ಬ್ರಿಟನ್ ಗೃಹ ಕಾರ್ಯದರ್ಶಿಯಾಗಿ ಪ್ರೀತಿ ಪಟೇಲ್ ಸ್ಥಾನಕ್ಕೆ ಈ ಭಾರತೀಯ ಮೂಲದ ಸಂಸದೆ?

Update: 2022-09-06 03:16 GMT
ಸುಯೆಲ್ಲಾ ಬ್ರೆವೆರ್‍ಮನ್

ಲಂಡನ್: ಲಿಝ್ ಟ್ರಸ್ ಅವರನ್ನು ಮುಂದಿನ ಬ್ರಿಟನ್ ಪ್ರಧಾನಿಯಾಗಿ ಘೋಷಣೆ ಮಾಡಿದ ತಕ್ಷಣ ಗೃಹ ಕಾರ್ಯದರ್ಶಿ ಹುದ್ದೆಗೆ ಭಾರತೀಯ ಮೂಲದ ಪ್ರೀತಿ ಪಟೇಲ್ ರಾಜೀನಾಮೆ ನೀಡಿದ್ದು, ಅವರ ಸ್ಥಾನಕ್ಕೆ ಭಾರತೀಯ ಮೂಲದ ಸಂಸದೆ ಸುಯೆಲ್ಲಾ ಬ್ರೆವೆರ್‍ಮನ್ (Suella Braverman) ನೇಮಕಗೊಳ್ಳುವ ನಿರೀಕ್ಷೆ ಇದೆ.

ಪ್ರಧಾನಿ ಬೋರಿಸ್ ಜಾನ್ಸನ್ ಅವರಿಗೆ ಪತ್ರ ಬರೆದಿರುವ ಪ್ರೀತಿ ಪಟೇಲ್, ಬ್ರಿಟನ್‍ನ ಗೃಹ ಕಾರ್ಯದರ್ಶಿ ಅಥವಾ ಆಂತರಿಕ ಸಚಿವೆ ಹುದ್ದೆಯನ್ನು ತೊರೆಯಲು ನಿರ್ಧರಿಸಿರುವುದಾಗಿ ಸ್ಪಷ್ಟಪಡಿಸಿದ್ದಾರೆ.‌ ಲಿಝ್‌ ಟ್ರಸ್ ಅವರಿಗೆ ಬೆಂಬಲ ನೀಡುವುದಾಗಿಯೂ ಅವರು ಭರವಸೆ ನೀಡಿದ್ದಾರೆ.

ಜಾನ್ಸನ್‍ಗೆ ನಿಷ್ಠರಾಗಿರುವ 50 ವರ್ಷದ ಪ್ರೀತಿ ಪಟೇಲ್ ಎಸ್ಸೆಕ್ಸ್‌ (Essex)ನ ವಿಥಮ್ ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದಾರೆ. 2019ರ ಜುಲೈನಲ್ಲಿ ಇವರು ಬ್ರಿಟನ್ ಗೃಹ ಕಾರ್ಯದರ್ಶಿಯಾಗಿ ನಿಯುಕ್ತರಾಗಿದ್ದರು. ಇವರ ಹುದ್ದೆಗೆ ಸುಯೆಲ್ಲಾ ಬ್ರೆವೆರ್‍ಮನ್ ಆಯ್ಕೆಯಾಗುವ ನಿರೀಕ್ಷೆ ಇರುವುದು ಮಾತ್ರವಲ್ಲದೇ, ಲಿಝ್ ಟ್ರಸ್ ಸಂಪುಟದ ಏಕೈಕ ಭಾರತೀಯ ಮೂಲದ ಸಂಸದೆಯಾಗುವ ಸಾಧ್ಯತೆ ಇದೆ.‌

ಗೋವಾ ಮೂಲದ 42 ವರ್ಷದ ಬ್ರೆವೆರ್‍ಮನ್ ಪ್ರಸ್ತುತ ಅಟಾರ್ನಿ ಜನರಲ್ ಹುದ್ದೆಯನ್ನು ನಿಭಾಯಿಸುತ್ತಿದ್ದಾರೆ. ಅವರು ಕೂಡಾ ಬ್ರಿಟನ್ ಪ್ರಧಾನಿ ಹುದ್ದೆಯಲ್ಲಿದ್ದರು. ಆದರೆ ಜುಲೈನಲ್ಲಿ ಎರಡನೇ ಸುತ್ತಿನಲ್ಲಿ ರೇಸ್‍ನಿಂದ ನಿರ್ಗಮಿಸಿದ ಬಳಿಕ ಲಿಝ್ ಟ್ರಸ್ ಅವರನ್ನು ಬೆಂಬಲಿಸಿದ್ದರು.‌

"ಲಿಝ್‌ ಟ್ರಸ್ ಪ್ರಧಾನಿಯಾಗಲು ಸಜ್ಜಾಗಿದ್ದಾರೆ. ಅವರಿಗೆ ಕೆಲಸ ಕಲಿಯಬೇಕಿಲ್ಲ. ಈ ಕೆಲಸ ಅತ್ಯಂತ ಕಠಿಣ ಹಾಗೂ ಸಮರ್ಪಕವಾಗಿ ನಿರ್ವಹಿಸುವುದು ಅಗತ್ಯ. ಪಕ್ಷ ಅತ್ಯಂತ ಕಠಿಣ ಆರು ವರ್ಷಗಳನ್ನು ಎದುರಿಸಿದ್ದು, ಸ್ಥಿರತೆ ಅತ್ಯಂತ ತುರ್ತು ಅಗತ್ಯ" ಎಂದು ಅವರು ಹೇಳಿದ್ದಾರೆ.

ಬ್ರಿಟನ್ ಪ್ರಧಾನಿ ಹುದ್ದೆ ರೇಸ್‍ನಲ್ಲಿ ಲಿಝ್ ಟ್ರಸ್ ಅಥವಾ ಭಾರತೀಯ ಮೂಲದ ರಿಷಿ ಸುನಾಕ್ ಇಬ್ಬರನ್ನೂ ಬೆಂಬಲಿಸದ ಅಗ್ರ ಸಚಿವರ ಪೈಕಿ ಪ್ರೀತಿ ಪಟೇಲ್ ಒಬ್ಬರು ಎಂದು hindustantimes.com ವರದಿ ಮಾಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News