×
Ad

5,000 ಕಾರುಗಳ ಕಳ್ಳತನ,ಕೊಲೆಗಳು,ಮೂವರು ಪತ್ನಿಯರು: ಇದು ಆಟೋ ಚಾಲಕನ 27 ವರ್ಷಗಳ ಪಯಣದ ಕಥೆ

Update: 2022-09-05 21:53 IST
photo : NDTV

ಹೊಸದಿಲ್ಲಿ,ಸೆ.5: ಕಳೆದ 27 ವರ್ಷಗಳಲ್ಲಿ ದೇಶದ ವಿವಿಧ ಭಾಗಗಳಿಂದ 5,000ಕ್ಕೂ ಅಧಿಕ ಕಾರುಗಳನ್ನು ಕದ್ದಿರುವ 'ಭಾರತದ ಅತ್ಯಂತ ದೊಡ್ಡ ಕಾರು ಕಳ್ಳ ' ಅನಿಲ ಚೌಹಾಣನನ್ನು ದಿಲ್ಲಿ ಪೊಲೀಸರು ಸೋಮವಾರ ಬಂಧಿಸಿದ್ದಾರೆ. ದಿಲ್ಲಿ,ಮುಂಬೈ ಮತ್ತು ಈಶಾನ್ಯ ರಾಜ್ಯಗಳಲ್ಲಿ ಆಸ್ತಿಗಳನ್ನು ಹೊಂದಿರುವ ಚೌಹಾಣ ಐಷಾರಾಮಿ ಜೀವನ ನಡೆಸುತ್ತಿದ್ದ ಎಂದು ಪೊಲೀಸರು ತಿಳಿಸಿದರು.

ಮಾಹಿತಿಯ ಮೇರೆಗೆ ದಿಲ್ಲಿಯ ದೇಶಬಂಧು ಗುಪ್ತಾ ರೋಡ್ ಪ್ರದೇಶದಲ್ಲಿ ಚೌಹಾಣನನ್ನು ಪೊಲೀಸರು ಬಂಧಿಸಿದ್ದಾರೆ.

ಪೊಲೀಸರು ತಿಳಿಸಿರುವಂತೆ ಚೌಹಾಣ ಪ್ರಸ್ತುತ ಶಸ್ತ್ರಾಸ್ತ್ರಗಳ ಕಳ್ಳಸಾಗಣೆಯಲ್ಲಿ ತೊಡಗಿಕೊಂಡಿದ್ದ. ಆತ ಉತ್ತರ ಪ್ರದೇಶಕ್ಕೆ ಶಸ್ತ್ರಾಸ್ತ್ರಗಳನ್ನು ಸಾಗಿಸುತ್ತಿದ್ದ ಮತ್ತು ಈಶಾನ್ಯ ರಾಜ್ಯಗಳಲ್ಲಿಯ ನಿಷೇಧಿತ ಸಂಘಟನೆಗಳಿಗೆ ಅವುಗಳನ್ನು ಪೂರೈಸುತ್ತಿದ್ದ.

ದಿಲ್ಲಿಯ ಖಾನ್‌ಪುರ ಪ್ರದೇಶದಲ್ಲಿ ವಾಸವಾಗಿದ್ದಾಗ ಚೌಹಾಣ ಆಟೋರಿಕ್ಷಾ ಚಲಾಯಿಸುತ್ತಿದ್ದ. 1995ರ ನಂತರ ಆತ ಕಾರುಗಳ ಕಳ್ಳತನವನ್ನು ಆರಂಭಿಸಿದ್ದ. 90ರ ದಶಕದಲ್ಲಿ ಚೌಹಾಣ ಹೆಚ್ಚಾಗಿ ಮಾರುತಿ 800 ಕಾರುಗಳನ್ನು ಕಳವು ಮಾಡುತ್ತಿದ್ದ. ದೇಶದ ವಿವಿಧ ಭಾಗಗಳಿಂದ ಕಾರುಗಳನ್ನು ಕಳವು ಮಾಡುತ್ತಿದ್ದ ಆತ ಅವುಗಳನ್ನು ನೇಪಾಳ,ಜಮ್ಮು-ಕಾಶ್ಮೀರ ಮತ್ತು ಈಶಾನ್ಯ ರಾಜ್ಯಗಳಲ್ಲಿ ಮಾರಾಟ ಮಾಡಿದ್ದ.

ಕಳ್ಳತನದ ಸಂದರ್ಭಗಳಲ್ಲಿ ಕೆಲವು ಟ್ಯಾಕ್ಸಿ ಚಾಲಕರನ್ನೂ ಆತ ಕೊಲೆ ಮಾಡಿದ್ದ.

ಅಂತಿಮವಾಗಿ ಅಸ್ಸಾಮಿಗೆ ತೆರಳಿದ್ದ ಚೌಹಾಣ ಅಲ್ಲಿ ವಾಸವಾಗಿದ್ದ. ಅಪರಾಧಗಳಿಂದ ಗಳಿಸಿದ್ದ ಅಪಾರ ಹಣದಿಂದ ದಿಲ್ಲಿ,ಮುಂಬೈ ಮತ್ತು ಈಶಾನ್ಯ ರಾಜ್ಯಗಳಲ್ಲಿ ಆಸ್ತಿಗಳನ್ನು ಖರೀದಿಸಿದ್ದ. ಜಾರಿ ನಿರ್ದೇಶನಾಲಯವೂ ಆತನ ವಿರುದ್ಧ ಅಕ್ರಮ ಹಣ ವರ್ಗಾವಣೆ ಪ್ರಕರಣವನ್ನು ದಾಖಲಿಸಿತ್ತು.

ಹಲವಾರು ಬಾರಿ ಬಂಧಿಸಲ್ಪಟ್ಟಿದ್ದ ಚೌಹಾಣ 2015ರಲ್ಲಿ ಕಾಂಗ್ರೆಸ್ ಶಾಸಕನೊಂದಿಗೆ ಬಂಧಿತನಾಗಿದ್ದ. ಐದು ವರ್ಷಗಳ ಜೈಲು ಶಿಕ್ಷೆಯನ್ನು ಅನುಭವಿಸಿದ ಬಳಿಕ 2020ರಲ್ಲಿ ಬಿಡುಗಡೆಗೊಂಡಿದ್ದ. ಚೌಹಾಣ ವಿರುದ್ಧ 180 ಪ್ರಕರಣಗಳು ದಾಖಲಾಗಿವೆ.

ಮೂವರು ಪತ್ನಿಯರು ಮತ್ತು ಏಳು ಮಕ್ಕಳನ್ನು ಹೊಂದಿರುವ ಚೌಹಾಣ ಅಸ್ಸಾಮಿನಲ್ಲಿ ಸರಕಾರಿ ಗುತ್ತಿಗೆದಾರನಾಗಿದ್ದ ಮತ್ತು ಅಲ್ಲಿಯ ಸ್ಥಳೀಯ ನಾಯಕರ ಸಂಪರ್ಕದಲ್ಲಿದ್ದ ಎಂದು ಪೊಲೀಸರು ತಿಳಿಸಿದರು. ಚೌಹಾಣ ಬಳಿಯಿಂದ ಆರು ಪಿಸ್ತೂಲುಗಳು ಮತ್ತು ಏಳು ಗುಂಡುಗಳನ್ನು ವಶಪಡಿಸಿಕೊಳ್ಳಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News