ರಾಜಸ್ಥಾನ: ದಲಿತ ವಿದ್ಯಾರ್ಥಿನಿಯರು ಬಡಿಸಿದ ಊಟ ಎಸೆಯುವಂತೆ ಸೂಚಿಸಿದ ಅಡುಗೆಯವನ ಬಂಧನ

Update: 2022-09-03 17:01 GMT
photo : indhuthan time 

ಉದಯಪುರ (ರಾಜಸ್ಥಾನ), ಸೆ. ೩: ಉದಯಪುರ ಜಿಲ್ಲೆಯ ಸರಕಾರಿ ಶಾಲೆಯಲ್ಲಿ ಇಬ್ಬರು ದಲಿತ ವಿದ್ಯಾರ್ಥಿನಿಯರ ವಿರುದ್ಧ ತಾರತಮ್ಯ ಎಸಗಿದ ಆರೋಪದಲ್ಲಿ ಓರ್ವ ಅಡುಗೆಯವನನ್ನು ಬಂಧಿಸಲಾಗಿದೆ ಎಂದು ಪೊಲೀಸರು ಶನಿವಾರ ತಿಳಿಸಿದ್ದಾರೆ.ಬರೋಡಿ ಪ್ರದೇಶದಲ್ಲಿರುವ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶುಕ್ರವಾರ ಲಾಲಾ ರಾಮ್ ಗುರ್ಜರ್ ತಯಾರಿಸಿದ ಮಧ್ಯಾಹ್ನದ ಊಟವನ್ನು ಇಬ್ಬರು ದಲಿತ ವಿದ್ಯಾರ್ಥಿನಿಯರು ಬಡಿಸಿದ್ದರು.

ಇದಕ್ಕೆ ಲಾಲ್ ರಾಮ್ ಗುರ್ಜರ್ ಆಕ್ಷೇಪಿಸಿದ್ದ. ದಲಿತ ವಿದ್ಯಾರ್ಥಿನಿಯರು ಊಟ ಬಡಿಸಿರುವ ಕಾರಣಕ್ಕೆ ಅದನ್ನು ಎಸೆಯುವಂತೆ ಇತರ ವಿದ್ಯಾರ್ಥಿಗಳಿಗೆ ತಿಳಿಸಿದ್ದ. ಈ ಸೂಚನೆಯನ್ನು ಪಾಲಿಸಿ ವಿದ್ಯಾರ್ಥಿಗಳು ಊಟ ಎಸೆದಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ಘಟನೆಯ ಬಗ್ಗೆ ವಿದ್ಯಾರ್ಥಿನಿಯರು ತಮ್ಮ ಕುಟುಂಬಕ್ಕೆ ತಿಳಿಸಿದ್ದರು. ಅನಂತರ ಕುಟುಂಬದವರು ಕೆಲವು ಸಂಬಂಧಿಕರೊಂದಿಗೆ ಶಾಲೆಗೆ ಆಗಮಿಸಿ ಅಡುಗೆಯವನ ವಿರುದ್ಧ ಕ್ರಮ ತೆಗೆದುಕೊಳ್ಳುವಂತೆ ಆಗ್ರಹಿಸಿದರು.

‘‘ಅಡುಗೆಯವನ ವಿರುದ್ಧ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡ ದೌರ್ಜನ್ಯ ತಡೆ ಕಾಯ್ದೆ ಅಡಿಯಲ್ಲಿ ಗೋಗುಂಡಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ’’ ಎಂದು ಪೊಲೀಸರು ತಿಳಿಸಿದ್ದಾರೆ.

ಘಟನೆ ಸತ್ಯವೆಂದು ಕಂಡು ಬಂದಿದ್ದರಿಂದ ತ್ವರಿತ ಕ್ರಮ ಕೈಗೊಳ್ಳಲಾಗಿದೆ. ದಲಿತ ವಿದ್ಯಾರ್ಥಿನಿಯರು ಬಡಿಸಿರುವ ಕಾರಣಕ್ಕೆ ಆಹಾರವನ್ನು ವಿದ್ಯಾರ್ಥಿಗಳು ಎಸೆದಿದ್ದಾರೆ ಎಂದು ಅವರು ತಿಳಿಸಿದ್ದಾರೆ.

ಅಡುಗೆಯವನು ಆಹಾರ ಬಡಿಸಲು ಮೇಲ್ಜಾತಿಯ ವಿದ್ಯಾರ್ಥಿಗಳನ್ನು ಆಯ್ಕೆ ಮಾಡುತ್ತಿದ್ದ. ಆದರೆ, ಆ ವಿದ್ಯಾರ್ಥಿಗಳು ಸರಿಯಾಗಿ ಬಡಿಸುತ್ತಿಲ್ಲ ಎಂಬ ಕಾರಣಕ್ಕೆ   ಅಧ್ಯಾಪಕರೊಬ್ಬರು ಶುಕ್ರವಾರ ದಲಿತ ವಿದ್ಯಾರ್ಥಿನಿಯರಿಗೆ ಆಹಾರ ಬಡಿಸಲು ಸೂಚಿಸಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News