×
Ad

ಲಂಡನ್‌ನಲ್ಲಿ ಬ್ರಿಟಿಷರಿಗಿಂತ ಹೆಚ್ಚಿನ ಭಾರತೀಯರು ಸ್ವಂತ ಆಸ್ತಿ ಹೊಂದಿದ್ದಾರೆ; ಏಕೆ ಎನ್ನುವುದು ಇಲ್ಲಿದೆ

Update: 2022-09-05 19:09 IST

ಹೊಸದಿಲ್ಲಿ: ಬ್ರಿಟನ್‌ನ ರಾಜಧಾನಿ ಲಂಡನ್‌ನಲ್ಲಿ(London) ಬ್ರಿಟಿಷರಿಗಿಂತ ಹೆಚ್ಚಿನ ಭಾರತೀಯರು(Indians) ಸ್ವಂತ ಆಸ್ತಿಗಳನ್ನು(property) ಹೊಂದಿದ್ದಾರೆ. ತಲೆಮಾರುಗಳಿಂದಲೂ ಬ್ರಿಟನ್‌ನಲ್ಲಿ ವಾಸವಾಗಿರುವ ಭಾರತೀಯರು, ಎನ್ನಾರೈಗಳು, ಇತರೆಡೆಗಳಲ್ಲಿ ವಾಸವಾಗಿರುವ ಹೂಡಿಕೆದಾರರು, ಶಿಕ್ಷಣಕ್ಕಾಗಿ ಬ್ರಿಟನ್‌ಗೆ ಪ್ರಯಾಣಿಸುವ ವಿದ್ಯಾರ್ಥಿಗಳು ಮತ್ತು ಕುಟುಂಬಗಳು ಲಂಡನ್‌ನಲ್ಲಿ ಸ್ವಂತ ಆಸ್ತಿಗಳನ್ನು ಹೊಂದಿರುವ ಅತ್ಯಂತ ದೊಡ್ಡ ಗುಂಪಾಗಿದ್ದರೆ, ಬ್ರಿಟಿಷರು ಮತ್ತು ಪಾಕಿಸ್ತಾನಿಗಳು ನಂತರದ ಸ್ಥಾನಗಳಲ್ಲಿದ್ದಾರೆ ಎಂದು ಲಂಡನ್‌ನ ರಿಯಲ್ ಎಸ್ಟೇಟ್ ಸಂಸ್ಥೆ ಬ್ಯಾರಟ್ ಲಂಡನ್ ಹೇಳಿದೆ.

ಬ್ರಿಟನ್ ಮತ್ತು ಭಾರತದಲ್ಲಿ ವಾಸವಿರುವ ಈ ಭಾರತೀಯ ಹೂಡಿಕೆದಾರರು ಲಂಡನ್‌ನಲ್ಲಿ ಒಂದು, ಎರಡು ಅಥವಾ ಮೂರು ಬೆಡ್‌ರೂಮ್‌ಗಳ ಅಪಾರ್ಟ್‌ಮೆಂಟ್ ಖರೀದಿಗಾಗಿ 2.90 ಲ.ದಿಂದ 4.50 ಲ.ಪೌಂಡ್‌ಗಳವರೆಗೂ ತೆರಲು ಸಿದ್ಧವಾಗಿದ್ದಾರೆ ಎಂದು financialexpress.com ವರದಿ ಮಾಡಿದೆ.

‘ಲಂಡನ್‌ನಲ್ಲಿ ಆಸ್ತಿಗಳನ್ನು ಖರೀದಿಸಲು ಮತ್ತು ಸ್ಥಿರ ಹಾಗೂ ದೀರ್ಘಾವಧಿಯ ಆಸ್ತಿ ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಲು ಬಯಸುವ ಭಾರತೀಯ ಹೂಡಿಕೆದಾರರಿಂದ ಹೆಚ್ಚಿನ ಬೇಡಿಕೆಯನ್ನು ನಾವು ನೋಡುತ್ತಿದ್ದೇವೆ. ಲಂಡನ್‌ನ ಹೊರಗೆ ನಮ್ಮ ಹೆಚ್ಚಿನ ವಸತಿಗಳು ಬ್ರಿಟಿಷ್‌ರಿಗೆ ಮಾರಾಟವಾಗುತ್ತಿವೆ. ಈ ಆಸ್ತಿಗಳನ್ನು ಖರೀದಿಸುವ ಅವರು ಅಲ್ಲಿ ವಾಸಿಸುತ್ತಿದ್ದಾರೆ’ ಎಂದು ಬ್ಯಾರಟ್ ಲಂಡನ್‌ನ ನಿರ್ದೇಶಕ ಸ್ಟುವರ್ಟ್ ಲೆಸ್ಲಿ ಹೇಳಿದರು.

ಲಂಡನ್‌ನಲ್ಲಿ ಬ್ಯಾರಟ್‌ನ ಮಾರಾಟಗಳಲ್ಲಿ ಸುಮಾರು ಶೇ.30ರಷ್ಟು ಖರೀದಿದಾರರು ಶುದ್ಧ ಹೂಡಿಕೆದಾರ ( ಈ ಆಸ್ತಿಗಳನ್ನು ಬಾಡಿಗೆಗೆ ನೀಡಲು ಬಯಸುವವರು)ರಾಗಿದ್ದಾರೆ ಮತ್ತು ಇದರಲ್ಲಿ ಶೇ.30ರಷ್ಟು ಅಂತರಾಷ್ಟ್ರೀಯ ಮಾರುಕಟ್ಟೆಗಳಿಂದ ಖರೀದಿದಾರರು ಒಳಗೊಂಡಿದ್ದಾರೆ.

ನೈಟ್ ಫ್ರಾಂಕ್ ವರದಿಯಂತೆ ಶೇ.10ರಷ್ಟು ಭಾರತದ ಅತ್ಯಂತ ಶ್ರೀಮಂತರು (ಕನಿಷ್ಠ 30 ಮಿ.ಡಾ.ಗಳ ನಿವ್ವಳ ಸಂಪತ್ತು ಹೊಂದಿರುವವರು) 2022ರಲ್ಲಿ ಹೊಸ ಮನೆಯನ್ನು ಖರೀದಿಸಲು ಯೋಜಿಸಿದ್ದಾರೆ ಮತ್ತು ಅವರು ದೇಶೀಯ ಮಾರುಕಟ್ಟೆಯಲ್ಲಿ ಹೂಡಿಕೆಗೆ ಹೆಚ್ಚಿನ ಆದ್ಯತೆ ನೀಡಿದ್ದಾರೆ. ಬ್ರಿಟನ್, ಯುಎಇ ಮತ್ತು ಅಮೆರಿಕ ಅವರ ನಂತರದ ಆದ್ಯತೆಗಳಾಗಿವೆ.

ಲಂಡನ್ ವಾಣಿಜ್ಯ ಮತ್ತು ಶಿಕ್ಷಣ ಕೇಂದ್ರವಾಗಿರುವ ಜೊತೆಗೆ ಹೂಡಿಕೆದಾರರಿಗೆ ವಿಶ್ವದ ಪ್ರಮುಖ ಹೆಬ್ಬಾಗಿಲುಗಳಲ್ಲೊಂದೂ ಆಗಿರುವುದರಿಂದ ಭಾರತೀಯ ಹೂಡಿಕೆದಾರರು ಮತ್ತು ಮನೆ ಖರೀದಿದಾರರಲ್ಲಿ ಜನಪ್ರಿಯವಾಗಿದೆ. ಅಲ್ಲದೆ ಪ್ರತಿ ಚದುರಡಿಯ ಬೆಲೆ ಲಂಡನ್ ಮತ್ತು ಮುಂಬೈನಲ್ಲಿ ಹೆಚ್ಚುಕಡಿಮೆ ಒಂದೇ ಆಗಿರುವುದರಿಂದ ಮತ್ತು ವಹಿವಾಟುಗಳನ್ನು ಕಡಿಮೆ ಸಂಕೀರ್ಣಗೊಳಿಸುವ ಒಂದೇ ರೀತಿಯ ಕಾನೂನು ವ್ಯವಸ್ಥೆಗಳನ್ನು ಹೊಂದಿರುವುದರಿಂದಲೂ ಭಾರತೀಯ ಮನೆ ಖರೀದಿದಾರರು ಲಂಡನ್‌ನ ರಿಯಲ್ ಎಸ್ಟೇಟ್ ಮಾರ್ಕೆಟ್‌ನತ್ತ ಕಣ್ಣು ಹಾಯಿಸುವುದು ಸಹಜವೇ ಆಗಿದೆ. 

ಭಾರತಿಯರು ಲಂಡನ್‌ನಲ್ಲಿ ಮನೆಗಳಲ್ಲಿ ಹೂಡಿಕೆ ಮಾಡುವ ಇತಿಹಾಸದೊಂದಿಗೆ ಮಾರುಕಟ್ಟೆಯ ಮೂಲಭೂತ ಅಂಶಗಳು ಮತ್ತು ವಿಶ್ವಾಸ ಭಾರತೀಯರ ಪಾಲಿಗೆ ಆಸ್ತಿಗಳ ಖರೀದಿ ಅನುಕೂಲಕರವಾಗಲು ಕಾರಣವಾಗಿದೆ. ಪ್ರಸಕ್ತ ವಿನಿಮಯ ದರಗಳು ಮತ್ತು ಮಾರುಕಟ್ಟೆ ಉಪಸ್ಥಿತಿಯಿಂದಾಗಿ ಉತ್ತಮ ಪ್ರತಿಫಲಗಳು ದೊರೆಯುತ್ತಿರುವುದರಿಂದ ಭಾರತೀಯರು ಬ್ರಿಟನ್ ವಸತಿ ಮಾರುಕಟ್ಟೆಯಲ್ಲಿ ಹೂಡಿಕೆಗೆ ಕಾತುರರಾಗಿದ್ದಾರೆ. ಯುಎಇ ಅಥವಾ ಭಾರತಕ್ಕೆ ಹೋಲಿಸಿದರೆ ಬ್ರಿಟನ್ ಹೆಚ್ಚು ಸುರಕ್ಷಿತ ಮಾರುಕಟ್ಟೆಯಾಗಿದೆ ಎಂದು ಲೆಸ್ಲಿ ತಿಳಿಸಿದರು.

ಇದನ್ನೂ ಓದಿ: ಲಂಡನ್‌ನಲ್ಲಿ ಕಳವಾಗಿದ್ದ ಐಷಾರಾಮಿ  ಕಾರು ಪಾಕಿಸ್ತಾನದಲ್ಲಿ ಪತ್ತೆ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News