ಗುಜರಾತ್ ನಲ್ಲಿ ಬಿಜೆಪಿಗೆ ಸೋಲುವ ಆತಂಕ: ಅರವಿಂದ ಕೇಜ್ರಿವಾಲ್

Update: 2022-09-03 07:48 GMT
Photo:PTI

ಅಹಮದಾಬಾದ್: ಬಿಜೆಪಿ ಈ ವರ್ಷಾಂತ್ಯದಲ್ಲಿ ನಡೆಯಲಿರುವ ರಾಜ್ಯ ಚುನಾವಣೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ತವರು ರಾಜ್ಯವನ್ನು ಕಳೆದುಕೊಳ್ಳುವ ಆತಂಕದಲ್ಲಿದೆ ಎಂದು ದಿಲ್ಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ (Delhi Chief Minister Arvind Kejriwal)ಅವರು ಶನಿವಾರ ಹೇಳಿದ್ದಾರೆ,

ನಮ್ಮ ನಾಯಕರ ಮೇಲೆ  ಇತ್ತೀಚಿನ ದಾಳಿಯಿಂದ "ಹೆಚ್ಚುತ್ತಿರುವ ಗೂಂಡಾಗಿರಿ" ಬಗ್ಗೆ  ಜನತೆ "ಭಾರೀ ಆಕ್ರೋಶಗೊಂಡಿದ್ದಾರೆ" ಎಂದು ಆಮ್ ಆದ್ಮಿ ಪಕ್ಷದ (ಎಎಪಿ) ನಾಯಕ  ಹೇಳಿದ್ದಾರೆ.

"ಮನೋಜ್ ಸೋರಥಿಯಾ ಮೇಲಿನ ದಾಳಿಯ ಬಗ್ಗೆ ತಿಳಿದ ಗುಜರಾತ್‌ನ ಆರು ಕೋಟಿ ಜನರು ತುಂಬಾ ಕೋಪಗೊಂಡಿದ್ದಾರೆ. ಅವರು ದೇವರ ಮುಂದೆಯೇ ಮನೋಜ್ ಅವರ ತಲೆ ಒಡೆದರು. ಇದು ನಮ್ಮ ದೇಶದ ಸಂಸ್ಕೃತಿಯಲ್ಲ. ಇದು ಹಿಂದೂ ಸಂಸ್ಕೃತಿಯಲ್ಲ. ಇದು ಗುಜರಾತ್‌ನ ಸಂಸ್ಕೃತಿಯಲ್ಲ’’ ಎಂದು ಎಎಪಿ ಮುಖ್ಯಸ್ಥ ಕೇಜ್ರಿವಾಲ್ ರಾಜ್‌ಕೋಟ್‌ನಲ್ಲಿ ಸುದ್ದಿಗೋಷ್ಠಿಯಲ್ಲಿ ಹೇಳಿದರು.

"ದಾಳಿಯಾದಾಗಿನಿಂದಲೂ ಸೂರತ್‌ನ ಜನರು ತುಂಬಾ ಕೋಪಗೊಂಡಿದ್ದಾರೆ. ನಾವು ಸೂರತ್‌ನಲ್ಲಿ ಸಮೀಕ್ಷೆ ನಡೆಸಿದ್ದೇವೆ. 12 ಸ್ಥಾನಗಳಲ್ಲಿ ಎಎಪಿ ಏಳು ಸ್ಥಾನಗಳನ್ನು ಗೆಲ್ಲುತ್ತಿದೆ ಎಂದು ಕಂಡುಕೊಂಡಿದ್ದೇವೆ" ಎಂದು ಅವರು ಹೇಳಿದರು.

ಮನೋಜ್ ಸೋರಥಿಯಾ ದಾಳಿಗೆ ಒಳಗಾದ ಸೂರತ್‌ನ ಗಣೇಶ್ ಪೆಂಡಾಲ್ ನಲ್ಲಿ ಇಂದು ಸಂಜೆ ನಾನು ಆರತಿ ಮಾಡುವೆ ಎಂದು ಕೇಜ್ರಿವಾಲ್ ಪ್ರಕಟಿಸಿದರು.

"ನೀವು ಸೋಲುವ ಭಯದಲ್ಲಿದ್ದಾಗ ಈ  ರೀತಿಯ ದಾಳಿ ಮಾಡುತ್ತೀರಿ. ಬಿಜೆಪಿ ಸೋಲಿನ ಆತಂಕದಲ್ಲಿದೆ. ನಾನು ಅವರಿಗೆ ಹೇಳಲು ಬಯಸುತ್ತೇನೆ, ಇಲ್ಲಿಯವರೆಗೆ ನೀವು ಕಾಂಗ್ರೆಸ್ ಜೊತೆ ವ್ಯವಹರಿಸುತ್ತಿದ್ದೀರಿ, ಆದರೆ ನಾವು ಕಾಂಗ್ರೆಸ್ ಅಲ್ಲ. ನಾವು ಸರ್ದಾರ್ ಪಟೇಲ್ ಹಾಗೂ  ಭಗತ್ ಸಿಂಗ್ ಅವರನ್ನು ನಂಬುತ್ತೇವೆ. ನಾವು ಹೆದರುವುದಿಲ್ಲ, ನಾವು ಹೋರಾಡುತ್ತೇವೆ'' ಎಂದು ಕೇಜ್ರಿವಾಲ್ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News