ಶ್ರೀಲಂಕಾಕ್ಕೆ 2.9 ಶತಕೋಟಿ ಡಾಲರ್ ಸಾಲ: ಐಎಂಎಫ್ ಪ್ರಾಥಮಿಕ ಒಪ್ಪಿಗೆ

Update: 2022-09-01 16:46 GMT
PHOTO : THE INDIAN EXPRESS

ಕೊಲಂಬೊ, ಸೆ.೧: ತೀವ್ರ ಆರ್ಥಿಕ ಬಿಕ್ಕಟ್ಟಿನಿಂದ ಕಂಗೆಟ್ಟಿರುವ ಶ್ರೀಲಂಕಾವು ಅಂತರಾಷ್ಟ್ರೀಯ ಹಣಕಾಸು ಸಂಸ್ಥೆ(ಐಎಂಎಫ್)ನಿಂದ ಸುಮಾರು ೨.೯ ಶತಕೋಟಿ ಡಾಲರ್ ಮೊತ್ತದ ಸಾಲ ಪಡೆಯುವ ಬಗ್ಗೆ ಪ್ರಾಥಮಿಕ ಒಪ್ಪಂದವನ್ನು ಮಾಡಿಕೊಂಡಿದೆ ಎಂದು ಮೂಲಗಳು ಹೇಳಿವೆ.

ಶ್ರೀಲಂಕಾದ ಹೊಸ ನಿಧಿ ಬೆಂಬಲಿತ ಕಾರ್ಯಕ್ರಮದ ಉದ್ದೇಶಗಳು ಸ್ಥೂಲ ಆರ್ಥಿಕ ಸ್ಥಿರತೆ ಮತ್ತು ಸಾಲದ ಸಮರ್ಥನೀಯತೆಯನ್ನು ಪುನಃ ಸ್ಥಾಪಿಸುವುದಾಗಿದೆ ಎಂದು ಐಎಂಎಫ್ ಗುರುವಾರ ಹೇಳಿಕೆ ನೀಡಿದೆ. ಐಎಂಎಫ್‌ನ ವಿಸ್ತರಿತ ನಿಧಿ ಯೋಜನೆಯಡಿ ರೂಪಿಸಲಾಗಿರುವ ೪೮ ತಿಂಗಳಾವಧಿಯ ಈ ಒಪ್ಪಂದವು ಐಎಂಎಫ್‌ನ ಆಡಳಿತ ಮತ್ತು ಅದರ ಕಾರ್ಯಕಾರಿ ಮಂಡಳಿಯ ಅನುಮೋದನೆಗೆ ಒಳಪಟ್ಟಿರುತ್ತದೆ. ‌

ಶ್ರೀಲಂಕಾದ ಅಧಿಕೃತ ಸಾಲಗಾರರಿಂದ ಭರವಸೆಗಳನ್ನು ಪಡೆಯುವ ಅಗತ್ಯವಿದೆ ಮತ್ತು ಖಾಸಗಿ ಸಾಲಗಾರರೊಂದಿಗೆ ಸಹಯೋಗದ ಒಪ್ಪಂದವನ್ನು ರೂಪಿಸಲು ಪ್ರಯತ್ನ ಮಾಡಿರುವುದನ್ನು ಖಚಿತಪಡಿಸಿಕೊಳ್ಳಬೇಕಾಗಿದೆ. ಶ್ರೀಲಂಕಾದ ಸಾಲಗಾರರಿಂದ(ಸಾಲ ನೀಡುವ ದೇಶಗಳು) ಸಾಲದ ನೆರವು ಮತ್ತು ಬಹುಪಕ್ಷೀಯ ಪಾಲುದಾರರಿಂದ ಹೆಚ್ಚುವರಿ ಆರ್ಥಿಕ ನೆರವು ಸಾಲದ ಸುಸ್ಥಿರತೆ ಮತ್ತು ನಿಕಟ ಹಣಕಾಸು ಅಂತರವನ್ನು ಖಚಿತಪಡಿಸಿಕೊಳ್ಳಲು ನೆರವಾಗುತ್ತದೆ  ಎಂದು ಐಎಂಎಫ್ ಹೇಳಿದೆ.

ಐಎಂಎಫ್ ಕಾರ್ಯಕ್ರಮವು ಹಣಕಾಸಿನ ಬಲವರ್ಧನೆಯನ್ನು ಬೆಂಬಲಿಸಲು ಸರಕಾರದ ಆದಾಯವನ್ನು ಹೆಚ್ಚಿಸುವ ಗುರಿಯನ್ನು ಹೊಂದಿದೆ. ಇಂಧನ ಮತ್ತು ವಿದ್ಯುತ್‌ಗೆ ಹೊಸ ದರ ನಿಗದಿ, ಸಾಮಾಜಿಕ ವೆಚ್ಚವನ್ನು ಹೆಚ್ಚಿಸುವುದು, ಕೇಂದ್ರೀಯ ಬ್ಯಾಂಕ್ ಸ್ವಾಯತ್ತತೆಯನ್ನು ಹೆಚ್ಚಿಸುವುದು, ಖಾಲಿಯಾದ ವಿದೇಶಿ ನಿಕ್ಷೇಪಗಳನ್ನು ಮರುನಿರ್ಮಾಣ ಮಾಡುವುದು, ಪ್ರಮುಖ ತೆರಿಗೆ ಸುಧಾರಣೆ ಜಾರಿಗೊಳಿಸುವುದನ್ನು ಒಳಗೊಂಡಿದೆ. ಈ ಸುಧಾರಣೆಗಳು ವೈಯಕ್ತಿಕ ಆದಾಯ ತೆರಿಗೆಯನ್ನು ಹೆಚ್ಚು ಪ್ರಗತಿ ಪರವಾಗಿಸುವುದು ಮತ್ತು ಕಾರ್ಪೊರೇಟ್ ಆದಾಯ ತೆರಿಗೆ ಮತ್ತು ವ್ಯಾಟ್‌ಗಾಗಿ ತೆರಿಗೆ ಮೂಲವನ್ನು ವಿಸ್ತರಿಸುವುದನ್ನು ಒಳಗೊಂಡಿರುತ್ತದೆ ಎಂದು ಹೇಳಿಕೆ ತಿಳಿಸಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News