ದೊರೆಯದ ನಿರಾಕ್ಷೇಪಣಾ ಪತ್ರ: ಅಯೋಧ್ಯೆಯಲ್ಲಿ ಇನ್ನೂ ಆರಂಭವಾಗದ ಮಸೀದಿ ನಿರ್ಮಾಣ ಕಾರ್ಯ

Update: 2022-09-03 18:06 GMT
photo : indiam.com 

ಹೊಸದಿಲ್ಲಿ, ಸೆ. ೩: ಅಯೋಧ್ಯೆಯಲ್ಲಿ ಮಸೀದಿ ನಿರ್ಮಾಣಕ್ಕೆ ಸುಪ್ರೀಂ ಕೋರ್ಟ್ ಆದೇಶ ನೀಡಿ ಸುಮಾರು ೩ ವರ್ಷಗಳು ಕಳೆದವು. ಆದರೆ, ಅಗ್ನಿಶಾಮಕ ದಳ, ಮಾಲಿನ್ಯ ನಿಯಂತ್ರಣ ಮಂಡಳಿ ಹಾಗೂ ಪೌರಾಡಳಿತದಿಂದ ನಿರಾಕ್ಷೇಪಣಾ ಪತ್ರ ದೊರೆಯದ ಕಾರಣ ನಿರ್ಮಾಣ ಕಾರ್ಯ ಇನ್ನೂ ಆರಂಭವಾಗಿಲ್ಲ. 

ಸುಪ್ರೀಂ ಕೋರ್ಟ್‌ನ ನಿರ್ದೇಶನದಂತೆ ಮಸೀದಿ ನಿರ್ಮಾಣಕ್ಕೆ  ಉತ್ತರಪ್ರದೇಶ ಸುನ್ನಿ ಕೇಂದ್ರ ವಕ್ಫ್ ಮಂಡಳಿಗೆ ಧನ್ನಿಪುರ ಗ್ರಾಮದಲ್ಲಿ ೫ ಎಕರೆ ಭೂಮಿ ಮಂಜೂರು ಮಾಡಲಾಗಿದೆ.

ಈ ನಿವೇಶನದಲ್ಲಿ ಮಸೀದಿ, ಆಸ್ಪತ್ರೆ ಹಾಗೂ ವಸ್ತು ಸಂಗ್ರಹಾಲಯ ನಿರ್ಮಾಣ ಮಾಡಲು ಮಂಡಳಿ ಇಂಡೊ ಇಸ್ಲಾಮಿಕ್ ಕಲ್ಚರಲ್ ಫೌಂಡೇಶನ್ (ಐಐಸಿಎಫ್) ಟ್ರಸ್ಟ್ ಅನ್ನು ಸ್ಥಾಪಿಸಿತ್ತು.

ಮಸೀದಿ ನಿರ್ಮಾಣಕ್ಕೆ ನಿರಾಕ್ಷೇಪಣ ಪತ್ರ ನೀಡುವಂತೆ ಅಗ್ನಿ ಶಾಮಕ ದಳ, ನಾಗರಿಕ ವಿಮಾನ ಯಾನ, ಅಯೋಧ್ಯೆಯ ನಗರಾಡಳಿತ, ನಿರಾವರಿ ಇಲಾಖೆ, ಲೋಕೋಪಯೋಗಿ ಇಲಾಖೆ, ಮಾಲಿನ್ಯ ನಿಯಂತ್ರಣ ಮಂಡಳಿ ಹಾಗೂ ಜಿಲ್ಲಾಡಳಿತ ಸೇರಿದಂತೆ  ಸಂಬಂಧಿಸಿದ ಪ್ರಾಧಿಕಾರಕ್ಕೆ ಅಯೋಧ್ಯೆ ಅಭಿವೃದ್ಧಿ ಪ್ರಾಧಿಕಾರ ಜುಲೈ ೧೫ರಂದು ಪತ್ರ ರವಾನಿಸಿತ್ತು ಎಂದು ಐಐಸಿಎಫ್‌ನ ಕಾರ್ಯದರ್ಶಿ ಅಥರ್ ಹುಸೈನ್ ಸಿದ್ದೀಕ್ ಅವರು ಹೇಳಿದ್ದಾರೆ.

ಅಗ್ನಿಶಾಮಕ ದಳ ಹೊರತುಪಡಿಸಿ ಇತರ ಯಾವುದೇ ಇಲಾಖೆಗಳು ಸ್ಥಳ ಪರಿಶೀಲನೆ ನಡೆಸಿಲ್ಲ. ಅಲ್ಲದೆ, ಯಾವುದೇ ಇಲಾಖೆಗಳು ನಿರಾಕ್ಷೇಪಣಾ ಪತ್ರ ನೀಡಿಲ್ಲ ಎಂದು ಅವರು ತಿಳಿಸಿದ್ದಾರೆ.

ರಾಮಜನ್ಮಭೂಮಿ-ಬಾಬ್ರಿ ಮಸೀದಿ ವಿವಾದದ ಕುರಿತು ಸುಪ್ರೀಂ ಕೋರ್ಟ್ ೨೦೧೯ ನವೆಂಬರ್ ೯ರಂದು ನೀಡಿದ ತೀರ್ಪಿನಲ್ಲಿ ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣಕ್ಕೆ ಅವಕಾಶ ನೀಡಿತ್ತು ಹಾಗೂ ಮಸೀದಿ ನಿರ್ಮಾಣ ಮಾಡಲು ೫ ಎಕರೆ ಭೂಮಿ ಮಂಜೂರು ಮಾಡಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News