×
Ad

ಗುಜರಾತ್ ಸರಕಾರದಿಂದ ಯಾವುದೇ ಸಹಾಯ ಸಿಕ್ಕಿಲ್ಲ : 28 ವರ್ಷ ಪಾಕಿಸ್ತಾನದ ಜೈಲಿನಲ್ಲಿ ಕಳೆದ ಮಾಜಿ ಗೂಢಚಾರನ ಅಳಲು

Update: 2022-09-04 22:45 IST

ಅಹ್ಮದಾಬಾದ್, ಸೆ. 4: ಬದುಕು ಮರು ಆರಂಭಿಸಲು ಗುಜರಾತ್ ಸರಕಾರ ಒಂದೇ ಒಂದು ರೂಪಾಯಿ ನೆರವು ನೀಡಿಲ್ಲ ಎಂದು ಬೇಹುಗಾರಿಕೆ ಆರೋಪದಲ್ಲಿ ಬಂಧಿತನಾಗಿ 28ಕ್ಕೂ ಅಧಿಕ ವರ್ಷಗಳ ಕಾಲ ಪಾಕಿಸ್ತಾನದ ಕಾರಾಗೃಹದಲ್ಲಿದ್ದು, ಈಗ ಬಿಡುಗಡೆಯಾಗಿ ಗುಜರಾತ್‌ನಲ್ಲಿರುವ ಕುಲದೀಪ್ ಯಾದವ್ ಅವರು ಹೇಳಿದ್ದಾರೆ.

“ನನ್ನನ್ನು ಭೇಟಿಯಾಗಲು ಸರಕಾರದ ಕಡೆಯಿಂದ ಯಾರೊಬ್ಬರೂ ಬಂದಿಲ್ಲ. ದೇಶಕ್ಕೆ ನಾನು ತುಂಬಾ ತ್ಯಾಗ ಮಾಡಿದೆ. ಆದರೆ, ನನಗೆ ಏನೂ ಸಿಕ್ಕಿಲ್ಲ.   1991 ಮಾರ್ಚ್ 15ರಂದು ಗೂಢಚಾರನಾಗಿ ಪಾಕಿಸ್ತಾನಕ್ಕೆ   ಕಳುಹಿಸುವಾಗ ನನಗೆ 27 ವರ್ಷ” ಎಂದು ಅವರು ಹೇಳಿದ್ದಾರೆ.

“ನನಗೆ ಮನೆ ಹಾಗೂ ಹಣಕಾಸಿನ ನೆರವಿನ ಅಗತ್ಯ ಇದೆ. ನಾನು ಆಗ ಮಾತ್ರ ಗೌರವಯುತವಾಗಿ ಬದುಕಲು ಸಾಧ್ಯ. ನಾನು ಈಗ ನನ್ನ ಕಿರಿಯ ಸಹೋದರ ದಿಲೀಪ್ ಹಾಗೂ ಸಹೋದರಿ ರೇಖಾ ಅವರನ್ನು ಅವಲಂಬಿಸಿದ್ದೇನೆ. ನಿವೃತ್ತ ಸೇನಾ ಸಿಬ್ಬಂದಿಯಂತೆ ನನಗೆ ಕೂಡ ಪಿಂಚಣಿ ಹಾಗೂ ಇತರ ಸೌಲಭ್ಯಗಳು ಸಿಗಬೇಕು” ಎಂದು ಅವರು ಹೇಳಿದ್ದಾರೆ.

ಕುಲದೀಪ್ ಯಾದವ್ ಅವರನ್ನು 1994 ಜೂನ್ 22ರಂದು ಪಂಜಾಬ್‌ನ ಒಕಾರಾ ಜಿಲ್ಲೆಯ ಮಂಡಿ ಅಹ್ಮದ್ ಅಬಾದ್‌ನಿಂದ ಪಾಕಿಸ್ತಾನದ ಭದ್ರತಾ ಪಡೆ ಬಂಧಿಸಿತ್ತು ಹಾಗೂ 3 ವರ್ಷಗಳ ಕಾಲ ವಶದಲ್ಲಿ ಇರಿಸಿತ್ತು. ಅನಂತರ ಸೇನಾ ನ್ಯಾಯಾಲಯ ಬೇಹುಗಾರಿಕೆ ಆರೋಪದಲ್ಲಿ ಅವರಿಗೆ 25 ವರ್ಷ  ಕಾರಾಗೃಹ ಶಿಕ್ಷೆ ವಿಧಿಸಿತ್ತು. ಕಳೆದ ಆಗಸ್ಟ್‌ನಲ್ಲಿ ಅವರನ್ನು ವಾಘಾ ಗಡಿಯ ಮೂಲಕ ಭಾರತಕ್ಕೆ ಕಳುಹಿಸಲಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News