2019ರ ಕೋಲ್ಕತ್ತ ರ್ಯಾಲಿಯ ಚಿತ್ರ, ವೀಡಿಯೊ ಬಳಸಿ ಮಂಗಳೂರು, ಕಛ್‌ ನ ಕಾರ್ಯಕ್ರಮದ್ದೆಂದು ಪ್ರಚಾರ !

Update: 2022-09-03 11:16 GMT

ಹೊಸದಿಲ್ಲಿ: ರ್ಯಾಲಿಯೊಂದರಲ್ಲಿ ಪ್ರಧಾನಿ ನರೇಂದ್ರ ಮೋದಿ ಜನಸಮೂಹದತ್ತ ಕೈಬೀಸುವ 30 ಸೆಕೆಂಡುಗಳ ಕ್ಲಿಪ್ ಅನ್ನು ಬಿಜೆಪಿ ಐಟಿ ಸೆಲ್‌ ಮುಖ್ಯಸ್ಥ ಅಮಿತ್ ಮಾಳವಿಯಾ(Amit Malaviya) ಮತ್ತು ಬಿಜೆಪಿ ನಾಯಕಿ ಪ್ರೀತಿ ಗಾಂಧಿ(Priti Gandhi) ಸೇರಿದಂತೆ ಹಲವು ಬಿಜೆಪಿ ನಾಯಕರು, ಕಾರ್ಯಕರ್ತರು ಹಂಚಿಕೊಳ್ಳುತ್ತಿದ್ದಾರೆ. ಕೆಲವರು ವೀಡಿಯೊವನ್ನು ಕಚ್‌ನಲ್ಲಿ ಚಿತ್ರೀಕರಿಸಿದ್ದಾರೆ ಇನ್ನು ಕೆಲವರು ಇದು ಮಂಗಳೂರಿನದ್ದು(Mangaluru) ಎಂದು ಹೇಳಿದ್ದಾರೆ. ಆದರೆ ಈ ವೀಡಿಯೊ 2019ರ ಕೋಲ್ಕತ್ತ ರ್ಯಾಲಿಯ ಸಂದರ್ಭದ್ದು ಎಂದು altnews.in ತನ್ನ ಸತ್ಯಶೋಧನಾ ವರದಿಯಲ್ಲಿ ತಿಳಿಸಿದೆ.

2022 ರ ಆಗಸ್ಟ್ 28 ರಂದು ನರ್ಮದಾ ಕಾಲುವೆಯನ್ನು ಉದ್ಘಾಟಿಸಿದ ನಂತರ ಪ್ರಧಾನಿ ಮೋದಿಯವರು ಕಚ್ ಜಿಲ್ಲೆಯ ಭುಜ್‌ನಲ್ಲಿ ರೋಡ್‌ಶೋ ನಡೆಸಿದರು. ಸೆಪ್ಟೆಂಬರ್ 2 ರಂದು ಮಂಗಳೂರಿಗೆ ಭೇಟಿ ನೀಡಿದ ಅವರು ₹ 3,800 ಕೋಟಿ ವೆಚ್ಚದ ಯೋಜನೆಗಳಿಗೆ ಶಂಕುಸ್ಥಾಪನೆ ಮಾಡಿದ್ದರು.

ಅಮಿತ್ ಮಾಳವಿಯಾ ಸೆಪ್ಟೆಂಬರ್ 2 ರಂದು #Mangaluru ಹ್ಯಾಶ್‌ಟ್ಯಾಗ್‌ನೊಂದಿಗೆ ವೀಡಿಯೊವನ್ನು ಟ್ವೀಟ್ ಮಾಡಿದ್ದಾರೆ. ಇದು ವೀಡಿಯೊವನ್ನು ಮಂಗಳೂರಿನಲ್ಲಿ ಚಿತ್ರೀಕರಿಸಲಾಗಿದೆ ಎಂದು ಸೂಚಿಸುತ್ತದೆ. ಬಳಿಕ ಈ ವಿಡಿಯೋವನ್ನು ಡಿಲೀಟ್ ಮಾಡಿದ್ದಾರೆ. (ಆರ್ಕೈವ್ ಮಾಡಿದ ಲಿಂಕ್‌)

ಬಿಜೆಪಿ ಆಂಧ್ರಪ್ರದೇಶದ ರಾಜ್ಯ ಪ್ರಧಾನ ಕಾರ್ಯದರ್ಶಿ ವಿಷ್ಣುವರ್ಧನ್ ರೆಡ್ಡಿ ಕೂಡ ಈ ವಿಡಿಯೋವನ್ನು ಶೇರ್ ಮಾಡಿದ್ದು, ಇದನ್ನು ಮಂಗಳೂರಿನಲ್ಲಿ ಚಿತ್ರೀಕರಿಸಲಾಗಿದೆ ಎಂದು ಹೇಳಿದ್ದಾರೆ. "ಇಂದು ಮಂಗಳೂರಿನಲ್ಲಿ ಪ್ರಧಾನಿ ಮೋದಿ ಅವರನ್ನು ಹೇಗೆ ಸ್ವಾಗತಿಸಲಾಯಿತು" ಎಂಬ ಶೀರ್ಷಿಕೆಯೊಂದಿಗೆ ಇದೇ ವಿಡಿಯೋವನ್ನು ಸ್ಥಳೀಯ ಪತ್ರಕರ್ತ ಸೂರಜ್ ಸುರೇಶ್ ಹಂಚಿಕೊಂಡಿದ್ದಾರೆ.

ಬಿಜೆಪಿ ನಾಯಕಿ ಪ್ರೀತಿ ಗಾಂಧಿ ಅವರು ಇದೇ ವೀಡಿಯೋವನ್ನು ಆಗಸ್ಟ್ 28 ರಂದು (ಭುಜ್ ರೋಡ್‌ಶೋ ದಿನ) ಟ್ವೀಟ್ ಮಾಡಿದ್ದು, “ಇದು #ಕಚ್‌ನ ಜನರು ಇಂದು ನಮ್ಮ ಗೌರವಾನ್ವಿತ ಪ್ರಧಾನಿ @narendramodi ಜೀ ಅವರಿಗೆ ನೀಡಿದ ರೋಚಕ ಸ್ವಾಗತ. ಊಹೆಗೂ ನಿಲುಕದ ಉತ್ಸಾಹ!!” ಎಂದು ಬರೆದುಕೊಂಡಿದ್ದರು. 

ಫ್ಯಾಕ್ಟ್‌ ಚೆಕ್:

ರಿವರ್ಸ್ ಇಮೇಜ್ ಸರ್ಚ್ ಮತ್ತು ಕೀವರ್ಡ್ ಹುಡುಕಾಟದ ಮೂಲಕ, AltNews.in ಈ ವೀಡಿಯೊವನ್ನು ಪಶ್ಚಿಮ ಬಂಗಾಳದಲ್ಲಿ ಚುನಾವಣಾ ರ್ಯಾಲಿಯ ನಂತರ ಏಪ್ರಿಲ್ 2019 ರಲ್ಲಿ ಅಪ್‌ಲೋಡ್ ಮಾಡಲಾಗಿದೆ ಎಂದು ಕಂಡುಹಿಡಿದಿದೆ. ಕುತೂಹಲಕಾರಿಯೆಂಬಂತೆ, 2019 ರಲ್ಲಿ ಕೋಲ್ಕತ್ತಾದಲ್ಲಿ ನಡೆದ ರ್ಯಾಲಿಯ ನಂತರ ಪ್ರೀತಿ ಗಾಂಧಿ ಮತ್ತು ಅಮಿತ್ ಮಾಳವಿಯಾ ಇಬ್ಬರೂ ಇದೇ ವೀಡಿಯೊವನ್ನು ಟ್ವೀಟ್ ಮಾಡಿದ್ದರು. 

"ಕೋಲ್ಕತ್ತಾದಲ್ಲಿ PM ಶ್ರೀ @narendramodi ಅವರ ಸಾರ್ವಜನಿಕ ಸಭೆಯಲ್ಲಿ ರೋಮಾಂಚಕ ವಾತಾವರಣ" ಎಂಬ ಶೀರ್ಷಿಕೆಯೊಂದಿಗೆ ಏಪ್ರಿಲ್ 3, 2019 ರಂದು @BJP4Indiaದ ಅಧಿಕೃತ ಹ್ಯಾಂಡಲ್‌ನಿಂದ ಈ ವೀಡಿಯೊವನ್ನು ಪೋಸ್ಟ್ ಮಾಡಲಾಗಿತ್ತು. (ಆರ್ಕೈವ್ ಮಾಡಿದ ಲಿಂಕ್)

ಪ್ರಧಾನಿ ಮೋದಿ ಅವರ ಅಧಿಕೃತ ಹ್ಯಾಂಡಲ್ ಕೂಡ, ಏಪ್ರಿಲ್ 3, 2019 ರಂದು ವೀಡಿಯೊವನ್ನು ಅದೇ ಶೀರ್ಷಿಕೆಯೊಂದಿಗೆ ಟ್ವೀಟ್ ಮಾಡಿತ್ತು, ವೀಡಿಯೊವನ್ನು ಕೋಲ್ಕತ್ತಾದಲ್ಲಿ ಚಿತ್ರೀಕರಿಸಲಾಗಿದೆ ಎಂದು ಹೇಳಲಾಗಿತ್ತು. (ಆರ್ಕೈವ್ ಮಾಡಿದ ಲಿಂಕ್)

altnews.in 2019 ರ ವೀಡಿಯೊ ಮತ್ತು 2022 ರ ವೀಡಿಯೊದ ಸ್ಟಿಲ್‌ಗಳನ್ನು ಹೋಲಿಕೆ ಮಾಡಿದಾಗ, ಅದೇ ವೀಡಿಯೋವನ್ನು ಮತ್ತೊಮ್ಮೆ ಅಪ್ಲೋಡ್‌ ಮಾಡಲಾಗಿದೆ ಎಂಬುವುದನ್ನು ಸ್ಪಷ್ಟವಾಗಿ ಪತ್ತೆಹಚ್ಚಿದೆ.

ಹಾಗಾಗಿ ಕೋಲ್ಕತ್ತಾದ ಬಿಜೆಪಿ ರ್ಯಾಲಿಯ ಹಳೆಯ ವೀಡಿಯೊವನ್ನು ಅಮಿತ್ ಮಾಳವಿಯಾ ಮತ್ತು ಪ್ರೀತಿ ಗಾಂಧಿ ಸೇರಿದಂತೆ ಬಿಜೆಪಿ ರಾಜಕಾರಣಿಗಳು ಇತ್ತೀಚೆಗೆ ಮತ್ತೊಮ್ಮೆ ಶೇರ್‌ ಮಾಡಿದ್ದಾರೆ ಎಂಬುದು ಸ್ಪಷ್ಟವಾಗಿದೆ. ಕೆಲವರು ಈ ವಿಡಿಯೋವನ್ನು ಕಚ್‌ನಲ್ಲಿ ಚಿತ್ರೀಕರಿಸಿದ್ದರೆ, ಇನ್ನು ಕೆಲವರು ಮಂಗಳೂರಿನ ವಿಡಿಯೋ ಎಂದು ಶೇರ್ ಮಾಡಿದ್ದಾರೆ. 2019 ರಲ್ಲಿ ಕೋಲ್ಕತ್ತಾ ರ್ಯಾಲಿಯ ನಂತರ ಮಾಳವಿಯಾ ಮತ್ತು ಗಾಂಧಿ ಇಬ್ಬರೂ ಒಂದೇ ವೀಡಿಯೊವನ್ನು ಹಂಚಿಕೊಂಡಿದ್ದರು.

ಕೃಪೆ: altnews.in

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News