ಅಫ್ಘಾನ್ ಮಸೀದಿಯಲ್ಲಿ ಸ್ಫೋಟ: ಧರ್ಮಗುರು ಸಹಿತ ೧೪ ಮಂದಿ ಮೃತ್ಯು; ವರದಿ

Update: 2022-09-02 16:26 GMT

ಕಾಬೂಲ್, ಸೆ.೨: ಪಶ್ಚಿಮ ಅಫ್ಘಾನಿಸ್ತಾನದ ಹೆರಾತ್ ನಗರದಲ್ಲಿನ ಮಸೀದಿಯೊಂದರ ಹೊರಭಾಗದಲ್ಲಿ ಶುಕ್ರವಾರ ಸಂಭವಿಸಿದ ಶಕ್ತಿಶಾಲಿ ಬಾಂಬ್ ಸ್ಫೋಟದಲ್ಲಿ ಮಸೀದಿಯ ಧರ್ಮಗುರು ಸಹಿತ ೧೪ ಮಂದಿ ಮೃತಪಟ್ಟಿರುವುದಾಗಿ ಮೂಲಗಳನ್ನು ಉಲ್ಲೇಖಿಸಿ ಅಲ್‌ ಜಝೀರಾ  ವರದಿ ಮಾಡಿದೆ.

‌ಶುಕ್ರವಾರದ ಪ್ರಾರ್ಥನೆಗೂ ಮುನ್ನ ಗಝರ್ಗ ಮಸೀದಿಯಲ್ಲಿ ಬಾಂಬ್ ಸ್ಫೋಟಿಸಿದೆ ಎಂದು ಸ್ಥಳೀಯ ಟೋಲೊನ್ಯೂಸ್ ವರದಿ ಮಾಡಿದೆ. ಇದು ದಾಳಿ ಪ್ರಕರಣವಾಗಿದೆ. ಮಸೀದಿಯನ್ನು ಪ್ರವೇಶಿಸುತ್ತಿದ್ದ ಧರ್ಮಗುರು ಮುಜೀಬರ್ ರಹ್ಮಾನ್  ಅನ್ಸಾರಿ, ಅವರ ಭದ್ರತಾ ಸಿಬಂದಿ ಮತ್ತು ಕೆಲವು ನಾಗರಿಕರು ಮೃತಪಟ್ಟಿರುವುದಾಗಿ ಹೆರಾತ್ ನಗರದ ಪೊಲೀಸ್ ವಕ್ತಾರ ಮಹ್ಮೂದ್ ರಸೋಲಿ ಹೇಳಿದ್ದಾರೆ. ಮುಜಾಹಿದ್ ಅನ್ಸಾರಿಯವರ ಸಾವಿನ ಬಗ್ಗೆ ತಾಲಿಬಾನ್ ವಕ್ತಾರ ಝಬೀಯುಲ್ಲಾ  ಸಂತಾಪ ಸೂಚಿಸಿದ್ದು, ದಾಳಿಕೋರರನ್ನು ಪತ್ತೆಹಚ್ಚಿ ಶಿಕ್ಷಿಸಲಾಗುವುದು ಎಂದು ಟ್ವೀಟ್ ಮಾಡಿದ್ದಾರೆ. ಸ್ಫೋಟದ ಹೊಣೆಯನ್ನು ತಕ್ಷಣಕ್ಕೆ ಯಾವುದೇ ಸಂಘಟನೆ ವಹಿಸಿಕೊಂಡಿಲ್ಲ ಎಂದು ಅಧಿಕಾರಿಗಳು ಹೇಳಿದ್ದಾರೆ.

ತಾಲಿಬಾನ್ ಬೆಂಬಲಿಗರಾಗಿದ್ದ ಪ್ರಭಾವೀ ಧರ್ಮಗುರು ಮುಜೀಬರ್  ಅನ್ಸಾರಿ, ಜೂನ್ನಲ್ಲಿ ನಡೆದಿದ್ದ ವಿದ್ವಾಂಸರು ಮತ್ತು ಹಿರಿಯರ ಸಭೆಯಲ್ಲಿ ತಾಲಿಬಾನ್ ಆಡಳಿತವನ್ನು ಬಲವಾಗಿ ಸಮರ್ಥಿಸಿಕೊಂಡಿದ್ದರು ಮತ್ತು ತಾಲಿಬಾನ್ ಆಡಳಿತದ ವಿರುದ್ಧ ಧ್ವನಿ ಎತ್ತುವವರನ್ನು ಕಟುವಾಗಿ ಖಂಡಿಸಿದ್ದರು. ಸರಕಾರದ ವಿರುದ್ಧ ಸಣ್ಣ ತಪ್ಪು ಮಾಡಿದರೂ ಅವರ ಶಿರಚ್ಛೇದನ ನಡೆಸಬೇಕು ಎಂಬ ಹೇಳಿಕೆ ನೀಡಿದ್ದರು. ಮುಜೀಬರ್ ಅನ್ಸಾರಿ  ಒಂದು ತಿಂಗಳ ಅವಧಿಯೊಳಗೆ ಅಫ್ಘಾನ್ನಲ್ಲಿ ಬಾಂಬ್ ಸ್ಫೋಟದಲ್ಲಿ ಹತರಾದ ೨ನೇ ಧರ್ಮಗುರು ಆಗಿದ್ದು, ಆಗಸ್ಟ್ನಲ್ಲಿ ನಡೆದ ಸ್ಫೋಟದಲ್ಲಿ ರಹೀಮುಲ್ಲಾ ಹಖ್ಖಾನಿ ಸಾವನ್ನಪ್ಪಿದ್ದರು.  

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News