ರಾಹುಲ್ ಗಾಂಧಿಯನ್ನು ಭೇಟಿಯಾದ ನಿತೀಶ್ ಕುಮಾರ್: ಪ್ರತಿಪಕ್ಷಗಳ ಒಕ್ಕೂಟಕ್ಕೆ ತಯಾರಿ
ಹೊಸದಿಲ್ಲಿ: ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್(Nitish Kumar) ಇಂದು ಸಂಜೆ ಕಾಂಗ್ರೆಸ್(Congress) ನಾಯಕ ರಾಹುಲ್ ಗಾಂಧಿ(Rahul Gandhi) ಅವರನ್ನು ಅವರ ತುಘಲಕ್ ರಸ್ತೆಯ ನಿವಾಸದಲ್ಲಿ ಭೇಟಿಯಾದರು. ಉಭಯ ನಾಯಕರ ಚರ್ಚೆಯು ಸಂಪೂರ್ಣವಾಗಿ 2024 ರ ಚುನಾವಣೆಯಲ್ಲಿ ವಿರೋಧ ಪಕ್ಷಗಳನ್ನು ಒಗ್ಗೂಡಿಸುವ ಬಗ್ಗೆಯಾಗಿತ್ತು ಎಂದು ಮೂಲಗಳು ತಿಳಿಸಿವೆ. ಚರ್ಚೆಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ನಿತೀಶ್ ಕುಮಾರ್ ಉನ್ನತ ಹುದ್ದೆಯ ಬಗ್ಗೆ ಮಹತ್ವಾಕಾಂಕ್ಷೆಯಿಲ್ಲ ಎಂದು ಹೇಳಿದರು.
"ಪ್ರಾದೇಶಿಕ ಪಕ್ಷಗಳನ್ನು ದುರ್ಬಲಗೊಳಿಸಲು ಸಂಘಟಿತ ಪ್ರಯತ್ನ ನಡೆಯುತ್ತಿದೆ. ಸಾರ್ವತ್ರಿಕ ಚುನಾವಣೆಗೆ ಮುನ್ನ ವಿರೋಧ ಪಕ್ಷಗಳನ್ನು ಒಗ್ಗೂಡಿಸುವುದು ನನ್ನ ಪ್ರಯತ್ನವಾಗಿದೆ. ನನ್ನನ್ನು ಪ್ರಧಾನಿ ಅಭ್ಯರ್ಥಿಯನ್ನಾಗಿ ಮಾಡುವ ಉದ್ದೇಶ ನನಗಿಲ್ಲ" ಎಂದು ನಿತೀಶ್ ಕುಮಾರ್ ಸುದ್ದಿಗಾರರಿಗೆ ತಿಳಿಸಿದರು.
ಅದಾಗ್ಯೂ, ಬಿಜೆಪಿಯೊಂದಿಗಿನ ಅವರ ವಿಘಟನೆಯ ನಂತರ ಪ್ರಧಾನಿ ಹುದ್ದೆಯ ಮೇಲೆ ಅವರಿಗಿರುವ ಆಕಾಂಕ್ಷೆಯ ಬಗ್ಗೆ ಈ ಭೇಟಿಯು ಇನ್ನಷ್ಟು ಊಹಾಪೋಹಗಳನ್ನು ಸೃಷ್ಟಿಸಿದೆ.
ದಿಲ್ಲಿಯಲ್ಲಿ ಹೊಸ ಮಹಾಘಟಬಂಧನ್ ಮೈತ್ರಿಕೂಟದ ನಾಯಕರನ್ನು ಭೇಟಿಯಾಗಲು ಬಯಸುವುದಾಗಿ ನಿತೀಶ್ ಕುಮಾರ್ ಹೇಳಿದ್ದು, ಈ ಭೇಟಿಯು ಎಲ್ಲಾ ವಿರೋಧ ಪಕ್ಷದ ನಾಯಕರನ್ನು ಒಂದೇ ಛತ್ರಿಯಡಿಯಲ್ಲಿ ತರುವ ಉದ್ದೇಶದಿಂದ ಎಂದು ಅವರು ಘೋಷಿಸಿದ್ದಾರೆ .
ಆಮ್ ಆದ್ಮಿ ಪಕ್ಷದ ಮುಖ್ಯಸ್ಥ ಮತ್ತು ದಿಲ್ಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ರನ್ನೂ ನಿತೀಶ್ ಭೇಟಿಯಾಗಲು ಉದ್ದೇಶಿಸಿದ್ದಾರೆ. 2019 ರಲ್ಲಿ ಕೇಜ್ರಿವಾಲ್ ರನ್ನು ವಿರೋಧ ಪಕ್ಷದ ಒಕ್ಕೂಟದಲ್ಲಿ ವಿಲೀನಗೊಳಿಸುವ ಪ್ರಯತ್ನಗಳು ವಿಫಲವಾಗಿರುವ ಹಿನ್ನೆಲೆಯಲ್ಲಿ ಹಾಗೂ ಕೇಂದ್ರದಲ್ಲಿ ಯುಪಿಎ ಸರ್ಕಾರವನ್ನು ಕೊನೆಗೊಳಿಸುವಲ್ಲಿ ಎಎಪಿ ಪಾತ್ರವು ದೊಡ್ಡದಾಗಿರುವ ಹಿನ್ನೆಲೆಯಲ್ಲಿ ಈ ಭೇಟಿ ಸಾಕಷ್ಟು ಕುತೂಹಲವನ್ನು ಕೆರಳಿಸಿದೆ.
2019 ರಲ್ಲಿ ವಿರೋಧ ಪಕ್ಷಗಳನ್ನು ಒಗ್ಗೂಡಿಸುವ ಪ್ರಯತ್ನಗಳಲ್ಲಿ ಪ್ರಧಾನ ಪಾತ್ರ ವಹಿಸಿದ್ದ ನ್ಯಾಶನಲಿಸ್ಟ್ ಕಾಂಗ್ರೆಸ್ ಪಕ್ಷದ ಮುಖ್ಯಸ್ಥ ಶರದ್ ಪವಾರ್, ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ರೊಂದಿಗೂ ಭೇಟಿಯಾಗಿ ಚರ್ಚಿಸುವ ಸಾಧ್ಯತೆ ಇದೆ ಎಂದು ವರದಿಯಾಗಿದೆ.