×
Ad

ಈ ಶಿಕ್ಷಣ ಸಂಸ್ಥೆಗಳ ದುರವಸ್ಥೆಗೆ ಕಾರಣವೇನು?

Update: 2022-09-04 10:36 IST

 ಕರ್ನಾಟಕ ರಾಜ್ಯ ಸರಕಾರದ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಕಳೆದ ಮೂರು ವರ್ಷಗಳಿಂದ ಅತ್ಯಂತ ಕೆಳಮಟ್ಟದ ಆಡಳಿತ ನಿರ್ವಹಣೆ ಮಾಡುತ್ತಿರುವ ಸ್ಪಷ್ಟ ಉದಾಹರಣೆಗಳು ಕಾಣುತ್ತಿವೆ, ಒಂದು ಕಾರಣ ಈ ಇಲಾಖೆಗೆ ಈಗಿನ ಸರಕಾರದಲ್ಲಿ ಅಲ್ಪಸಂಖ್ಯಾತ ಸಮುದಾಯದವರು ಯಾರೂ ಸಚಿವರಿಲ್ಲ, ಅಲ್ಲದೆ ಅಧಿಕಾರಿಗಳೂ ಆ ಸಮುದಾಯದವರಿಲ್ಲದೇ ಇರುವುದೇ ಇಷ್ಟೆಲ್ಲ ಅವಾಂತರಕ್ಕೆ ಕಾರಣವಾಗುತ್ತಿದೆಯೋ ಎನ್ನುವ ಅನುಮಾನ ಮೂಡುತ್ತಿದೆ.

ಬಿ.ಎಸ್. ಯಡಿಯೂರಪ್ಪನವರು ಮುಖ್ಯಮಂತ್ರಿಯಾಗಿದ್ದಾಗ ಶ್ರೀಮಂತ ಪಾಟೀಲ್‌ರವರು ಈ ಇಲಾಖೆಯ ಸಚಿವರಾಗಿದ್ದರು, ಅವರ ಆಡಳಿತದಲ್ಲಿ ಇಲಾಖೆ ಸಂಪೂರ್ಣ ನೆಲಕಚ್ಚಲು ಪ್ರಾರಂಭಿಸಿತ್ತು, ನಂತರ ಬಂದ ಪ್ರಭು ಚವ್ಹಾಣ್ ಅವರು ಇದ್ದಂತಹ ಯೋಜನೆಗಳನ್ನೂ ಅನುಷ್ಠಾನ ಮಾಡಲಿಲ್ಲ, ಈಗ ರಾಜ್ಯದ ಮುಖ್ಯಮಂತ್ರಿಯವರೇ ಕಳೆದ ಒಂದು ವರ್ಷದಿಂದ ಈ ಇಲಾಖೆಗೆ ಸಚಿವರಾಗಿದ್ದರೂ ಆಡಳಿತ ನಿರ್ವಹಣೆ ಸುಧಾರಣೆ ಕಾಣುತ್ತಿಲ್ಲ. ಅಲ್ಪಸಂಖ್ಯಾತ ಕಲ್ಯಾಣ ಇಲಾಖೆಯ ಆಡಳಿತ ನಿರ್ವಹಣೆಯ ವೈಫಲ್ಯವನ್ನು ಸೂಚಿಸಲು ಹತ್ತಾರು ಉದಾಹರಣೆಗಳನ್ನು ನೀಡಬಹುದಾದರೂ ಇಲ್ಲಿ ಬಹಳ ಪ್ರಮುಖವಾಗಿ ಪ್ರಸ್ತಾಪವಾಗ ಬೇಕಾಗಿರುವುದು ಇಲಾಖೆ ನಡೆಸುತ್ತಿರುವ ಶಾಲಾ ಕಾಲೇಜುಗಳ ದುಸ್ಥಿತಿಯ ಬಗ್ಗೆ ಹಾಗೂ ಆ ಶಾಲಾ ಕಾಲೇಜುಗಳಲ್ಲಿ ಓದುತ್ತಿರುವ ಸಾವಿರಾರು ವಿದ್ಯಾರ್ಥಿಗಳ ಶೈಕ್ಷಣಿಕ ಭವಿಷ್ಯದ ಬಗ್ಗೆ.

ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಸುಮಾರು 100 ಮೊರಾರ್ಜಿ ದೇಸಾಯಿ ವಸತಿ ಶಾಲೆಗಳನ್ನು, 29 ಡಾ.ಎ.ಪಿ.ಜೆ.ಅಬ್ದುಲ್ ಕಲಾಂ (ಸಿಬಿಎಸ್‌ಸಿ) ವಸತಿ ಶಾಲೆಗಳು, 21 ಮೊರಾರ್ಜಿ ದೇಸಾಯಿ ಪದವಿ ಪೂರ್ವ ಕಾಲೇಜುಗಳು (ವಿಜ್ಞಾನ ಹಾಗೂ ವಾಣಿಜ್ಯ) ಹಾಗೂ 5 ಮುಸ್ಲಿಮ್ ವಸತಿ ಶಾಲೆಗಳನ್ನು ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ನಡೆಸುತ್ತಿದೆ. ಅಲ್ಲದೆ 200 ಮೌಲಾನಾ ಆಝಾದ್ ಮಾದರಿ ಶಾಲೆಗಳನ್ನು ನಡೆಸುತ್ತಿದೆ.

ಈ ಎಲ್ಲಾ ಶಾಲಾ ಕಾಲೇಜುಗಳಲ್ಲಿ ಸುಮಾರು ಒಂದು ಲಕ್ಷ ವಿದ್ಯಾರ್ಥಿಗಳು ಹಿರಿಯ ಪ್ರಾಥಮಿಕ ತರಗತಿಯಿಂದ (6ನೇ ತರಗತಿ) ಹಿಡಿದು ಪಿಯುಸಿಯವರೆಗೆ ತಮ್ಮ ಶಿಕ್ಷಣ ಪೂರೈಸುತ್ತಿದ್ದಾರೆ. ಇದರಲ್ಲಿ ಬಹುತೇಕ ವಸತಿ ಶಾಲಾ ಕಾಲೇಜುಗಳಿಗೆ ಸ್ವಂತ ಕಟ್ಟಡಗಳಿವೆ ಅಲ್ಲದೆ ಅವಶ್ಯಕತೆಯಿರುವ ಕನಿಷ್ಠ ಮೂಲಭೂತ ಸೌಕರ್ಯಗಳಿವೆ ಎನ್ನಬಹುದು. ಈ ಶಾಲೆ ಕಾಲೇಜುಗಳಲ್ಲಿ ಓದುತ್ತಿರುವ ಮಕ್ಕಳಿಗೆ ಸರಕಾರ ಉಚಿತ ಊಟ, ವಸತಿ, ಸಮವಸ್ತ್ರ, ಕಾಟ್, ಬೆಡ್, ಬೆಡ್‌ಶೀಟ್, ಪುಸ್ತಕ, ಪೆನ್ನು, ಪೆನ್ಸಿಲ್, ನೋಟ್ ಬುಕ್, ಸೋಪು-ಎಣ್ಣೆ, ಶೂ, ಸಾಕ್ಸ್ ಸೇರಿದಂತೆ ಅಗತ್ಯ ವಸ್ತುಗಳನ್ನು ಪ್ರತೀ ವರ್ಷ ಪೂರೈಸುತ್ತದೆ.

ಅಲ್ಲದೆ ಮೌಲಾನಾ ಆಝಾದ್ ಮಾದರಿ ಶಾಲೆಗಳಲ್ಲಿ ಓದುವ ಮಕ್ಕಳಿಗೆ ಮಧ್ಯಾಹ್ನದ ಬಿಸಿ ಊಟ, ಹಾಲು, ಮೊಟ್ಟೆ ಸೇರಿದಂತೆ ಸಮವಸ್ತ್ರ, ಶೂ, ಸಾಕ್ಸ್, ಪುಸ್ತಕ, ಪೆನ್ನು, ಪೆನ್ಸಿಲ್, ನೋಟ್ ಬುಕ್ ಇತ್ಯಾದಿ ವಸ್ತುಗಳನ್ನು ಪೂರೈಸುತ್ತದೆ.

ಆದರೆ, ಕಳೆದ ಎರಡು ವರ್ಷಗಳಿಂದ ವಿದ್ಯಾರ್ಥಿಗಳಿಗೆ ಪ್ರತೀ ವರ್ಷದಂತೆ ಮೇ ಅಥವಾ ಜೂನ್ ತಿಂಗಳಲ್ಲಿ ಶಾಲೆಗಳು ಪ್ರಾರಂಭವಾದರೂ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಮಾತ್ರ ಸಮವಸ್ತ್ರ ಇತ್ಯಾದಿ ವಸ್ತುಗಳನ್ನು ಸಮಯಕ್ಕೆ ಸರಿಯಾಗಿ ಒದಗಿಸದೆ ಇರುವುದರಿಂದ ಮಕ್ಕಳ ಭವಿಷ್ಯಕ್ಕೆ ಮತ್ತು ಅವರ ಕಲಿಕೆಗೆ ಕಷ್ಟವಾಗುತ್ತಿದೆ. ಕಳೆದ ವರ್ಷ ಆಗಸ್ಟ್ ಮತ್ತು ಸೆಪ್ಟಂಬರ್ ತಿಂಗಳಲ್ಲಿ ಕೇಂದ್ರೀಕೃತ ವ್ಯವಸ್ಥೆಯ ಮೂಲಕ (ಅಂದರೆ ಅಲ್ಪಸಂಖ್ಯಾತರ ನಿರ್ದೇಶನಾಲಯ) ಖರೀದಿಸಿ ಸರಬರಾಜು ಮಾಡಿರುವುದರಿಂದ ವಿದ್ಯಾರ್ಥಿಗಳು ಬಹುತೇಕ ಅರ್ಧ ವರ್ಷ ಶೈಕ್ಷಣಿಕ ಚಟುವಟಿಕೆಗಳಿಂದ ವಂಚಿತರಾಗಿದ್ದಾರೆ ಎಂದೇ ಹೇಳಬಹುದು.

ಶಾಲಾ ಕಾಲೇಜುಗಳು ಮೇ ತಿಂಗಳಲ್ಲಿ ಪ್ರಾರಂಭವಾದರೂ ಒಂದು ನೋಟ್ ಬುಕ್, ಪೆನ್ ಪೆನ್ಸಿಲ್ ಇಲ್ಲದೆ ಮನೆಯಿಂದ ದೂರವಿರುವ ಮಕ್ಕಳು (ವಸತಿ ಶಾಲೆಯಲ್ಲಿ ಇರುವ ಮಕ್ಕಳು) ಏನು ಕಲಿಯಲು ಸಾಧ್ಯ?. ಕಳೆದ ವರ್ಷ ಯಾವುದಾದರೂ ಒಂದು ತಾಂತ್ರಿಕ ಸಮಸ್ಯೆಗಳನ್ನು ಹೇಳಿ ಇಲಾಖೆ ಜಾರಿಕೊಳ್ಳುವ ಪ್ರಯತ್ನ ಮಾಡಿತ್ತು. ಆದರೆ, ಈ ವರ್ಷವೂ ಸಹ ಇಂದಿನವರೆಗೂ ಅಲ್ಪಸಂಖ್ಯಾತ ಕಲ್ಯಾಣ ಇಲಾಖೆಯ 350ಕ್ಕೂ ಹೆಚ್ಚು ಶಾಲಾ ಕಾಲೇಜುಗಳಲ್ಲಿ ಕಲಿಯುವ ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಬೇಕಾಗುವ ಅಗತ್ಯ ವಸ್ತುಗಳನ್ನು ಪೂರೈಸದೆ ಇರುವುದು ಸರಕಾರದ ನೀತಿಯ ಬಗ್ಗೆ ಅನುಮಾನ ಮೂಡುವಂತೆ ಮಾಡಿದೆ. ಇಲಾಖೆಯಲ್ಲಿ ಈಗ ನಡೆಯುತ್ತಿರುವ ಬೆಳವಣಿಗೆ ನೋಡಿದಲ್ಲಿ ಇನ್ನೂ ಒಂದು ಅಥವಾ ಎರಡು ತಿಂಗಳು ಯಾವುದೇ ಅಗತ್ಯ ವಸ್ತುಗಳು ಸರಬರಾಜು ಆಗುವುದಿಲ್ಲ ಎನ್ನುವ ಸಂಶಯ ಮೂಡಿದೆ.

ಸರಕಾರ ಉದ್ದೇಶಪೂರ್ವಕವಾಗಿಯೇ ಈ ರೀತಿಯ ವ್ಯವಸ್ಥೆಯನ್ನು ನಿರ್ಮಿಸುತ್ತಿದೆಯೋ ಎನ್ನುವಂತೆ ಕಾಣುತ್ತಿದೆ. ಈ ಎಲ್ಲಾ ಶಾಲಾ ಕಾಲೇಜುಗಳಲ್ಲಿ 6ನೇ ತರಗತಿಗೆ 50 ವಿದ್ಯಾರ್ಥಿಗಳು ಅಂದರೆ ಒಂದು ವಸತಿ ಶಾಲೆಯಲ್ಲಿ 250 ವಿದ್ಯಾರ್ಥಿಗಳು (6ನೇ ತರಗತಿಯಿಂದ 10ನೇ ತರಗತಿಯವರೆಗೆ), ಪಿಯುಸಿ ಪ್ರಥಮ ವರ್ಷಕ್ಕೆ ವಿಜ್ಞಾನ ತರಗತಿಗೆ 60 ಮತ್ತು ವಾಣಿಜ್ಯ ತರಗತಿಗೆ 60 ವಿದ್ಯಾರ್ಥಿಗಳು ಅಂದರೆ ಒಂದು ಪದವಿ ಪೂರ್ವ ವಸತಿ ಕಾಲೇಜಿನಲ್ಲಿ ಪಿಯುಸಿ ಪ್ರಥಮ ಹಾಗೂ ದ್ವಿತೀಯ ವರ್ಷದ ಒಟ್ಟು 240 ವಿದ್ಯಾರ್ಥಿಗಳು ಪ್ರವೇಶ ಪಡೆಯುತ್ತಾರೆ. ಪ್ರತೀ ಶಾಲೆ, ಕಾಲೇಜುಗಳಲ್ಲಿ ಇಂತಿಷ್ಟೇ ವಿದ್ಯಾರ್ಥಿಗಳಿಗೆ ಪ್ರವೇಶ ನೀಡುವ ಬಗ್ಗೆ ಇಲಾಖೆ ಸಂಖ್ಯೆಗಳನ್ನು ನಿಗದಿಗೊಳಿಸಿದೆ. ಅಂದರೆ ಈ ವರ್ಷ ಪ್ರತಿಯೊಂದು ಶಾಲೆ ಕಾಲೇಜುಗಳಲ್ಲಿ ಎಷ್ಟು ವಿದ್ಯಾರ್ಥಿಗಳು ಒಂದು ಶೈಕ್ಷಣಿಕ ವರ್ಷದಲ್ಲಿ ಇರಬಹುದು ಎಂದು ಇಲಾಖೆಗೆ ಮೊದಲೇ ಗೊತ್ತಿರುವಾಗ ಶಾಲೆ ಕಾಲೇಜುಗಳು ಪ್ರಾರಂಭವಾಗುವ ಮೊದಲೇ ಅಗತ್ಯ ವಸ್ತುಗಳನ್ನು ಖರೀದಿಸಿ ಸಂಬಂಧಪಟ್ಟ ಜಿಲ್ಲಾ ಅಧಿಕಾರಿಗಳ ವ್ಯಾಪ್ತಿಗೆ ಸರಬರಾಜು ಮಾಡಬಹುದಾಗಿದೆ.

ಅಲ್ಲದೆ ಸರಕಾರ ಪ್ರತೀ ಆರ್ಥಿಕ ವರ್ಷದಲ್ಲಿ ಎಪ್ರಿಲ್ 1ರಿಂದಲೇ ಅನ್ವಯವಾಗುವಂತೆ ಇಲಾಖೆಗಳಿಗೆ ಅನುದಾನ ಹಂಚಿಕೆ ಮಾಡುತ್ತದೆ ಹಾಗೂ ಮೊದಲನೆಯ ಕಂತಿನ ಅನುದಾನವನ್ನು ಜೂನ್ ತಿಂಗಳಲ್ಲಿ ಬಿಡುಗಡೆ ಗೊಳಿಸುತ್ತದೆ, ಇದು ಎಲ್ಲಾ ಇಲಾಖೆಗಳಿಗೆ ತಿಳಿದಿರುವ ವಿಷಯ. ಇಷ್ಟಾದರೂ ಅಗತ್ಯ ವಸ್ತುಗಳ ಸರಬರಾಜಿಗೆ ಇಷ್ಟೊಂದು ಮೀನ ಮೇಷ ಎಣಿಸುವುದು ಯಾವ ಪುರುಷಾರ್ಥಕ್ಕೆ ಎಂದು ತಿಳಿಯದಾಗಿದೆ. ಸರಕಾರ ಈ ಶಾಲಾ ಕಾಲೇಜುಗಳ ಮಕ್ಕಳಿಗೆ ಅಗತ್ಯ ವಸ್ತುಗಳನ್ನು ಮೇ ತಿಂಗಳಲ್ಲಿ ಸರಬರಾಜು ಮಾಡಿದರೂ ಅಷ್ಟೇ ಅನುದಾನ ಖರ್ಚಾಗುತ್ತದೆ.

ಅದನ್ನೇ ಸೆಪ್ಟಂಬರ್ ಅಥವಾ ಅಕ್ಟೋಬರ್ ತಿಂಗಳಲ್ಲಿ ಸರಬರಾಜು ಮಾಡಿದರೂ ಅಷ್ಟೇ ಅನುದಾನ ಖರ್ಚಾಗುತ್ತದೆ. ಹೀಗಿದ್ದರೂ ಸರಕಾರದ ಈ ವಿಳಂಬಕ್ಕೆ ಕಾರಣವೇನು ಎನ್ನುವುದನ್ನು ಸರಕಾರವೇ ಸ್ಪಷ್ಟಪಡಿಸಬೇಕು. ಸರಕಾರದ ನಿಷ್ಕಾಳಜಿಯೋ ಅಥವಾ ನಿರ್ವಹಣೆಯ ವೈಫಲ್ಯವೋ ಅಥವಾ ಆಡಳಿತ ಹಿಡಿತ ತಪ್ಪಿರುವ ಮುನ್ಸೂಚನೆಯೋ ಅಥವಾ ಕಮಿಷನ್ ಆಸೆಗೆ ವಿಳಂಬ ಮಾಡಲಾಗುತ್ತಿದೆಯೋ? ಯಾರ ಸ್ವಾರ್ಥಕ್ಕಾಗಿ ಮಕ್ಕಳ ಭವಿಷ್ಯದ ಜೊತೆಗೆ ಚೆಲ್ಲಾಟವಾಡಲಾಗುತ್ತಿದೆ.

ಇಷ್ಟೆಲ್ಲಾ ಸಮಸ್ಯೆಗಳನ್ನು ಲಕ್ಷಾಂತರ ವಿದ್ಯಾರ್ಥಿಗಳು ಎದುರಿಸುತ್ತಿದ್ದರೂ ಇಲ್ಲಿಯವರೆಗೆ ಹಿಂದುಳಿದ ವರ್ಗಗಳ ಹಾಗೂ ಅಲ್ಪಸಂಖ್ಯಾತ ಕಲ್ಯಾಣ ಸದನ ಸಮಿತಿಯಾಗಲೀ, ಅಲ್ಪಸಂಖ್ಯಾತರ ಆಯೋಗವಾಗಲೀ, ಮಕ್ಕಳ ಹಕ್ಕುಗಳ ಆಯೋಗವಾಗಲೀ, ಸಮುದಾಯದ ಜನಪ್ರತಿನಿಧಿಗಳಾಗಲೀ ಗಮನಹರಿಸದೆ ಇರುವುದು ಕೂಡ ಆಶ್ಚರ್ಯಕರವಾಗಿದೆ. ಇತರ ಸರಕಾರಿ ಶಾಲೆಗಳಲ್ಲಿ ಪ್ರವೇಶ ಮಾತ್ರ ನೀಡುತ್ತಾರೆ, ಉಳಿದೆಲ್ಲವನ್ನೂ ಪಾಲಕರೇ ನಿರ್ವಹಿಸಬೇಕಾಗಿರುವುದರಿಂದ ಪಾಲಕರು ಹಾಗೂ ಮಕ್ಕಳು ಮಾನಸಿಕವಾಗಿ ಪ್ರತೀ ವರ್ಷ ತಯಾರಿಯಲ್ಲಿ ಇರುತ್ತಾರೆ.

ಆದರೆ, ಪಾಲಕರು ತಮ್ಮ ಮಕ್ಕಳನ್ನು ಈ ವಸತಿ ಶಾಲೆಗೆ ಸೇರಿಸುವಾಗ ಎಲ್ಲಾ ಜವಾಬ್ದಾರಿಯನ್ನು ಸರಕಾರದ ಮೇಲೆ ಹಾಕಿರುವಾಗ ಸರಕಾರ ಈ ರೀತಿ ಜವಾಬ್ದಾರಿಯಿಂದ ಹಿಂಜರಿಯಬಹುದೇ? ಇದಕ್ಕೆ ಹೊಣೆ ಯಾರು? ಮುಖ್ಯಮಂತ್ರಿಯವರೋ? ಇಲಾಖೆಯ ಅಧಿಕಾರಿಗಳೋ? ಸಮುದಾಯದ ಜನಪ್ರತಿನಿಧಿಗಳೋ? ಎನ್ನುವ ಪ್ರಶ್ನೆ ಕಾಡುತ್ತಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News