×
Ad

ಲಂಡನ್‌ನಲ್ಲಿ ಕಳವಾಗಿದ್ದ ಐಷಾರಾಮಿ ಕಾರು ಪಾಕಿಸ್ತಾನದಲ್ಲಿ ಪತ್ತೆ

Update: 2022-09-04 23:17 IST

ಇಸ್ಲಮಾಬಾದ್, ಸೆ.4: ಕೆಲವು ವಾರಗಳ ಹಿಂದೆ ಲಂಡನ್‌ನಲ್ಲಿ ಕಳವಾಗಿದ್ದ ಐಷಾರಾಮಿ ಬೆಂಟ್ಲೆ ಕಾರು ಪಾಕಿಸ್ತಾನದ ಕರಾಚಿಯಲ್ಲಿನ ಬಂಗಲೆಯಲ್ಲಿ ಪತ್ತೆಯಾಗಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ.

ಬ್ರಿಟನ್‌ನ ರಾಷ್ಟ್ರೀಯ ಅಪರಾಧ ಪತ್ತೆ ಏಜೆನ್ಸಿಯ ಮಾಹಿತಿಯಂತೆ ಕರಾಚಿಯ ಕಸ್ಟಮ್ಸ್ ಜಾರಿ ಪ್ರಾಧಿಕಾರ(ಸಿಸಿಇ)ದ ಅಧಿಕಾರಿಗಳು ಕರಾಚಿ ನಗರದ ಐಷಾರಾಮಿ ಡಿಎಚ್‌ಎ ಪ್ರದೇಶದ ನಿವಾಸವೊಂದರ ಕಾರ್‌ಪಾರ್ಕಿಂಗ್ ಸ್ಥಳದಲ್ಲಿ ನಿಲ್ಲಿಸಲಾಗಿದ್ದ ಬೆಂಟ್ಲೆ ಮುಲ್ಸಾನೆ ಸೆಡಾನ್ ಕಾರನ್ನು ವಶಕ್ಕೆ ಪಡೆದಿದ್ದಾರೆ. ಕಾರನ್ನು ಕದ್ದವರು ಅದರಲ್ಲಿದ್ದ ‘ಟ್ರೇಸಿಂಗ್ ಟ್ರ್ಯಾಕರ್’( ಕಾರಿನ ಜಾಡು ಪತ್ತೆಹಚ್ಚುವ ಸಾಧನ) ಅನ್ನು ಸ್ವಿಚ್ ಆಫ್ ಮಾಡಲು ಮರೆತಿದ್ದರಿಂದ ಕಾರು ಇರುವ ಸ್ಥಳದ ಬಗ್ಗೆ ಮಾಹಿತಿ ಲಭಿಸಿದೆ ಎಂದು ಬ್ರಿಟನ್ ಅಧಿಕಾರಿಗಳು ಹೇಳಿದ್ದಾರೆ. ಕಾರಿಗೆ ನಕಲಿ ನೋಂದಣಿ ಸಂಖ್ಯೆ ಅಂಟಿಸಲಾಗಿತ್ತು. ಮನೆಯ ಮಾಲಕ ಮತ್ತು ಕಾರನ್ನು ಮಾರಿದ ಬ್ರೋಕರ್‌ನನ್ನು ಬಂಧಿಸಿ ವಿಚಾರಣೆ ನಡೆಸಲಾಗುತ್ತಿದೆ. ಲಂಡನ್‌ನಲ್ಲಿ ಕದ್ದ ಕಾರನ್ನು ಪೂರ್ವ ಯುರೋಪಿಯನ್ ದೇಶದ ಉನ್ನತ ರಾಜತಾಂತ್ರಿಕ ಅಧಿಕಾರಿಯ ದಾಖಲೆ ಪತ್ರಗಳನ್ನು ಬಳಸಿ ಪಾಕಿಸ್ತಾನಕ್ಕೆ ಆಮದು ಮಾಡಿಕೊಳ್ಳಲಾಗಿದ್ದು ಈ ರಾಜತಾಂತ್ರಿಕನ್ನು ಆ ದೇಶ ಮರಳಿ ಕರೆಸಿಕೊಂಡಿದೆ. ಈ ಪ್ರಕರಣದಲ್ಲಿ 300 ಮಿಲಿಯನ್ ರೂಪಾಯಿಗೂ ಅಧಿಕ ಮೊತ್ತದ ತೆರಿಗೆ ತಪ್ಪಿಸಲಾಗಿದ್ದು ಇದರ ಹಿಂದೆ ವಂಚಕರ ಜಾಲವೊಂದು ಕಾರ್ಯಾಚರಿಸುತ್ತಿರುವ ಮಾಹಿತಿಯಿದೆ ಎಂದು ವರದಿಯಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News