×
Ad

ವಿಮಾನ ಟೇಕಾಫ್‌ಗಾಗಿ ಬಲವಂತ: ಇಬ್ಬರು ಬಿಜೆಪಿ ಸಂಸದರ ವಿರುದ್ಧ ಪ್ರಕರಣ ದಾಖಲು

Update: 2022-09-03 12:49 IST

ಹೊಸದಿಲ್ಲಿ: ಬಿಜೆಪಿ ಸಂಸದರಾದ ನಿಶಿಕಾಂತ್ ದುಬೆ,(Nishikant Dubey) ಮನೋಜ್ ತಿವಾರಿ (Manoj Tiwary) ಮತ್ತು ಇತರ ಏಳು ಮಂದಿ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ. ಅವರು ಜಾರ್ಖಂಡ್‌ನ ದಿಯೋಘರ್ ವಿಮಾನ ನಿಲ್ದಾಣದಲ್ಲಿ ತಮ್ಮ ಚಾರ್ಟರ್ಡ್ ಫ್ಲೈಟ್(Chartered Flight) ಅನ್ನು ಟೇಕ್‌ಆಫ್‌(Take-off) ಮಾಡಬೇಕೆಂದು ಬಲವಂತಪಡಿಸಿದ್ದರು ಎಂದು indiatoday.in ವರದಿ ಮಾಡಿದೆ.

ವಿಮಾನ ನಿಲ್ದಾಣದ ಡಿಎಸ್ಪಿ ಸುಮನ್ ಅನನ್ ಅವರ ದೂರಿನ ಆಧಾರದ ಮೇಲೆ ಬಿಜೆಪಿ ನಾಯಕರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ನಿಶಿಕಾಂತ್ ದುಬೆ, ಮನೋಜ್ ತಿವಾರಿ ಮತ್ತು ವಿಮಾನ ನಿಲ್ದಾಣದ ನಿರ್ದೇಶಕರು ಸೇರಿದಂತೆ ಒಂಬತ್ತು ಜನರ ಮೇಲೆ ಇತರರ ಜೀವ ಅಥವಾ ಸುರಕ್ಷತೆಗೆ ಅಪಾಯ ಮತ್ತು ಕ್ರಿಮಿನಲ್ ಅತಿಕ್ರಮಣದ ಆರೋಪ ಹೊರಿಸಲಾಗಿದೆ.

ಎಫ್ಐಆರ್ ಪ್ರಕಾರ, ಆಗಸ್ಟ್ 31 ರಂದು, ಗೊಡ್ಡಾದ ಲೋಕಸಭಾ ಸಂಸದ ನಿಶಿಕಾಂತ್ ದುಬೆ, ಅವರ ಮಗ ಕನಿಷ್ಕ್ ಕಾಂತ್ ದುಬೆ, ಮಹಿಕಾಂತ್ ದುಬೆ, ಸಂಸದ ಮನೋಜ್ ತಿವಾರಿ, ಮುಖೇಶ್ ಪಾಠಕ್, ದೇವತಾ ಪಾಂಡೆ ಮತ್ತು ಪಿಂಟು ತಿವಾರಿ ಅವರು ಹೆಚ್ಚಿನ ಭದ್ರತೆಯ ಏರ್ ಟ್ರಾಫಿಕ್ ಕಂಟ್ರೋಲ್ (ಎಟಿಸಿ) ಪ್ರವೇಶಿಸಿದರು. ದಿಯೋಘರ್ ವಿಮಾನ ನಿಲ್ದಾಣದಲ್ಲಿ ಅನುಮತಿಯಿಲ್ಲದೆ ತಮ್ಮ ಪ್ರಭಾವವನ್ನು ಬಳಸಿ ತಮ್ಮ ಚಾರ್ಟರ್ಡ್ ವಿಮಾನಕ್ಕೆ ಟೇಕಾಫ್‌ ಮಾಡಲು ಅನುಮತಿ ನೀಡುವಂತೆ ಅಧಿಕಾರಿಗಳಿಗೆ ಒತ್ತಡ ಹೇರಿದರು ಎಂದು ಉಲ್ಲೇಖಿಸಲಾಗಿದೆ.

ಆದರೆ, ನೂತನವಾಗಿ ಉದ್ಘಾಟನೆಗೊಂಡ ವಿಮಾನ ನಿಲ್ದಾಣವನ್ನು ರಾತ್ರಿ ಕಾರ್ಯಾಚರಣೆಗೆ ಇನ್ನೂ ತೆರವುಗೊಳಿಸಲಾಗಿಲ್ಲ. ವಿಮಾನ ನಿಲ್ದಾಣದಲ್ಲಿ ವಿಮಾನ ಸೇವೆಗಳನ್ನು ಸದ್ಯ ಸೂರ್ಯಾಸ್ತದ 30 ನಿಮಿಷಗಳ ಮೊದಲಿನವರೆಗೆ ಮಾತ್ರ ಅನುಮತಿಸಲಾಗಿದೆ. ಸಮಯ ಮುಗಿದ ಬಳಿಕವೂ ಟೇಕಾಫ್‌ ಗೆ ಅನುಮತಿ ನೀಡಬೇಕೆಂದು ಇವರು ಪಟ್ಟು ಹಿಡಿದು ಟೇಕಾಫ್‌ ಮಾಡಿಸಿದ್ದರು ಎನ್ನಲಾಗಿದೆ.

ದೂರುದಾರರ ಹೇಳಿಕೆಯ ಪ್ರಕಾರ, ಘಟನೆಯ ದಿನ ಸೂರ್ಯಾಸ್ತದ ಸಮಯ ಸಂಜೆ 6:03 ಆಗಿತ್ತು. ಬಿಜೆಪಿ ನಾಯಕರೊಂದಿಗೆ ಚಾರ್ಟರ್ಡ್ ಫ್ಲೈಟ್ ಸಂಜೆ 6:17ಕ್ಕೆ ಟೇಕಾಫ್ ಆಗಿತ್ತು.

ತನ್ನ ವಿರುದ್ಧದ ಎಫ್‌ಐಆರ್‌ಗೆ ಪ್ರತಿಕ್ರಿಯಿಸಿದ ನಿಶಿಕಾಂತ್ ದುಬೆ ಇಂಡಿಯಾ ಟುಡೇಗೆ, “ವಿಮಾನ ನಿಲ್ದಾಣ ಪ್ರಾಧಿಕಾರವು ಆಕ್ಷೇಪಿಸಲಿಲ್ಲ. ನಾವು ವಿಮಾನ ನಿಲ್ದಾಣದ ನಿರ್ದೇಶಕರಿಂದ ಅನುಮತಿ ಪಡೆದಿದ್ದೇವೆ, ನಾನು ಪ್ರಕರಣದ ವಿರುದ್ಧ ಹೋರಾಡಲು ಸಿದ್ಧನಿದ್ದೇನೆ" ಎಂದು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News