ಭಾರತದಲ್ಲಿ ದಿನವೊಂದಕ್ಕೆ 86 ಅತ್ಯಾಚಾರಗಳು, ಒಂದು ಗಂಟೆಯಲ್ಲಿ ಮಹಿಳೆಯರ ವಿರುದ್ಧ 49 ಅಪರಾಧ ಪ್ರಕರಣಗಳು: NCRB ವರದಿ

Update: 2022-08-31 17:50 GMT

ಹೊಸದಿಲ್ಲಿ: ಭಾರತದಲ್ಲಿ 2021ರಲ್ಲಿ 31,677 ಅತ್ಯಾಚಾರ ಪ್ರಕರಣಗಳು ದಾಖಲಾಗಿದ್ದು,  ಪ್ರತಿದಿನ ಸರಾಸರಿ 86 ಪ್ರಕರಣಗಳಂತೆ ಪ್ರತಿ ಗಂಟೆಗೆ ಸುಮಾರು 49 ಮಹಿಳೆಯರ ವಿರುದ್ಧ ಅಪರಾಧ ಪ್ರಕರಣಗಳು ದಾಖಲಾಗಿವೆ ಎಂದು NCRB(National Crime Records Bureau) ಯ ದೇಶದಲ್ಲಿನ ಅಪರಾಧಗಳ ಇತ್ತೀಚಿನ ವರದಿ ತಿಳಿಸಿದೆ.

2020 ರಲ್ಲಿ ಅತ್ಯಾಚಾರ ಪ್ರಕರಣಗಳ(Rape) ಸಂಖ್ಯೆ 28,046 ಆಗಿದ್ದರೆ, 2019 ರಲ್ಲಿ ಇದು 32,033 ಆಗಿದೆ ಎಂದು ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೋದ 'ಕ್ರೈಮ್ ಇನ್ ಇಂಡಿಯಾ 2021' ವರದಿ ತೋರಿಸಿದೆ. ಎನ್‌ಸಿಆರ್‌ಬಿ ಭಾರತೀಯ ಗೃಹ ಸಚಿವಾಲಯದ(Indian Home ministry) ಅಡಿಯಲ್ಲಿ ಕಾರ್ಯನಿರ್ವಹಿಸುತ್ತದೆ.

ರಾಜ್ಯಗಳ ಪೈಕಿ ರಾಜಸ್ಥಾನ (6,337) ಅಗ್ರಸ್ಥಾನದಲ್ಲಿದ್ದರೆ, ಮಧ್ಯಪ್ರದೇಶ (2,947), ಮಹಾರಾಷ್ಟ್ರ (2,496) ಮತ್ತು ಉತ್ತರ ಪ್ರದೇಶ (2,845), 2021 ರಲ್ಲಿ ದಿಲ್ಲಿಯಲ್ಲಿ 1,250 ಅತ್ಯಾಚಾರ ಪ್ರಕರಣಗಳು ದಾಖಲಾಗಿವೆ ಎಂದು ಅದು ಪ್ರತಿಪಾದಿಸಿದೆ.

ಅತ್ಯಾಚಾರದ ಅಪರಾಧದ ಪ್ರಮಾಣ (ಪ್ರತಿ ಲಕ್ಷ ಜನಸಂಖ್ಯೆಗೆ) ರಾಜಸ್ಥಾನ (16.4) ನಂತರ ಚಂಡೀಗಢ (13.3), ದಿಲ್ಲಿ (12.9), ಹರಿಯಾಣ (12.3) ಮತ್ತು ಅರುಣಾಚಲ ಪ್ರದೇಶ (11.1) ನಲ್ಲಿ ಅತಿ ಹೆಚ್ಚು ಪ್ರಕರಣಗಳು ವರದಿಯಾಗಿದೆ. 

2021 ರಲ್ಲಿ ದೇಶದಾದ್ಯಂತ 'ಮಹಿಳೆಯರ ವಿರುದ್ಧದ ಅಪರಾಧಗಳ'( Crime Against Women) ಒಟ್ಟಾರೆ 4,28,278 ಪ್ರಕರಣಗಳನ್ನು ದಾಖಲಿಸಲಾಗಿದೆ. 2020 ರಲ್ಲಿ ಮಹಿಳೆಯರ ವಿರುದ್ಧದ ಅಪರಾಧಗಳ ಸಂಖ್ಯೆ 3,71,503 ಮತ್ತು 2019 ರಲ್ಲಿ 4,05,326 ಆಗಿತ್ತು.

ಮಹಿಳೆಯರ ವಿರುದ್ಧದ ಅಪರಾಧಗಳಲ್ಲಿ ಅತ್ಯಾಚಾರ, ಅತ್ಯಾಚಾರ ಮತ್ತು ಕೊಲೆ, ವರದಕ್ಷಿಣೆ ಕಿರುಕುಳ, ಆಸಿಡ್ ದಾಳಿಗಳು, ಆತ್ಮಹತ್ಯಾ ಪ್ರಚೋದನೆ, ಅಪಹರಣ, ಬಲವಂತದ ಮದುವೆ, ಮಾನವ ಕಳ್ಳಸಾಗಣೆ, ಆನ್‌ಲೈನ್ ಕಿರುಕುಳ ಮುಂತಾದ ಅಪರಾಧಗಳು ಸೇರಿವೆ.

2021 ರಲ್ಲಿ, ಮಹಿಳೆಯರ ವಿರುದ್ಧದ ಅಪರಾಧಗಳ ಗರಿಷ್ಠ ಪ್ರಕರಣಗಳು ಉತ್ತರ ಪ್ರದೇಶದಲ್ಲಿ (56,083) ದಾಖಲಾಗಿವೆ. ನಂತರ ರಾಜಸ್ಥಾನ (40,738), ಮಹಾರಾಷ್ಟ್ರ (39,526), ​​ಪಶ್ಚಿಮ ಬಂಗಾಳ (35,884) ಮತ್ತು ಒಡಿಶಾ 31,352 ಎಂದು ಎನ್‌ಸಿಆರ್‌ಬಿ ದಾಖಲೆಗಳು ತೋರಿಸಿದೆ.

ಆದಾಗ್ಯೂ, ಮಹಿಳೆಯರ ವಿರುದ್ಧದ ಅಪರಾಧಗಳ ಪ್ರಮಾಣಕ್ಕೆ ಸಂಬಂಧಿಸಿದಂತೆ, 2021 ರ ಪಟ್ಟಿಯಲ್ಲಿ ಅಸ್ಸಾಂ (168.3%) ಅಗ್ರಸ್ಥಾನದಲ್ಲಿದ್ದು, ದಿಲ್ಲಿ (147%), ಒಡಿಶಾ (137%), ಹರಿಯಾಣ (119.7%) ಮತ್ತು ತೆಲಂಗಾಣ (111.2%) ನಂತರದ ಸ್ಥಾನದಲ್ಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News