ಶಾಸಕ ಸಚಿನ್ ದೇವ್ ರೊಂದಿಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟ ದೇಶದ ಕಿರಿಯ ಮೇಯರ್ ಆರ್ಯ ರಾಜೇಂದ್ರನ್
ತಿರುವನಂತಪುರಂ: ಇಲ್ಲಿನ ಎಕೆಜಿ ಹಾಲ್‌ನಲ್ಲಿ ರವಿವಾರ ನಡೆದ ಕಾರ್ಯಕ್ರಮದಲ್ಲಿ ಮೇಯರ್ ಆರ್ಯ ರಾಜೇಂದ್ರನ್(Arya Rajendran) ಮತ್ತು ಶಾಸಕ ಸಚಿನ್ ದೇವ್(Sachin Dev) ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ದಂಪತಿಗಳು ಮಾರ್ಚ್‌ನಲ್ಲಿ ತಮ್ಮ ಮದುವೆಯ ಯೋಜನೆಯನ್ನು ಘೋಷಿಸಿದ್ದರು. ಆರ್ಯ ರಾಜೇಂದ್ರನ್ 2020 ರಲ್ಲಿ ದೇಶದ ಮೊದಲ ಕಿರಿಯ ಮೇಯರ್ ಆದ ನಂತರ ಜಾಗತಿಕ ಖ್ಯಾತಿಯನ್ನು ಗಳಿಸಿದ್ದರು.
ಬಾಲುಶ್ಶೇರಿಯ ಶಾಸಕ ಸಚಿನ್ ದೇವ್ ಮತ್ತು ಆರ್ಯ ರಾಜೇಂದ್ರನ್ ಎಸ್‌ಎಫ್‌ಐ(SFI)ನಲ್ಲಿ ಒಟ್ಟಿಗೆ ಕೆಲಸ ಮಾಡಿದ್ದರು.
“ಕುಟುಂಬ ಜೀವನವು ಅಡ್ಡಿಯಾಗುವುದಿಲ್ಲ ಅಥವಾ ನಾವಿಬ್ಬರೂ ಹೊಂದಿರುವ ಅಧಿಕೃತ ಜವಾಬ್ದಾರಿಗಳ ಮೇಲೆ ಪರಿಣಾಮ ಬೀರುವುದಿಲ್ಲ ಎಂದು ನಾವು ಖಚಿತಪಡಿಸಿಕೊಳ್ಳುತ್ತೇವೆ. ನಮಗೆ ಮತ ನೀಡಿದ ಜನತೆಗೆ ನಾವು ಬದ್ಧರಾಗಿದ್ದೇವೆ. ನಾವಿಬ್ಬರೂ ಸರಳ ವಿವಾಹವನ್ನು ಬಯಸಿದ್ದೆವು. ಎರಡೂ ಕುಟುಂಬಗಳೊಂದಿಗೆ ಓಣಂ ಆಚರಣೆಯನ್ನು ಹೊರತುಪಡಿಸಿ (ಮದುವೆ ಸಮಾರಭದ ಕುರಿತು) ನಮ್ಮಲ್ಲಿ ಬೇರೆ ಯಾವುದೇ ಯೋಜನೆಗಳಿಲ್ಲ,” ಎಂದು ಸಚಿನ್ ಹೇಳಿದ್ದಾರೆ.
ಎರಡು ದಿನಗಳ ಹಿಂದೆ ಸಚಿನ್ ದೇವ್ ಅವರೊಂದಿಗಿನ ಮದುವೆಯ ಆಮಂತ್ರಣ ಪತ್ರಿಕೆಯನ್ನು ಆರ್ಯ ರಾಜೇಂದ್ರನ್ ತಮ್ಮ ಸಾಮಾಜಿಕ ಮಾಧ್ಯಮ ಹ್ಯಾಂಡಲ್‌ಗಳಲ್ಲಿ ಹಂಚಿಕೊಂಡಿದ್ದರು. ಹಾಗೂ ಅತಿಥಿಗಳಿಗೆ ಯಾವುದೇ ಉಡುಗೊರೆಗಳನ್ನು ತರಬೇಡಿ, ಬದಲಾಗಿ ಮುಖ್ಯಮಂತ್ರಿಗಳ ವಿಪತ್ತು ಪರಿಹಾರ ನಿಧಿ ಅಥವಾ ಅನಾಥಾಶ್ರಮಗಳಿಗೆ ದೇಣಿಗೆ ನೀಡುವಂತೆ ಅವರು ವಿನಂತಿಸಿದ್ದರು.
ಇದನ್ನೂ ಓದಿ: ಮಾಜಿ ಸಚಿವೆ ಕೆ. ಕೆ. ಶೈಲಜಾ ಅವರಿಗೆ ಮ್ಯಾಗ್ಸೆಸೆ ಪ್ರಶಸ್ತಿ ತಿರಸ್ಕರಿಸಲು ಹೇಳಿದ ಸಿಪಿಎಂ