ನಾವು ಸಾಂಸ್ಕೃತಿಕ ಅವನತಿಯತ್ತ ಸಾಗುತ್ತಿದ್ದೇವೆಯೇ?

Update: 2022-09-04 04:36 GMT

ಅತ್ಯಾಚಾರ ಎಸಗುವ, ಹತ್ಯೆ ಮಾಡುವ ವ್ಯಕ್ತಿಗೆ ತನ್ನನ್ನು ರಕ್ಷಿಸುವ ಒಂದು ಸುಪ್ತ ವ್ಯವಸ್ಥೆ ಈ ಸಮಾಜದಲ್ಲಿದೆ ಎಂಬ ಖಾತರಿ ಇರುವುದರಿಂದಲೇ, ಮಹಿಳೆಯರ ಮೇಲಿನ ದೌರ್ಜನ್ಯ, ಅತ್ಯಾಚಾರಗಳು ಧಾರ್ಮಿಕ ಶ್ರದ್ಧಾಕೇಂದ್ರಗಳನ್ನೂ, ವಿದ್ಯಾಕೇಂದ್ರಗಳನ್ನೂ, ಆಡಳಿತ ಕೇಂದ್ರಗಳನ್ನೂ ತಲುಪಿವೆ. ಅತ್ಯಾಚಾರ ಮತ್ತು ದೌರ್ಜನ್ಯಕ್ಕೊಳಗಾದ ಮಹಿಳೆಯ ಅಂತರಾಳದ ನೋವನ್ನು, ವೇದನೆಯನ್ನು ಅರ್ಥಮಾಡಿಕೊಳ್ಳುವ ವ್ಯವಧಾನವನ್ನು ಸಮಾಜ ಕಳೆದುಕೊಂಡಿದೆ.  ಇಲ್ಲಿ ಅಪರಾಧ-ಅಪರಾಧಿ ಮತ್ತು ಕಾನೂನಾತ್ಮಕ ಶಿಕ್ಷೆಯ ಚೌಕಟ್ಟಿನಿಂದಾಚೆಗೆ ಒಂದು ನೊಂದ ಅಸಹಾಯಕ ಜೀವ ಇರುವುದನ್ನು ಸಹೃದಯ ಸಮಾಜ ಗಮನಿಸಬೇಕಲ್ಲವೇ? ಈ ಸಹೃದಯ ಸಮಾಜ ಮುರುಘಾ ಮಠದ ಪ್ರಕರಣಕ್ಕೆ ಸ್ಪಂದಿಸಿದ ರೀತಿ ಇಡೀ ರಾಜ್ಯದ ಜನತೆ ನಾಚಿ ತಲೆತಗ್ಗಿಸುವಂತೆ ಮಾಡಿದೆ.

ಸಮಾಜದ ಸ್ವಾಸ್ಥ್ಯಕ್ಕೂ, ಸಾರ್ವಜನಿಕ ಜೀವನದಲ್ಲಿರಬೇಕಾದ ಪ್ರಾಮಾಣಿಕತೆಗೂ, ಸಾಂಸ್ಕೃತಿಕ ಜಗತ್ತಿನ ಸೃಜನಶೀಲತೆಗೂ, ಮನುಜ ಸಮಾಜದ ಸಂವೇದನಾಶೀಲತೆಗೂ ಅವಿನಾಭಾವ ಸಂಬಂಧವಿದೆ. ಭಾರತ ಬಹುಶಃ ತನ್ನ ಇತಿಹಾಸದಲ್ಲೇ ಕಂಡಿರದ ಸಂದಿಗ್ಧತೆಗೆ, ಬಿಕ್ಕಟ್ಟುಗಳಿಗೆ ಈ ಸಂದರ್ಭದಲ್ಲಿ ಮುಖಾಮುಖಿಯಾಗುತ್ತಿದೆ. ಪ್ರಾಮಾಣಿಕತೆ, ಬದ್ಧತೆ, ಶ್ರದ್ಧೆ ಮತ್ತು ಕಾರ್ಯತತ್ಪರತೆ ಈ ಎಲ್ಲ ಲಕ್ಷಣಗಳನ್ನು ಸಮಾಜದ ಬೇರುಮಟ್ಟದವರೆಗೂ ವಿಸ್ತರಿಸುವ ಮೂಲಕ ಒಂದು ಸಹೃದಯ ಸಮಾಜಕ್ಕೆ ಬೇಕಾದ ಸಮಾನತೆ-ಅನುಭೂತಿ ಮತ್ತು ಸಮನ್ವಯತೆಯನ್ನು ಸಾಧಿಸಬೇಕಾದ 21ನೆಯ ಶತಮಾನದ ಭಾರತ, ಈ ಎಲ್ಲ ನೆಲೆಗಳಲ್ಲೂ ವಿರುದ್ಧ ದಿಕ್ಕಿನಲ್ಲಿ ನಡೆಯುತ್ತಿರುವುದು ದಿನದಿಂದ ದಿನಕ್ಕೆ ಸ್ಪಷ್ಟವಾಗುತ್ತಿದೆ. ರಾಜಕಾರಣದಲ್ಲಿ ‘ಪ್ರಾಮಾಣಿಕತೆ’ ಎನ್ನುವುದು ವಸ್ತು ಪ್ರದರ್ಶನದ ಆಲಂಕಾರಿಕ ವಸ್ತುವಾಗಿರುವ ಸಂದರ್ಭದಲ್ಲಿ ಇಡೀ ಸಮಾಜವೇ ಸಂವೇದನೆ ಮತ್ತು ಸಹೃದಯತೆಯ ನೆಲೆಗಳನ್ನು ಸಾಹಿತ್ಯದಲ್ಲಿ, ಸಂಸ್ಕೃತಿಯಲ್ಲಿ, ಅಧ್ಯಾತ್ಮದಲ್ಲಿ, ಮತಧಾರ್ಮಿಕ ಚೌಕಟ್ಟುಗಳಲ್ಲಿ ಕಾಣಲು ಹಪಹಪಿಸುತ್ತಿದೆ. ಯಾವುದೇ ಕ್ಷೇತ್ರದಲ್ಲಾದರೂ ಪ್ರಾಮಾಣಿಕತೆಯನ್ನು ವ್ಯಕ್ತಿನಿಷ್ಠತೆಯಿಂದ ನೋಡದೆ ವಸ್ತುನಿಷ್ಠತೆಯಿಂದ ನೋಡಿದಾಗ ಮಾತ್ರ ಅದು ತನ್ನ ಸಾಪೇಕ್ಷತೆಯನ್ನು ಕಳೆದುಕೊಂಡು ಸಾರ್ವತ್ರಿಕವಾಗಿ ಕಾಣಲು ಸಾಧ್ಯ.

ಎದೆಮುಟ್ಟಿಕೊಂಡು ತಾನು ಪ್ರಾಮಾಣಿಕ ಎಂದು ಹೇಳಿಕೊಳ್ಳುವ ಆತ್ಮಸ್ಥೈರ್ಯ ಇರುವಂತಹ ರಾಜಕೀಯ ನಾಯಕರೇ ಇಲ್ಲದ ಭಾರತೀಯ ಸಮಾಜ ಇಂದು ಈ ಸಂದಿಗ್ಧತೆಯನ್ನು ಎದುರಿಸುತ್ತಿದೆ. ಭ್ರಷ್ಟಾಚಾರ ಇಡೀ ರಾಜಕೀಯ ವ್ಯವಸ್ಥೆಯನ್ನು ವ್ಯಾಪಿಸುತ್ತಿದೆ ಎಂದು ಪರಿತಪಿಸುತ್ತಿದ್ದ ಸಮಾಜವು ಭ್ರಷ್ಟಾಚಾರ ಮುಕ್ತ ಮತ್ತು ಭ್ರಷ್ಟ ಮುಕ್ತ ರಾಜಕಾರಣವನ್ನು ನಿರೀಕ್ಷಿಸುತ್ತಿತ್ತು. ಆದರೆ ಇಂದು ರಾಜಕೀಯ ಭ್ರಷ್ಟಾಚಾರ ತುಲನಾತ್ಮಕ ನೆಲೆಯಲ್ಲಿ ನಿಷ್ಕರ್ಷೆಯಾಗುತ್ತಿದ್ದು, ಸ್ಥಾಪಿತ ವ್ಯವಸ್ಥೆಯ ಒಂದು ಅವಿಭಾಜ್ಯ ಅಂಗವಾಗಿ, ಅನುಲೋಮ-ಪ್ರತಿಲೋಮದ ಪ್ರಮೇಯಗಳಲ್ಲಿ ಅಳೆಯಲಾಗುತ್ತಿದೆ. ಬಂಡವಾಳಶಾಹಿ ಅಭಿವೃದ್ಧಿ ಪಥದಲ್ಲಿ ಸಹಜವಾಗಿಯೇ ಅಂತರ್ಗತವಾಗಿರುವ ಹಣಕಾಸು ಭ್ರಷ್ಟಾಚಾರ ಇಂದು ಆಡಳಿತ ವ್ಯವಸ್ಥೆಯಲ್ಲಿ ಸಹಜ ಪ್ರವೃತ್ತಿಯಾಗಿ ನೆಲೆ ಕಂಡುಕೊಂಡಿದೆ. ಕೆಲವೇ ಪ್ರಾಮಾಣಿಕರು ಇದ್ದರೂ ಅದು ಕೇವಲ ಅಪಭ್ರಂಶದಂತೆ ಕಾಣುವುದೇ ಹೊರತು ವಾಸ್ತವ ಎನಿಸುವುದಿಲ್ಲ. ಸಂವಿಧಾನ ಬದ್ಧತೆಯೇ ಮರೆಯಾಗಿರುವ ಒಂದು ಪ್ರಜಾತಂತ್ರ ವ್ಯವಸ್ಥೆಯನ್ನು ತಿಳಿದೋ ತಿಳಿಯದೆಯೋ ಪೋಷಿಸುತ್ತಲೇ ಬಂದಿದ್ದೇವೆ.

ಈ ಸಂದಿಗ್ಧತೆಯ ನಡುವೆ ಸಾಮಾನ್ಯ ಜನತೆ ಪ್ರಾಮಾಣಿಕತೆಯನ್ನು ಅಧ್ಯಾತ್ಮದ ನೆಲೆಯಲ್ಲಿ, ಮತಧರ್ಮಗಳ ಸಾಂಸ್ಥಿಕ ಚೌಕಟ್ಟಿನಲ್ಲಿ ಶೋಧಿಸುವುದು ಅನಿವಾರ್ಯವೂ ಆಗುತ್ತದೆ. ಜೀವನಾದರ್ಶಗಳಿಗಾಗಿ ಸಾಧು, ಸಂತ, ಸನ್ಯಾಸಿಗಳನ್ನು, ಮಠಾಧೀಶರನ್ನು, ಆಧ್ಯಾತ್ಮಿಕ ಗುರುಗಳನ್ನು ಆಶ್ರಯಿಸುವ ಸಾಮಾನ್ಯ ಜನತೆಗೆ ‘ಬೌದ್ಧಿಕವಾಗಿ ಉನ್ನತ’ ಎನಿಸುವ ಈ ನೆಲೆಗಳಲ್ಲಿ ಸಹೃದಯತೆ, ಸಂವೇದನೆ, ಸೌಜನ್ಯ ಮತ್ತು ಮನುಜ ಸೂಕ್ಷ್ಮತೆಗಳು ಇದ್ದೇ ಇರುತ್ತವೆ ಎಂಬ ವಿಶ್ವಾಸ ಇರುತ್ತದೆ. ಈ ನಾಲ್ಕು ಲಕ್ಷಣಗಳನ್ನು ತಮ್ಮ ನೆಚ್ಚಿನ ರಾಜಕೀಯ ನಾಯಕರಿಂದ ನಿರೀಕ್ಷಿಸಲಾಗದ ಮಟ್ಟಿಗೆ ಅಧಿಕಾರ ರಾಜಕಾರಣ ಹದಗೆಟ್ಟಿರುವುದರಿಂದ, ಜನತೆ ಹೆಚ್ಚು ಹೆಚ್ಚಾಗಿ ಈ ಸಾಂಸ್ಥಿಕ ನೆಲೆಗಳಲ್ಲಿ ಸಾಂತ್ವನ ಕಾಣಲು ಹಂಬಲಿಸುವುದು ಸಹಜ. ಮೂಲತಃ ಎಲ್ಲ ಮತಧರ್ಮಗಳೂ, ಎಲ್ಲ ರೀತಿಯ ಆಧ್ಯಾತ್ಮಿಕ ಚಿಂತನೆಯೂ ಈ ನಾಲ್ಕು ಲಕ್ಷಣಗಳನ್ನು ಆಧರಿಸಿಯೇ ತಮ್ಮದೇ ಆದ ಪ್ರಭಾವಿ ವಲಯವನ್ನು ಸೃಷ್ಟಿಸಿಕೊಳ್ಳುತ್ತವೆ. ಬಡತನ, ಹಸಿವು, ತಾರತಮ್ಯ, ಅಸಮಾನತೆ ಮತ್ತು ದೈನಂದಿನ ಬದುಕಿನ ನೋವುಗಳನ್ನು ಈ ಸಾಂತ್ವನದ ನೆಲೆಗಳು ಸಾಂಕೇತಿಕವಾಗಿಯಾದರೂ ನಿವಾರಿಸುತ್ತವೆ ಎಂಬ ಭ್ರಮೆ/ವಿಶ್ವಾಸ ಜನಸಾಮಾನ್ಯರಲ್ಲಿರುತ್ತದೆ.

ಇಡೀ ರಾಜಕೀಯ ವ್ಯವಸ್ಥೆ ಹದಗೆಟ್ಟಿರುವ ವರ್ತಮಾನದ ಸನ್ನಿವೇಶದಲ್ಲಿ, ಭ್ರಷ್ಟಾಚಾರ, ಸ್ವಜನಪಕ್ಷಪಾತ, ದೌರ್ಜನ್ಯ, ತಾರತಮ್ಯ ಮತ್ತು ಜಾತಿ-ಮತಧರ್ಮಗಳ ವಿಷಬೇಲಿಗಳು ಸುತ್ತಲೂ ಆವರಿಸಿರುವಾಗ ಹಿತವಲಯದಲ್ಲಿರುವ ಜನಸಮುದಾಯಗಳ ನಡುವೆಯೂ ಈ ಶೋಧ ಮುಂದುವರಿದಿರುತ್ತದೆ. ಸಾವಿರಾರು ವರ್ಷಗಳ ಪರಂಪರೆ ಇರುವ ಒಂದು ದೇಶದಲ್ಲಿ, ನೂರಾರು ಮಹಾನ್ ಚಿಂತಕರು, ಆದರ್ಶಪ್ರಾಯ, ಅನುಕರಣೀಯ ಬೋಧಕರು ಆಗಿ ಹೋಗಿರುವ ಒಂದು ದೇಶದಲ್ಲಿ, ಸಹಜವಾಗಿಯೇ ಸಾಮಾಜಿಕ ಸಂವೇದನೆ ಮತ್ತು ಸಾಂಸ್ಕೃತಿಕ ಸೃಜನಶೀಲತೆ ಜೀವಂತವಾಗಿರಬೇಕಿತ್ತಲ್ಲವೇ? ಸಂವೇದನೆ ಮತ್ತು ಸೃಜನಶೀಲತೆ ನಿರ್ವಾತದಲ್ಲಿ ಸೃಷ್ಟಿಯಾಗುವುದಿಲ್ಲ ಹಾಗೆಯೇ ಸಾಪೇಕ್ಷ ನೆಲೆಯ ಅಸ್ಮಿತೆಗಳ ಚೌಕಟ್ಟುಗಳಲ್ಲೂ ಸೃಷ್ಟಿಸಲಾಗುವುದಿಲ್ಲ. ಇದು ಮೂಲತಃ ಸಮಾಜದ ಗರ್ಭದೊಳಗಿಂದಲೇ ಮೂಡಿ ಪಸರಿಸಬೇಕು, ತಳಮಟ್ಟದವರೆಗೂ ಪಸರಿಸಿ ಜನರ ಚಿಂತನಾ ವಿಧಾನದ ಒಂದು ಭಾಗವಾಗಬೇಕು. ಕನಿಷ್ಠ ಸ್ವಾತಂತ್ರ್ಯಾನಂತರದ 75 ವರ್ಷಗಳಲ್ಲಾದರೂ ಈ ನಿಟ್ಟಿನಲ್ಲಿ ಭಾರತ ಒಂದೆರಡು ಹೆಜ್ಜೆ ಮುಂದಕ್ಕೆ ಹೋಗಬೇಕಿತ್ತು.

ಆದರೆ ಭಾರತೀಯ ಸಮಾಜ ಹಿಂದಕ್ಕೆ ಚಲಿಸುತ್ತಿದೆ. ಅಧಿಕಾರ ರಾಜಕಾರಣದ ಲಾಲಸೆ ಮತ್ತು ಸ್ವಾರ್ಥತೆಯ ವ್ಯಾಮೋಹಗಳು ಸಾಮಾಜಿಕ-ಸಾಂಸ್ಕೃತಿಕ ಬೇರುಗಳಿಗೂ ವ್ಯಾಪಿಸಿರುವುದರಿಂದ ಕಲೆ, ಸಾಹಿತ್ಯ, ನಾಟಕ, ಕಾವ್ಯ ಮತ್ತಿತರ ಎಲ್ಲ ಸೃಜನಶೀಲ ಬೇರುಗಳೂ ಸಹ ರಾಜಕೀಯ ಪ್ರೇರಿತವಾಗಿ ವಿಷಪೂರಿತವಾಗುತ್ತಿವೆ. ಚರಿತ್ರೆಯ ವ್ಯಕ್ತಿ/ಘಟನೆ/ಪ್ರಸಂಗಗಳನ್ನು, ಐತಿಹ್ಯಗಳನ್ನು ಹೆಕ್ಕಿತೆಗೆದು ವರ್ತಮಾನದ ನೆಲೆಯಲ್ಲಿಟ್ಟು ನಿಷ್ಕರ್ಷೆ ಮಾಡುವ ಪರಂಪರೆಯಿಂದ ಈಗಾಗಲೇ ವರ್ತಮಾನದ ಬೌದ್ಧಿಕ ನೆಲೆಗಳು ಕಲುಷಿತವಾಗಿವೆ. ಈಗ ಸಾಹಿತ್ಯ ಮತ್ತು ಕಲೆಯೂ ಸೇರ್ಪಡೆಯಾಗಿದ್ದು, ಸಮಕಾಲೀನ ಸಾಹಿತ್ಯ ಕೃತಿಗಳ ಉತ್ಖನನ ಪ್ರಕ್ರಿಯೆ ಆರಂಭವಾದಂತಿದೆ. ಒಂದು ಸಾಹಿತ್ಯ ಕೃತಿಯ ಕೃತಿಕಾರರಿಗೂ ಅವರು ಸೃಷ್ಟಿಸುವ ಕಥಾ ಪಾತ್ರಧಾರಿಗಳು ಮತ್ತು ಸನ್ನಿವೇಶಗಳಿಗೂ ಇರುವ ಸೂಕ್ಷ್ಮ ಅಂತರವನ್ನೂ ಗುರುತಿಸಲಾಗದೆ, ಸಾಹಿತ್ಯ ಕೃತಿಗಳ ಪಾತ್ರಗಳನ್ನು ಕೃತಿಕಾರರಲ್ಲೇ ಕಾಣುವ ಒಂದು ವಿಕೃತ ಸನ್ನಿವೇಶವನ್ನು ಸಾಂಸ್ಕೃತಿಕ ರಾಜಕಾರಣ ಸೃಷ್ಟಿಸಿದೆ. ಹಾಗಾಗಿ ಸಾಹಿತ್ಯದಲ್ಲಿರಬೇಕಾದ ಸೃಜನಶೀಲತೆಗೆ ಧಕ್ಕೆ ಉಂಟಾಗುತ್ತಿದೆ.

ತಮ್ಮ ಸೃಜನಶೀಲ ಸಾಹಿತ್ಯದ ಮೂಲಕ ಭೂತ, ವರ್ತಮಾನ ಮತ್ತು ಭವಿಷ್ಯತ್ತಿನ ಸಾಮಾಜಿಕ-ಸಾಂಸ್ಕೃತಿಕ ವಿದ್ಯಮಾನಗಳಿಗೆ ಸ್ಪಂದಿಸುವಂತಹ ಸಾವಿರಾರು ಸಾಹಿತ್ಯ ಕೃತಿಗಳು ಕನ್ನಡ ಸಾರಸ್ವತ ಲೋಕವನ್ನು ಮೇರು ಮಟ್ಟಕ್ಕೆ ಕೊಂಡೊಯ್ದಿದ್ದು, ಬಹುಶಃ ಈ ಕೃತಿಗಳಲ್ಲಿನ ಸೃಜನಶೀಲತೆ ಮುಂದಿನ ದಿನಗಳಲ್ಲಿ ಸಾಂಸ್ಕೃತಿಕ ರಾಜಕಾರಣದ ದಾಳಿಗೊಳಗಾಗುವ ಸಾಧ್ಯತೆಗಳು ನಿಚ್ಚಳವಾಗಿದೆ. ಕಾವ್ಯ, ನಾಟಕ ಮತ್ತು ಇತರ ಸಾಹಿತ್ಯ ಪರಿಚಾರಕರು ಸಾಂಸ್ಕೃತಿಕ ರಾಜಕಾರಣದ ಕಣ್ಗಾವಲಿಗೊಳಗಾಗಿ ತಮ್ಮ ಅಭಿವ್ಯಕ್ತಿಯನ್ನು ಸ್ವಯಂ ನಿಯಂತ್ರಣಕ್ಕೊಳಪಡಿಸುವಂತಹ ಸನ್ನಿವೇಶ ಎದುರಾದರೆ ಅಚ್ಚರಿ ಪಡಬೇಕಿಲ್ಲ. ಸಲ್ಮಾನ್ ರಶ್ದಿಯಂತಹವರು, ಪೆರುಮಾಳ್ ಮುರುಗನ್‌ರಂತಹವರು ಹೆಚ್ಚಾಗುತ್ತಲೇ ಹೋಗುತ್ತಾರೆ. ನಮ್ಮ ನಡುವಿನ ಸಾಂಸ್ಕೃತಿಕ ಸಾಕ್ಷಿ ಪ್ರಜ್ಞೆ ಬರಗೂರು ರಾಮಚಂದ್ರಪ್ಪಅವರೂ ಇದೇ ರೀತಿಯ ಬೌದ್ಧಿಕ ದಾಳಿಗೆ ತುತ್ತಾಗಿದ್ದಾರೆ.

ಇದರ ನಡುವೆಯೇ ಸ್ತ್ರೀ ಸಂವೇದನೆ ಮತ್ತು ಲಿಂಗ ಸೂಕ್ಷ್ಮತೆಯನ್ನು ನಿರಂತರವಾಗಿ ಕಳೆದುಕೊಳ್ಳುತ್ತಿರುವ ಸಮಾಜವು ಪುನಃ ಪಿತೃ ಪ್ರಧಾನತೆಯ ವಾತಾವರಣಕ್ಕೆ ಜಾರುತ್ತಿರುವುದು ಸ್ಪಷ್ಟವಾಗುತ್ತಿದೆ. ಕರ್ನಾಟಕದ ಬೌದ್ಧಿಕ-ಸಾಹಿತ್ಯ ವಲಯದಲ್ಲಿ ಮತ್ತು ಸಾರ್ವಜನಿಕ ಬದುಕಿನಲ್ಲೂ ಸ್ತ್ರೀಸಂವೇದನೆ ನಶಿಸಿಹೋಗಿರುವುದು ಇತ್ತೀಚಿನ ಮುರುಘಾ ಮಠದ ಪ್ರಕರಣದಲ್ಲಿ ಸಾಬೀತಾಗಿದೆ. ಕರ್ನಾಟಕದ ಪ್ರತಿಷ್ಠಿತ ಲಿಂಗಾಯತ ಮಠಗಳಲ್ಲೊಂದಾದ ಮುರುಘಾ ಮಠದ ಶಿವಮೂರ್ತಿ ಶರಣರು ತಮ್ಮದೇ ಮಠದ ಹಾಸ್ಟೆಲಿನಲ್ಲಿ ವ್ಯಾಸಂಗ ಮಾಡುತ್ತಿದ್ದ ಅಪ್ರಾಪ್ತ ವಯಸ್ಕ ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿರುವ ಆರೋಪ ಎದುರಿಸುತ್ತಿದ್ದಾರೆ. ದೌರ್ಜನ್ಯಕ್ಕೊಳಗಾದ ಬಾಲಕಿಯರು ತಮ್ಮ ಅಳಲನ್ನು ನ್ಯಾಯಾಂಗದ ಮುಂದೆ  ತೋಡಿಕೊಂಡಿದ್ದಾರೆ. ಅಪ್ರಾಪ್ತ ಹೆಣ್ಣುಮಕ್ಕಳ ರಕ್ಷಣೆಗಾಗಿಯೇ ರೂಪಿಸಲಾಗಿರುವ ಪೊಕ್ಸೊ ಕಾಯ್ದೆಯಡಿ ಮೊಕದ್ದಮೆಯನ್ನು ದಾಖಲಿಸಲಾಗಿದ್ದು, ಒಬ್ಬ ಬಾಲಕಿ ದಲಿತ ಸಮುದಾಯಕ್ಕೆ ಸೇರಿರುವುದರಿಂದ ಜಾತಿ ದೌರ್ಜನ್ಯದ ಆರೋಪವನ್ನೂ ಶ್ರೀಗಳ ಮೇಲೆ ಹೊರಿಸಲಾಗಿದೆ. ಪೊಕ್ಸೊ ಕಾಯ್ದೆಯ ನಿಯಮಗಳನ್ನೂ ಉಲ್ಲಂಘಿಸಿ ರಾಜ್ಯ ಸರಕಾರ ಮತ್ತು ಪೊಲೀಸ್ ವ್ಯವಸ್ಥೆ ಆಪಾದಿತ ಶರಣರನ್ನು ಒಂದು ವಾರದ ನಂತರ ಬಂಧಿಸಿರುವುದು ಆಡಳಿತ ವ್ಯವಸ್ಥೆಯಲ್ಲಿನ ಅಸೂಕ್ಷ್ಮತೆಯನ್ನು ಎತ್ತಿ ತೋರಿಸುತ್ತದೆ.

ಈ ಸನ್ನಿವೇಶದಲ್ಲಿ ಆಡಳಿತಾರೂಢ ಪಕ್ಷ ಮತ್ತು ಸರಕಾರವನ್ನೂ ಒಳಗೊಂಡಂತೆ, ಸಮಸ್ತ ನಾಡಿನ ಜನತೆ ನೊಂದ ಬಾಲಕಿಯರೊಂದಿಗೆ ನಿಲ್ಲಬೇಕಿತ್ತಲ್ಲವೇ? ಆರೋಪಿತ ವ್ಯಕ್ತಿಯ ಪ್ರತಿಷ್ಠೆ ಮತ್ತು ಸಾಮಾಜಿಕ ಸ್ಥಾನಮಾನಗಳಿಗಿಂತಲೂ ಲೈಂಗಿಕ ದೌರ್ಜನ್ಯಕ್ಕೆ ಬಲಿಯಾಗಿ ನ್ಯಾಯಕ್ಕಾಗಿ ಅಂಗಲಾಚುತ್ತಿರುವ ಹೆಣ್ಣುಮಕ್ಕಳ ಆಕ್ರಂದನಕ್ಕೆ ಸಮಸ್ತ ಸಮಾಜ ಕಿವಿಯಾಗಬೇಕಿತ್ತಲ್ಲವೇ? ನ್ಯಾಯ ದೇವತೆ ಕುರುಡು ಎನ್ನುವುದನ್ನು ಸಾಂಕೇತಿಕವಾಗಿಯಾದರೂ ನಾವು ಒಪ್ಪಿಕೊಂಡುಬಿಟ್ಟಿದ್ದೇವೆ ಆದರೆ ನ್ಯಾಯ ದೇವತೆ ವಾಲುವುದನ್ನು ಯಾವುದೇ ಸಂವೇದನಾಶೀಲ ಸಮಾಜ ಒಪ್ಪಿಕೊಳ್ಳಲು ಸಾಧ್ಯವಿಲ್ಲ. ಮುರುಘಾ ಮಠದ ಶ್ರೀಗಳು ಅಪರಾಧ ಎಸಗಿದ್ದಾರೋ ಇಲ್ಲವೋ ಎನ್ನುವುದು ಕಾನೂನು ಪ್ರಕ್ರಿಯೆಯ ನಂತರವೇ ತಿಳಿಯುತ್ತದೆ. ಆದರೆ ಹರೆಯದ ಬಾಲಕಿಯರು ಇಡೀ ರಾಜ್ಯದ ಮುಂದೆ ತಮ್ಮ ಮೇಲೆ ನಡೆದಿರುವ ದೌರ್ಜನ್ಯವನ್ನು ತೆರೆದಿಡುತ್ತಿರುವಾಗ ನಮ್ಮ ಪ್ರತಿಕ್ರಿಯೆ ಹೇಗಿರಬೇಕಿತ್ತು? ಸರಕಾರ ತನ್ನ ಮತಬ್ಯಾಂಕುಗಳ ಚಿಂತೆಯನ್ನು ಬದಿಗಿಟ್ಟು ಪೊಕ್ಸೊ ಕಾಯ್ದೆಯನ್ವಯ ಕ್ರಮ ಕೈಗೊಳ್ಳಬೇಕಿತ್ತಲ್ಲವೇ? ಸಂತ್ರಸ್ತ ಬಾಲಕಿಯರ ನೊಂದ ಮನಸ್ಸಿಗೆ ಸಾಂತ್ವನ ಹೇಳುವುದು ಕರ್ನಾಟಕದ ಜನತೆಯ ನೈತಿಕ ಕರ್ತವ್ಯವಲ್ಲವೇ?

ಸಾಂತ್ವನ ಎಂದರೆ ಬೆನ್ನು ಸವರಿ ಸಮಾಧಾನಪಡಿಸುವುದಲ್ಲ. ಆ ಬಾಲಕಿಯರಿಗೆ ಆದ ಅನ್ಯಾಯವನ್ನು ಸರಿಪಡಿಸುವುದು ಮತ್ತು ಅಪರಾಧ ಎಸಗಿದ ವ್ಯಕ್ತಿಗಳನ್ನು ಶಿಕ್ಷೆಗೊಳಪಡಿಸುವುದು. ಇಲ್ಲಿ ಅಪರಾಧ, ಅಪರಾಧಿ ಮತ್ತು ಶಿಕ್ಷೆ ಈ ಕಾನೂನಾತ್ಮಕ ಅಂಶಗಳನ್ನು ಸಾಪೇಕ್ಷ ನೆಲೆಯಲ್ಲಿ ನೋಡದೆ, ಮಾನವೀಯ ನೆಲೆಯಲ್ಲಿ ನೋಡಬೇಕಾದ್ದು ನಮ್ಮ ಕರ್ತವ್ಯವಲ್ಲವೇ? ಆದರೆ ಕರ್ನಾಟಕದ ರಾಜಕೀಯ ನಾಯಕರ ದಿವ್ಯ ಮೌನ ಅಥವಾ ತೇಲಿಕೆಯ ಹೇಳಿಕೆಗಳು, ಮಠಾಧೀಶರನ್ನು ಬಂಧಿಸಲು ಆದ ಅನಗತ್ಯ ವಿಳಂಬ ಏನನ್ನು ಸೂಚಿಸುತ್ತದೆ? ಮುರುಘಾ ಮಠಾಧೀಶರು ಹೀಗೆ ಮಾಡಲಿಕ್ಕಿಲ್ಲ ಎಂಬ ಒಂದು ಬೀಸು ಹೇಳಿಕೆಯನ್ನು ನೀಡುವ ಅಸಂಖ್ಯಾತ ಮಠಾಧೀಶರು, ರಾಜಕೀಯ ನಾಯಕರು, ಶಾಸಕರು ಮತ್ತು ಸಚಿವರು ಹೆಣ್ಣು ಕುಲಕ್ಕೆ ಯಾವ ಸಂದೇಶವನ್ನು ನೀಡುತ್ತಿದ್ದಾರೆ? ಆಪಾದಿತ ವ್ಯಕ್ತಿ ಯಾರೇ ಆದರೂ ತನ್ನ ಸ್ವಹಿತಾಸಕ್ತಿಗಾಗಿ ತನ್ನ ವಿರುದ್ಧ ಸಂಚು ಹೂಡಲಾಗಿದೆ ಎಂದು ಹೇಳುವುದು ಸ್ವಾಭಾವಿಕ. ಆದರೆ ಇಬ್ಬರು ಹೆಣ್ಣುಮಕ್ಕಳು ತಮ್ಮ ಮೇಲೆ ನಡೆದ ದೌರ್ಜನ್ಯವನ್ನು, ಮನದಾಳದ ನೋವನ್ನು ಬಹಿರಂಗವಾಗಿ ತೆರೆದಿಟ್ಟನಂತರವೂ, ನಮ್ಮ ರಾಜಕೀಯ ನಾಯಕರು, ಮಠಾಧೀಶರು ಇದೇ ‘ಸಂಚು, ಪಿತೂರಿ, ಹುನ್ನಾರಗಳ’ ಸಂಕಥನವನ್ನು ಹುಟ್ಟುಹಾಕುತ್ತಿರುವುದು ಏನನ್ನು ಸೂಚಿಸುತ್ತದೆ ?

ಹಾಗೆಯೇ ಲಿಂಗ ಸೂಕ್ಷ್ಮತೆ ಮತ್ತು ಸ್ತ್ರೀ ಸಂವೇದನೆಯನ್ನು ಪೋಷಿಸುವ ಮೂಲ ಆಕರ ಎನ್ನಬಹುದಾದ ಸಾಹಿತ್ಯ ವಲಯ, ಬೌದ್ಧಿಕ ವಲಯ ಮತ್ತು ಹಿತವಲಯದ ಮಹಿಳಾ ಸಮುದಾಯ ಈ ಬಾಲಕಿಯರ ವೇದನೆಗೆ, ಆಕ್ರಂದನಕ್ಕೆ ಕಿವುಡಾಗಿರುವುದು ಯಾವ ಕೇಡಿನ ಸಂಕೇತ? ಮುರುಘಾ ಮಠದ ಪ್ರಕರಣದಲ್ಲಿ ಒಂದು ಸಹೃದಯ ಸಮಾಜವಾಗಿ ನಾವು ನೋಡಬೇಕಿರುವುದು ಆರೋಪಿಯತ್ತ ಅಲ್ಲ ಅಥವಾ ಆರೋಪಿಗೆ ವಿಧಿಸಲಾಗುವ/ವಿಧಿಸಬಹುದಾದ ಶಿಕ್ಷೆಯತ್ತಲೂ ಅಲ್ಲ. ಅದು ಕಾನೂನು ಪ್ರಕ್ರಿಯೆಗೆ ಬಿಟ್ಟ ವಿಚಾರ. ನಾವು ನೋಡಬೇಕಿರುವುದು ನೊಂದ ಬಾಲಕಿಯರತ್ತ ಅಲ್ಲವೇ? ‘‘ಅಂಥವರು ಹಾಗೆ ಮಾಡಲಿಕ್ಕಿಲ್ಲ’’ ಎನ್ನುವ ಗೋಳಾಟದ ಮಾತುಗಳು ಅಥವಾ ಸಾತ್ವಿಕ ಸಮರ್ಥನೆ ಯಾವುದೇ ಕಾಲಘಟ್ಟದಲ್ಲೂ ಮಹಿಳೆಗೆ ಸಂಬಂಧಪಟ್ಟಂತೆ ಅಥವಾ ಲೈಂಗಿಕ ಶೋಷಣೆಗೆ ಸಂಬಂಧಪಟ್ಟಂತೆ ಅನ್ವಯಿಸಲಾಗಿಲ್ಲ. ದಿನಕ್ಕೆ 80ಕ್ಕೂ ಹೆಚ್ಚು ಅತ್ಯಾಚಾರಗಳು ನಡೆಯುತ್ತಿರುವ ಭಾರತದ ಪಿತೃಪ್ರಧಾನ ಸಮಾಜದಲ್ಲಿ ಸ್ತ್ರೀ-ಪುರುಷ ಸಂಬಂಧಗಳು ಇಂದಿಗೂ ಸಹ ಲೈಂಗಿಕ ತೃಷೆ, ಕಾಮಾಸಕ್ತಿ ಮತ್ತು ಪುರುಷಾಧಿಪತ್ಯದ ಅಟ್ಟಹಾಸದ ವಿಕೃತಿಗಳಿಂದ ಹೊರತಾಗಿಲ್ಲ ಎನ್ನುವುದನ್ನು ಗಮನಿಸುತ್ತಲೇ ಬಂದಿದ್ದೇವೆ. ಸಾಧುಸಂತರು, ಮಠಾಧೀಶರು, ಪಾದ್ರಿಗಳು, ಬಿಷಪ್‌ಗಳು, ಮೌಲ್ವಿಗಳು ಮತ್ತು ನಮ್ಮ ನಡುವಿನ ರಾಜಕೀಯ ನಾಯಕರು ವಿಭಿನ್ನ ಕಾಲಘಟ್ಟಗಳಲ್ಲಿ ಈ ವಿಕೃತಿಯನ್ನು ಪ್ರದರ್ಶಿಸುತ್ತಲೂ ಬಂದಿದ್ದಾರೆ.

ಏಕೆ ಹೀಗಾಗುತ್ತಿದೆ ಎಂದು ಯೋಚಿಸಿದಾಗ ಬಿಲ್ಕಿಸ್ ಬಾನು ಪ್ರಕರಣ ಕಣ್ಣೆದುರು ನಿಲ್ಲುತ್ತದೆ. ಅತ್ಯಾಚಾರ ಎಸಗಿದವರನ್ನು ಸನ್ಮಾನಿಸುವ ಒಂದು ಪರಂಪರೆಯನ್ನು ನಾವು ಪೋಷಿಸುತ್ತಿದ್ದೇವೆ. ಹಂತಕರನ್ನು ವೈಭವೀಕರಿಸಿ ಮೆರೆಸುವ ಸಂಸ್ಕೃತಿಯನ್ನು ಬೆಳೆಸುತ್ತಿದ್ದೇವೆ. ಅತ್ಯಾಚಾರ ಎಸಗುವ, ಹತ್ಯೆ ಮಾಡುವ ವ್ಯಕ್ತಿಗೆ ತನ್ನನ್ನು ರಕ್ಷಿಸುವ ಒಂದು ಸುಪ್ತ ವ್ಯವಸ್ಥೆ ಈ ಸಮಾಜದಲ್ಲಿದೆ ಎಂಬ ಖಾತರಿ ಇರುವುದರಿಂದಲೇ, ಮಹಿಳೆಯರ ಮೇಲಿನ ದೌರ್ಜನ್ಯ, ಅತ್ಯಾಚಾರಗಳು ಧಾರ್ಮಿಕ ಶ್ರದ್ಧಾಕೇಂದ್ರಗಳನ್ನೂ, ವಿದ್ಯಾಕೇಂದ್ರಗಳನ್ನೂ, ಆಡಳಿತ ಕೇಂದ್ರಗಳನ್ನೂ ತಲುಪಿವೆ. ಅತ್ಯಾಚಾರ ಮತ್ತು ದೌರ್ಜನ್ಯಕ್ಕೊಳಗಾದ ಮಹಿಳೆಯ ಅಂತರಾಳದ ನೋವನ್ನು, ವೇದನೆಯನ್ನು ಅರ್ಥಮಾಡಿಕೊಳ್ಳುವ ವ್ಯವಧಾನವನ್ನು ಸಮಾಜ ಕಳೆದುಕೊಂಡಿದೆ.  ಇಲ್ಲಿ ಅಪರಾಧ-ಅಪರಾಧಿ ಮತ್ತು ಕಾನೂನಾತ್ಮಕ ಶಿಕ್ಷೆಯ ಚೌಕಟ್ಟಿನಿಂದಾಚೆಗೆ ಒಂದು ನೊಂದ ಅಸಹಾಯಕ ಜೀವ ಇರುವುದನ್ನು ಸಹೃದಯ ಸಮಾಜ ಗಮನಿಸಬೇಕಲ್ಲವೇ? ಈ ಸಹೃದಯ ಸಮಾಜ ಮುರುಘಾ ಮಠದ ಪ್ರಕರಣಕ್ಕೆ ಸ್ಪಂದಿಸಿದ ರೀತಿ ಇಡೀ ರಾಜ್ಯದ ಜನತೆ ನಾಚಿ ತಲೆತಗ್ಗಿಸುವಂತೆ ಮಾಡಿದೆ.

ಒಂದೆಡೆ ಪುರುಷ ಸಮಾಜದಲ್ಲಿ ಲಿಂಗ ಸೂಕ್ಷ್ಮತೆ ಮತ್ತು ಸ್ತ್ರೀ ಸಂವೇದನೆ ನಶಿಸಿಹೋಗುತ್ತಿದ್ದರೆ ಮತ್ತೊಂದೆಡೆ ಸಾಮಾಜಿಕ ವಾತಾವರಣದಲ್ಲಿ ಲೈಂಗಿಕ ದೌರ್ಜನ್ಯ ಎನ್ನುವುದು ಕೇವಲ ಕಾನೂನು ಸುವ್ಯವಸ್ಥೆಯ ಪ್ರಶ್ನೆಯಾಗಿ ಮಾತ್ರವೇ ಕಾಣತೊಡಗಿದೆ. ಈ ಗಂಭೀರ ವಿಚಾರಕ್ಕೆ ಸಂವೇದನಾತ್ಮಕವಾಗಿ, ಸೃಜನಾತ್ಮಕವಾಗಿ ಸ್ಪಂದಿಸಬೇಕಾದ ಸಮಾಜದ ಒಂದು ವರ್ಗ ಅಥವಾ ಕೆಲವು ವರ್ಗಗಳು ತಮ್ಮದೇ ಆದ ಕಾರಣಗಳಿಗಾಗಿ ನಿಷ್ಕ್ರಿಯವಾಗಿವೆ ಅಥವಾ ನಿರ್ಲಿಪ್ತವಾಗಿವೆ. ಸಂಸ್ಕೃತಿ ಮತ್ತು ಪರಂಪರೆಯ ಬಗ್ಗೆ ಬೆನ್ನು ತಟ್ಟಿಕೊಳ್ಳುವ ಮುನ್ನ, ನಮ್ಮೊಳಗೆ ಸ್ತ್ರೀ ಸಂವೇದನೆ ಮತ್ತು ಲಿಂಗಸೂಕ್ಷ್ಮತೆ ಇದೆ ಎಂದು ಎದೆಮುಟ್ಟಿ ಹೇಳಿಕೊಳ್ಳುವ ದಾರ್ಷ್ಟ್ಯ ಸಮಾಜದಲ್ಲಿ ಕಂಡಾಗ ಮಾತ್ರವೇ ನಮ್ಮನ್ನು ನಾವು ನಾಗರಿಕರು ಎಂದು ಕರೆದುಕೊಳ್ಳಲು ಸಾಧ್ಯ. ಇದು ಸಾಧ್ಯ ವಾಗದೆ ಹೋದರೆ ಬಹುಶಃ ನಮ್ಮ ಸಮಾಜ ಮತ್ತು ನಾವು ಸಾಂಸ್ಕೃತಿಕ ಅವನತಿಯತ್ತ ಸಾಗುತ್ತಿದ್ದೇವೆ ಎಂದೇ ಭಾವಿಸಬೇಕಾಗುತ್ತದೆ.

Writer - ನಾ. ದಿವಾಕರ

contributor

Editor - ನಾ. ದಿವಾಕರ

contributor

Similar News