ಪುತ್ರನ ಸಹಪಾಠಿಗೆ ವಿಷ ಉಣಿಸಿದ ಮಹಿಳೆಯ ಬಂಧನ
ಕರೈಕಲ್, ಸೆ. 4: ಸಹಪಾಠಿಯ ತಾಯಿಯಿಂದ ವಿಷಪ್ರಾಸನಕ್ಕೆ ಒಳಗಾಗಿದ್ದಾನೆ ಎಂದು ಹೇಳಲಾದ 13 ವರ್ಷದ ಬಾಲಕ ಚಿಕಿತ್ಸೆ ಫಲಕಾರಿಯಾಗದೆ ಶನಿವಾರ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾನೆ.
ಕಳೆದ ವಾರ ಶಾಲೆಯ ವಾರ್ಷಿಕ ದಿನಾಚರಣೆಯ ಪೂರ್ವಾಭ್ಯಾಸವನ್ನು ಮುಗಿಸಿಕೊಂಡು ಮನೆಗೆ ಹಿಂದಿರುಗಿದ ಖಾಸಗಿ ಶಾಲೆಯ 8ನೇ ತರಗತಿ ವಿದ್ಯಾರ್ಥಿ ಬಾಲಾ ಮಣಿಕಂಠನ್‌ಗೆ ಅಸ್ವಸ್ಥತೆ ಕಾಣಿಸಿಕೊಂಡಿತ್ತು. ಶಾಲೆಯಲ್ಲಿ ಏನಾದರೂ ಸೇವಿಸಿದ್ದಿಯಾ ಎಂದು ಆತನ ತಾಯಿ ಕೇಳಿದ್ದರು. ಆಗ ಆತ ತಾನು ಕಾವಲುಗಾರ ನೀಡಿದ್ದ ಜ್ಯೂಸ್ ಕುಡಿದಿರುವುದಾಗಿ ತಿಳಿಸಿ ಕುಸಿದು ಬಿದ್ದಿದ್ದ. ಕೂಡಲೇ ಆತನನ್ನು ಕಾರೈಕ್ಕಲ್ ಸರಕಾರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು.
ಕಾವಲುಗಾರ ಜ್ಯೂಸ್ ಯಾಕೆ ನೀಡಿದ ಎಂದು ಬಾಲಾನ ಹೆತ್ತವರು ಹಾಗೂ ಸಂಬಂಧಿಕರು ವಿಚಾರಣೆ ನಡೆಸಿದ್ದರು. ಈ ಸಂದರ್ಭ ಕಾವಲುಗಾರ ಮಹಿಳೆಯೊಬ್ಬರು ಆಗಮಿಸಿ ಎರಡು ಜ್ಯೂಸ್ ಬಾಟಲ್‌ಗಳನ್ನು ನೀಡಿದ್ದರು. ಬಾಲಾನ ಮನೆಯಿಂದ ಕೊಟ್ಟು ಕಳುಹಿಸಲಾಗಿದೆ ಎಂದು ಆ ಮಹಿಳೆ ತಿಳಿಸಿದ್ದರು ಎಂದು ಹೇಳಿದ್ದ.
ಸಿಸಿಟಿವಿ ದೃಶ್ಯಾವಳಿಯನ್ನು ವೀಕ್ಷಿಸಿದಾಗ ಮಹಿಳೆ ಎರಡು ಜ್ಯೂಸ್ ಬಾಟಲಿಗಳನ್ನು ಕಾವಲುಗಾರನಿಗೆ ನೀಡುತ್ತಿರುವುದು ಕಂಡು ಬಂದಿತ್ತು. ಅನಂತರ ಆಕೆಯನ್ನು ಬಾಲಾನ ಸಹಪಾಠಿ ಅರುಲ್ ಮೇರಿಯ ತಾಯಿ ಸಗಯಾರಾಣಿ ವಿಕ್ಟೋರಿಯಾ ಎಂದು ಗುರುತಿಸಲಾಗಿತ್ತು.
ಬಾಲಾ ಶನಿವಾರ ರಾತ್ರಿ ಆಸ್ಪತ್ರೆಯಲ್ಲಿ ಮೃತಪಟ್ಟ ಬಳಿಕ ಆತನ ಹೆತ್ತವರು ಹಾಗೂ ಸಂಬಂಧಿಕರು ನ್ಯಾಯಕ್ಕಾಗಿ ಹೋರಾಟ ನಡೆಸಿದ್ದಾರೆ. ಅನಂತರ ಸಗಯಾರಾಣಿ ವಿಕ್ಟೋರಿಯಾ ಅವರನ್ನು ಪೊಲೀಸರು ಬಂಧಿಸಿದ್ದಾರೆ.
ತನ್ನ ಪುತ್ರ ಅರುಲ್ ಮೇರಿ ಹಾಗೂ ಬಾಲನ ನಡುವೆ ಅಂಕ ಹಾಗೂ ತರಗತಿಯಲ್ಲಿ ರ್ಯಾಂಕ್ ಪಡೆಯುವಲ್ಲಿ ಸ್ಪರ್ಧೆ ಇತ್ತು. ಇದರಿಂದ ಅಸಮಾಧಾನಗೊಂಡು ತಾನು ಬಾಲಾನಿಗೆ ವಿಷ ಬೆರೆಸಿದ ಜ್ಯೂಸ್ ನೀಡಿದ್ದೆ ಎಂದು ಸಗಯರಾಣಿ ಪೊಲೀಸ್ ವಿಚಾರಣೆ ವೇಳೆ ಒಪ್ಪಿಕೊಂಡಿದ್ದಾರೆ.