ರಾಜಸ್ಥಾನ: ವಿದ್ಯಾರ್ಥಿಗೆ ಹಲ್ಲೆ ಆರೋಪ; ಅಧ್ಯಾಪಕ, ಮುಖ್ಯೋಪಾಧ್ಯಾಯರ ಬಂಧನ
ಸಿಕಾರ್(ರಾಜಸ್ಥಾನ), ಸೆ. ೩: ವಿದ್ಯಾರ್ಥಿಗೆ ಹಲ್ಲೆ ನಡೆಸಿದ ಆರೋಪದಲ್ಲಿ ಇಲ್ಲಿನ ಖಾಸಗಿ ಶಾಲೆಯ ಅಧ್ಯಾಪಕರು ಹಾಗೂ ಮುಖ್ಯೋಪಾಧ್ಯಾಯರನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಶಾಲೆಯ ಪ್ರಾರ್ಥನಾ ಸಭೆೆಯ ಸಂದರ್ಭ ಸಾಲಿನಲ್ಲಿ ಸರಿಯಾಗಿ ನಿಲ್ಲಲು ನೀಡಿದ ಸೂಚನೆಯನ್ನು ಅನುಸರಿಸದೇ ಇರುವುದಕ್ಕೆ ೧೨ನೇ ತರಗತಿ ವಿದ್ಯಾರ್ಥಿ ಆಶಿಶ್ ತೆತ್ವಾನ ಕೆನ್ನೆಗೆ ಅಧ್ಯಾಪಕ ಪ್ರದೀಪ್ ಹೊಡೆದಿದ್ದರು. ಇದಕ್ಕೆ ಆತ ಆಕ್ಷೇಪಿಸಿದಾಗ ಮುಖ್ಯೋಪಾಧ್ಯಾಯ ಸಗರ್ಮಲ್ ಹಾಗೂ ಪ್ರದೀಪ್ ಅವರು ಆಶಿಶ್‌ನನ್ನು ಶಾಲೆಯ ಕೊಠಡಿಗೆ ಕರೆದೊಯ್ದು ಥಳಿಸಿದ್ದಾರೆ ಎಂದು ತೀತ್ವಾನ ಕುಟುಂಬ ಆರೋಪಿಸಿದೆ ಎಂದು ರೀಂಗಸ್‌ನ ಸರ್ಕಲ್ ಆಫಿಸರ್ ಕನ್ಹಯ್ಯಲಾಲ್ ಅವರು ತಿಳಿಸಿದ್ದಾರೆ.
ಘಟನೆಗೆ ಸಂಬಂಧಿಸಿ ವಿದ್ಯಾರ್ಥಿಯ ಕುಟುಂಬ ಅಧ್ಯಾಪಕರ ವಿರುದ್ಧ ದೂರು ದಾಖಲಿಸಿದೆ. ಇದೇ ಸಂದರ್ಭ ಶಾಲೆಯ ಇನ್ನೋರ್ವ ಅಧ್ಯಾಪಕ ಆಶಿಶ್ ತನ್ನ ಕೆನ್ನೆಗೆ ಹೊಡೆದಿರುವುದಾಗಿ ಆರೋಪಿಸಿ ದೂರು ದಾಖಲಿಸಿದ್ದಾರೆ. ಈ ದೂರಿನ ಆಧಾರದಲ್ಲಿ ಪ್ರತ್ಯೇಕ ಎಫ್‌ಐಆರ್ ದಾಖಲಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಈ ಘಟನೆ ಬುಧವಾರ ನಡೆದಿದ್ದು, ತಡ ರಾತ್ರಿ ಪ್ರಕರಣ ದಾಖಲಾಗಿದೆ.