ಕೋವಿಶೀಲ್ಡ್ ಅಡ್ಡಪರಿಣಾಮಗಳಿಂದ ಸಾವು ಆರೋಪ: ಸೀರಮ್ ಇನ್ಸ್ಟಿಟ್ಯೂಟ್,ಬಿಲ್ ಗೇಟ್ಸ್ ಗೆ ಬಾಂಬೆ ಉಚ್ಚ ನ್ಯಾಯಾಲಯದ ನೋಟಿಸ್

Update: 2022-09-03 15:43 GMT
photo :india today

ಮುಂಬೈ,ಸೆ.3: ಕೋವಿಶೀಲ್ಡ್ ಲಸಿಕೆಯ ಅಡ್ಡಪರಿಣಾಮಗಳಿಂದಾಗಿ ತನ್ನ ಪುತ್ರಿ ಸಾವನ್ನಪ್ಪಿದ್ದಾಳೆ ಎಂದು ದೂರಿ ವ್ಯಕ್ತಿಯೋರ್ವರು ಸಲ್ಲಿಸಿರುವ ಅರ್ಜಿಗೆ ಸಂಬಂಧಿಸಿದಂತೆ ಬಾಂಬೆ ಉಚ್ಚ ನ್ಯಾಯಾಲಯವು ಗುರುವಾರ ಮೈಕ್ರೋಸಾಫ್ಟ್ ಸಂಸ್ಥಾಪಕ ಬಿಲ್ ಗೇಟ್ಸ್ ಮತ್ತು ಸೀರಮ್ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾಕ್ಕೆ ನೋಟಿಸ್ಗಳನ್ನು ಹೊರಡಿಸಿದೆ.

ಅರ್ಜಿದಾರ ದಿಲೀಪ ಲುನಾವತ್ ಅವರು 1,000 ಕೋ.ರೂ.ಗಳ ಪರಿಹಾರವನ್ನು ಕೋರಿದ್ದಾರೆ.

ಗೇಟ್ಸ್ ಮತ್ತು ಸೀರಮ್ ಜೊತೆಗೆ ಕೇಂದ್ರ,ಮಹಾರಾಷ್ಟ್ರ ಸರಕಾರ, ಭಾರತದ ಔಷಧಿ ಮಹಾ ನಿಯಂತ್ರಕ ಡಾ.ವಿ.ಜಿ.ಸೋಮಾನಿ ಮತ್ತು ಏಮ್ಸ್ ನಿರ್ದೇಶಕ ಡಾ.ರಂದೀಪ ಗುಲೇರಿಯಾ ಅವರಿಗೂ ಉಚ್ಚ ನ್ಯಾಯಾಲಯವು ನೋಟಿಸ್ಗಳನ್ನು ಹೊರಡಿಸಿದ್ದು,ಮುಂದಿನ ವಿಚಾರಣಾ ದಿನಾಂಕವಾದ ನ.17ರೊಳಗೆ ಉತ್ತರಗಳನ್ನು ಸಲ್ಲಿಸುವಂತೆ ನಿರ್ದೇಶನ ನೀಡಿದೆ.

ಲುನಾವತ್ರ ಪುತ್ರಿ ಸ್ನೇಹಲ್ ಲುನಾವತ್ ನಾಸಿಕ್ ನ ಎಸ್ಎಂಬಿಟಿ ಡೆಂಟಲ್ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ವೈದ್ಯೆ ಹಾಗೂ ಹಿರಿಯ ಉಪನ್ಯಾಸಕಿಯಾಗಿದ್ದರು. ಅವರು 2021,ಮಾ.1ರಂದು ಮೃತಪಟ್ಟಿದ್ದರು.

ತನ್ನ ಅರ್ಜಿಯಲ್ಲಿ ಕೊರೋನವೈರಸ್ ಲಸಿಕೆಯ ಸುರಕ್ಷತೆಯ ಕುರಿತು ಸುಳ್ಳು ನಿರೂಪಣೆಗಳು ಮತ್ತು ತಪ್ಪು ವರದಿಗಳಿಗಾಗಿ ಸರಕಾರವನ್ನು ದೂಷಿಸಿರುವ ಲುನಾವತ್,ಲಸಿಕೆಯನ್ನು ತೆಗೆದುಕೊಳ್ಳುವಂತೆ ವೈದ್ಯರನ್ನು ಬಲವಂತಗೊಳಿಸಲಾಗಿತ್ತು ಎಂದು ಹೇಳಿದ್ದಾರೆ. ತನ್ನ ಪುತ್ರಿಯು ಲಸಿಕೆಯ ಅಡ್ಡಪರಿಣಾಮಗಳಿಂದ ಮೃತಪಟ್ಟಿದ್ದಾಳೆ ಎಂದು ಕೇಂದ್ರ ಸರಕಾರದ ಪ್ರತಿರಕ್ಷಣೆ ನಂತರದ ಪ್ರತಿಕೂಲ ಘಟನೆಗಳ ಸಮಿತಿಯು 2021,ಅ.2ರಂದು ಒಪ್ಪಿಕೊಂಡಿತ್ತು ಎಂದು ಅವರು ತಿಳಿಸಿದ್ದಾರೆ.

ತನ್ನ ಪುತ್ರಿ ಜ.28ರಂದು ಲಸಿಕೆಯ ಮೊದಲ ಡೋಸ್ ಅನ್ನು ಪಡೆದಿದ್ದಳು ಮತ್ತು ಕೆಲವು ದಿನಗಳ ಬಳಿಕ ತಲೆನೋವಿಗೆ ತುತ್ತಾಗಿದ್ದಳು ಹಾಗೂ ವಾಂತಿ ಮಾಡಿಕೊಳ್ಳುತ್ತಿದ್ದಳು. ಆಕೆಯನ್ನು ಆಸ್ಪತ್ರೆಗೆ ಸೇರಿಸಲಾಗಿದ್ದು,ಮೂಗಿನಿಂದ ರಕ್ತಸ್ರಾವವಾಗುತ್ತಿದ್ದನ್ನು ವೈದ್ಯರು ಪತ್ತೆ ಮಾಡಿದ್ದರು ಎಂದು ಲುನಾವತ್ ಅರ್ಜಿಯಲ್ಲಿ ಹೇಳಿದ್ದಾರೆ.

ಕೋವಿಶೀಲ್ಡ್ ಲಸಿಕೆ ತಯಾರಿಕೆಯ ಸೀರಮ್ ಪ್ರಯತ್ನಗಳಿಗೆ ಬಿಲ್ ಗೇಟ್ಸ್ ರ ಪ್ರತಿಷ್ಠಾನವು ಆರ್ಥಿಕ ನೆರವನ್ನು ಒದಗಿಸಿತ್ತು,ಹೀಗಾಗಿ ಅವರನ್ನು ಅರ್ಜಿಯಲ್ಲಿ ಹೆಸರಿಸಲಾಗಿದೆ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News