​ಪಶ್ಚಿಮಬಂಗಾಳ: ಬಿಜೆಪಿ ನಾಯಕ ಪಾಲ್ಗೊಂಡ ರ‍್ಯಾಲಿಯಲ್ಲಿ ಮಹಿಳೆಗೆ ಥಳಿತ

Update: 2022-09-02 18:04 GMT

ಕೋಲ್ಕತಾ, ಸೆ. 2: ಇಲ್ಲಿನ ಖರಗ್‌ಪುರದಲ್ಲಿ ಶುಕ್ರವಾರ ನಡೆದ ರ‍್ಯಾಲಿಯ ಸಂದರ್ಭ ಬಿಜೆಪಿ ನಾಯಕ ದಿಲೀಪ್ ಘೋಷ್ ಎದುರಲ್ಲೇ ಮಹಿಳೆಯೋರ್ವರಿಗೆ ಥಳಿಸಿದ ಹಾಗೂ ಕಟ್ಟಿ ಹಾಕಿದ ಘಟನೆ ನಡೆದಿದೆ. 

ಮಹಿಳೆಯನ್ನು ಶೆಫಾಲಿ ರಾಯ್ ಎಂದು ಗುರುತಿಸಲಾಗಿದೆ. ಅವರು ರೈಲ್ವೆಯಲ್ಲಿ ಉದ್ಯೋಗ ತೆಗೆಸಿ ಕೊಡುವುದಾಗಿ ಭರವಸೆ ನೀಡಿ ಜನರಿಗೆ ವಂಚಿಸಿದ್ದಾರೆ ಎಂದು ಆರೋಪಿಸಲಾಗಿದೆ.

ಪಶ್ಚಿಮಬಂಗಾಳದ ಬಿಜೆಪಿ ಮಾಜಿ ವರಿಷ್ಠ ಹಾಗೂ ಮಾಜಿ ಸಂಸದ ದಿಲೀಪ್ ಘೋಷ್ ಮಾತನಾಡಿದ ರ‍್ಯಾಲಿಯಲ್ಲಿ ಈ ಘಟನೆ ನಡೆದಿದೆ. ಖರಗ್‌ಪುರ ಗೋಲ್‌ಬಝಾರ್‌ನಲ್ಲಿರುವ ಕಾರ್ಮಿಕ ಒಕ್ಕೂಟ ಇಂಡಿಯನ್ ರೈಲ್ವೆ ಮಾಲ್ಗುಡಮ್‌ನಲ್ಲಿ ಶ್ರಮಿಕ್ ಸಂಘ ಕರೆ ನೀಡಿದ್ದ ಕಾರ್ಯಕ್ರಮದಲ್ಲಿ ಅವರು ಪಾಲ್ಗೊಂಡಿದ್ದರು.

ಘಟನೆಯ ವೀಡಿಯೊದಲ್ಲಿ ಮಹಿಳೆಯ ಕೈ ಕಟ್ಟಿರುವುದು ಹಾಗೂ ಮಹಿಳೆಯರು, ಪುರುಷರು ಸುತ್ತುವರಿದಿರುವುದು ಕಂಡು ಬಂದಿದೆ. ಮಹಿಳೆಯನ್ನು ಕಟ್ಟಿ ಹಾಕುತ್ತಿರುವುದನ್ನು ಟಿ ಶರ್ಟ್ ಧರಿಸಿದ ಪುರುಷರು ನೋಡುತ್ತಿರುವುದು ವೀಡಿಯೊದಲ್ಲಿ ದಾಖಲಾಗಿದೆ. ಹಣ ತೆಗೆದುಕೊಂಡ ಬಳಿಕ ತಿಂಗಳ ಕಾಲ ಮಹಿಳೆ  ತಲೆಮರೆಸಿಕೊಂಡಿದ್ದಾರೆ ಎಂದು ಹಲ್ಲೆ ನಡೆಸಿದ ಗುಂಪು ಪತ್ರಕರ್ತರಿಗೆ ತಿಳಿಸಿದೆ.

ಮಹಿಳೆಯನ್ನು ಪೊಲೀಸರು ರಕ್ಷಿಸಿದ್ದಾರೆ. ಈ ಸಂದರ್ಭ ಮಹಿಳೆ, ತಾನು ಕೂಡ ಸಂತ್ರಸ್ತೆ. ತಾನು ಯಾವುದೇ ತಪ್ಪು ಎಸಗಿಲ್ಲ ಎಂದು ತಿಳಿಸಿದ್ದಾರೆ. ಘಟನೆ ಬಗ್ಗೆ ವಿಚಾರಿಸಿದಾಗ ಘೋಷ್ ಅವರು, ತನಗೆ ಅದರ ಬಗ್ಗೆ ಏನೂ ಗೊತ್ತಿಲ್ಲ. ಅದು ಸ್ಥಳೀಯ ಸಮಸ್ಯೆ ಎಂದು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News