ಎಲ್ಲಾ ಮಾದರಿಯ ಕ್ರಿಕೆಟ್‌ಗೆ ಸುರೇಶ್ ರೈನಾ ವಿದಾಯ

Update: 2022-09-06 08:21 GMT
ಸುರೇಶ್ ರೈನಾ (Photo:PTI)

ಹೊಸದಿಲ್ಲಿ: ಭಾರತೀಯ ಬ್ಯಾಟರ್ ಸುರೇಶ್ ರೈನಾ (Suresh Raina) ಮಂಗಳವಾರ ಎಲ್ಲಾ ಮಾದರಿಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ್ದಾರೆ. ಆದಾಗ್ಯೂ, ಅವರು ಮುಂಬರುವ ರೋಡ್ ಸೇಫ್ಟಿ ವರ್ಲ್ಡ್ ಸೀರೀಸ್‌ನಲ್ಲಿ ಭಾಗವಹಿಸಲಿದ್ದಾರೆ ಹಾಗೂ  ಸಾಗರೋತ್ತರ ಲೀಗ್‌ಗಳನ್ನು ಕೂಡ  ಆಡಲಿದ್ದಾರೆ.

ಮುಂಬರುವ ದೇಶೀಯ ಋತುವಿನಲ್ಲಿ ಉತ್ತರಪ್ರದೇಶದ ಪರ ರೈನಾ ಆಡುವುದಿಲ್ಲ. ದಕ್ಷಿಣ ಆಫ್ರಿಕಾ, ಶ್ರೀಲಂಕಾ ಹಾಗೂ ಯುಎಇನಲ್ಲಿ ನಡೆಯುವ ಟ್ವೆಂಟಿ-20 ಲೀಗ್ ಗಳಲ್ಲಿ ಆಡುವ ಉದ್ದೇಶದಿಂದಲೇ ಐಪಿಎಲ್ ಗೆ ಗುಡ್ ಬೈ ಹೇಳಲು ರೈನಾ ನಿರ್ಧರಿಸಿದ್ದಾರೆ.

ಮಹೇಂದ್ರ ಸಿಂಗ್ ಧೋನಿ ಜೊತೆಗೆ 2020 ರಲ್ಲಿ ಅಂತರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ್ದ ರೈನಾ, ಕಳೆದ ವರ್ಷದವರೆಗೆ ಚೆನ್ನೈ ಸೂಪರ್ ಕಿಂಗ್ಸ್‌ಗಾಗಿ ಐಪಿಎಲ್  ನಲ್ಲಿ ಆಡಿದ್ದರು. ಆದರೆ ಈ ವರ್ಷ, ರೈನಾ ಅವರು  ಚೆನ್ನೈ ತಂಡದಲ್ಲಿರಲಿಲ್ಲ ಹಾಗೂ ಅವರು  ಕಾಮೆಂಟರಿಯಲ್ಲಿ ನಿರತರಾಗಿದ್ದರು.

“ನನ್ನ ದೇಶ ಹಾಗೂ  ರಾಜ್ಯ ಉತ್ತರಪ್ರದೇಶವನ್ನು ಪ್ರತಿನಿಧಿಸುವುದು ಒಂದು ಮಹಾ ಗೌರವವಾಗಿದೆ. ನಾನು  ಎಲ್ಲಾ ಸ್ವರೂಪಗಳ ಕ್ರಿಕೆಟಿಗೆ  ನಿವೃತ್ತಿ ಘೋಷಿಸಲು ಬಯಸುತ್ತೇನೆ. ನಾನು @BCCI, @UPCACricket, @ChennaiIPL, @ShuklaRajiv ಸರ್ ಹಾಗೂ  ನನ್ನ ಎಲ್ಲಾ ಅಭಿಮಾನಿಗಳಿಗೆ ಅವರ ಬೆಂಬಲ ಮತ್ತು ನನ್ನ ಸಾಮರ್ಥ್ಯಗಳಲ್ಲಿ ಅಚಲ ನಂಬಿಕೆಗೆ ಧನ್ಯವಾದ ಹೇಳಲು ಬಯಸುತ್ತೇನೆ’’ಎಂದು ರೈನಾ ಮಂಗಳವಾರ ಟ್ವೀಟ್ ಮಾಡಿದ್ದಾರೆ.

13 ವರ್ಷಗಳ ಕಾಲ ತನ್ನ ಸುದೀರ್ಘ  ಹಾಗೂ  ಸುಪ್ರಸಿದ್ಧ ವೃತ್ತಿಜೀವನದಲ್ಲಿ, ರೈನಾ ಅಂತರರಾಷ್ಟ್ರೀಯ ವೃತ್ತಿಜೀವನದಲ್ಲಿ ಭಾರತಕ್ಕಾಗಿ 18 ಟೆಸ್ಟ್, 226 ಏಕದಿನ ಹಾಗೂ 78 ಟ್ವೆಂಟಿ-20 ಪಂದ್ಯಗಳಲ್ಲಿ ಕಾಣಿಸಿಕೊಂಡಿದ್ದಾರೆ. ಅವರು ಸ್ವಲ್ಪ ಕಾಲ  ತಂಡದ ನಾಯಕತ್ವವನ್ನು ವಹಿಸಿದ್ದರು. ರೈನಾ 226 ಏಕದಿನ ಪಂದ್ಯಗಳಿಂದ 5,615 ಹಾಗೂ  78 ಟ್ವೆಂಟಿ-20 ಪಂದ್ಯಗಳಿಂದ 1,605 ರನ್ ಗಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News