂರ್ಣಪ್ರಜ್ಞ ಸಂಧ್ಯಾ ಕಾಲೇಜಿನ ನಿವೃತ್ತ ಪ್ರಾಂಶುಪಾಲ, ಕನ್ನಡದ ಹಿರಿಯ ಪತ್ರಕರ್ತ ಹಾಗೂ ಬಹುಮುಖ ಪ್ರತಿಭೆಯ ಲೇಖಕ, ವಿದ್ವಾಂಸ ದಿ.ಪಾ.ವೆಂ.ಆಚಾರ್ಯರ ಪುತ್ರ ಪ್ರೊ.ರಾಧಾಕೃಷ್ಣ ಆಚಾರ್ಯ ಅವರು ಇಂದು ಸಂಜೆ ನಿಧನರಾದರು.

ಅವರಿಗೆ 83 ವರ್ಷ ಪ್ರಾಯವಾಗಿದ್ದು, ಪತ್ನಿ, ಪುತ್ರ ಹಾಗೂ ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ.

ಉಡುಪಿ ಪೂರ್ಣಪ್ರಜ್ಞ ಕಾಲೇಜಿನಲ್ಲಿ ಮೂರು ದಶಕಗಳಿಗೂ ಅಧಿಕ ಕಾಲ ವಿದ್ಯಾರ್ಥಿಗಳ ಅತ್ಯಂತ ಅಚ್ಚುಮೆಚ್ಚಿನ ಅರ್ಥಶಾಸ್ತ್ರ ಉಪನ್ಯಾಸಕರಾಗಿ ಬಳಿಕ ಪೂರ್ಣಪ್ರಜ್ಞ ಸಂಧ್ಯಾಕಾಲೇಜಿನ ಪ್ರಾಂಶುಪಾಲರಾಗಿ ಕರ್ತವ್ಯ ಸಲ್ಲಿಸಿದ್ದರು.  ಪ್ರಸ್ತುತ ಕಿದಿಯೂರಿನ ಎಸ್.ವಿ.ಎಸ್.ಟಿ ಪ್ರೌಢಶಾಲೆ ಹಾಗೂ ಅಂಬಲಪಾಡಿ- ಕಿದಿಯೂರು ವಿದ್ಯಾಸಮುದ್ರ ಆಂಗ್ಲ ಮಾಧ್ಯಮ ಶಾಲೆಯ ಸಂಚಾಲಕರಾಗಿದ್ದರು.

ವಿ.ಆರ್.ಕಿದಿಯೂರ್ ಅವರು ಸ್ಥಾಪಿಸಿದ್ದ ಕಿದಿಯೂರು ನಾಗಲಕ್ಷ್ಮೀ ಶ್ರೀನಿವಾಸ ಪಬ್ಲಿಕ್ ಚಾರಿಟೇಬಲ್ ಟ್ರಸ್ಟ್‌ನ ಕಾರ್ಯದರ್ಶಿಯಾಗಿ ಕಳೆದ ಎರಡು ದಶಕಗಳಿಂದ ಸೇವೆ ಸಲ್ಲಿಸುತ್ತಿರುವ ಪ್ರೊ.ಆಚಾರ್ಯ ಹಲವಾರು ಸಾಮಾಜಿಕ, ಶೈಕ್ಷಣಿಕ ಸಂಘಟನೆಗಳಲ್ಲಿ ತಮ್ಮನ್ನು ಸಕ್ರಿಯವಾಗಿ ತೊಡಗಿಸಿಕೊಂಡಿದ್ದರು.  

ಪ್ರೊ.ಆಚಾರ್ಯರ ನಿಧನಕ್ಕೆ ಪೂರ್ಣಪ್ರಜ್ಞ ಕಾಲೇಜು ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಡಾ. ಬಿ.ಎಂ. ಸೋಮಯಾಜಿ, ಕಾರ್ಯದರ್ಶಿ ತೇಜಸ್ವಿ ಶಂಕರ್, ಪ್ರಾಂಶುಪಾಲ ಡಾ. ಎ.ರಾಘವೇಂದ್ರ, ಯಕ್ಷಗಾನ ಕಲಾರಂಗದ ಅಧ್ಯಕ್ಷ ಎಂ. ಗಂಗಾಧರ ರಾವ್, ಕಾರ್ಯದರ್ಶಿ ಮುರಲಿ ಕಡೆಕಾರ್ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News