ಸಂಜೀವ್‌ ಭಟ್‌ ವಿರುದ್ಧದ ಕ್ರಿಮಿನಲ್‌ ಮೊಕದ್ದಮೆ ವಜಾಗೊಳಿಸಲು ಸುಪ್ರೀಂ ಕೋರ್ಟ್‌ ನಕಾರ

Update: 2022-09-06 14:26 GMT
ಸಂಜೀವ್‌ ಭಟ್‌ (File Photo: PTI)

ಹೊಸದಿಲ್ಲಿ: ತಮ್ಮ ವಿರುದ್ಧ ದಾಖಲಾಗಿರುವ ಕ್ರಿಮಿನಲ್ ಮೊಕದ್ದಮೆಯನ್ನು ರದ್ದುಗೊಳಿಸುವಂತೆ ಕೋರಿ ಮಾಜಿ ಐಪಿಎಸ್(IPS) ಅಧಿಕಾರಿ ಸಂಜೀವ್ ಭಟ್(Sanjiv Bhatt) ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್ ವಜಾಗೊಳಿಸಿದೆ.

ಸಂಜೀವ್‌ ಭಟ್ ವಿರುದ್ಧ ದಾಖಲಾಗಿದ್ದ ದೂರನ್ನು ರದ್ದುಗೊಳಿಸಲು ಈ ಹಿಂದೆ ಗುಜರಾತ್ ಹೈಕೋರ್ಟ್ ನಿರಾಕರಿಸಿತ್ತು. ಈ ತೀರ್ಪಿನ ವಿರುದ್ಧ ಸುಪ್ರೀಂ ಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಲಾಗಿತ್ತು. ವಿಶೇಷ ರಜೆ ಅರ್ಜಿಯನ್ನು ವಿಲೇವಾರಿ ಮಾಡಿದ ಪೀಠವು ಈ ವಿಷಯದಲ್ಲಿ ಮಧ್ಯಪ್ರವೇಶಿಸಲು ಯಾವುದೇ ಕಾರಣವಿಲ್ಲ ಎಂದು ತನ್ನ ಆದೇಶದಲ್ಲಿ ಹೇಳಿದೆ.

"ಅರ್ಜಿದಾರ-ಆರೋಪಿಗೆ ಸಮನ್ಸ್ ನೀಡಿದ ಮ್ಯಾಜಿಸ್ಟ್ರೇಟ್ ಆದೇಶ ಮತ್ತು ಹೈಕೋರ್ಟ್ ನೀಡಿದ ತೀರ್ಪು ಮತ್ತು ಆದೇಶವನ್ನು ಪರಿಶೀಲಿಸಿದಾಗ, ಹೈಕೋರ್ಟ್‌ನ ತೀರ್ಪು ಮತ್ತು ಆದೇಶದಲ್ಲಿ ಮಧ್ಯಪ್ರವೇಶಿಸಲು ನಮಗೆ ಯಾವುದೇ ಕಾರಣವಿಲ್ಲ." ಎಂದು ಸುಪ್ರೀಂ ಕೋರ್ಟ್‌ ಹೇಳಿದೆ. 

ಮಾಜಿ ಐಪಿಎಸ್ ಸಂಜೀವ್‌ ಭಟ್ ವಿರುದ್ಧ 1990ರ ಪ್ರಕರಣದಲ್ಲಿ (ಅಕ್ರಮ ಬಂಧನ ಮತ್ತು ಕಸ್ಟಡಿ ಚಿತ್ರಹಿಂಸೆಯ ಆರೋಪದಡಿ) ದೂರು ದಾಖಲಿಸಿ ಕಳೆದ ನಾಲ್ಕು ವರ್ಷಗಳಿಂದ ಬಂಧಿಸಲಾಗಿದೆ. 

ಸಂಜೀವ್‌ ವಿರುದ್ಧ ದಾಖಲಾಗಿದ್ದ ಮೂರು ದೂರುಗಳಲ್ಲಿ ಎರಡು ದೂರನ್ನು ಗುಜರಾತ್ ಹೈಕೋರ್ಟ್‌ ವಜಾಗೊಳಿಸಿತ್ತು. ಆದರೆ, ಮೂರನೇ ದೂರನ್ನು ರದ್ದುಗೊಳಿಸಲು ಹೈಕೋರ್ಟ್ ನಿರಾಕರಿಸಿತ್ತು.

ಹೈಕೋರ್ಟ್ ಆದೇಶವನ್ನು ಎತ್ತಿ ಹಿಡಿದರೆ ಕರ್ತವ್ಯ ನಿರ್ವಹಿಸುವ ಪೊಲೀಸ್ ಅಧಿಕಾರಿಗಳಿಗೆ ಕೆಟ್ಟ ನಿದರ್ಶನವಾಗುತ್ತದೆ ಎಂದು ಸುಪ್ರೀಂ ಕೋರ್ಟ್‌ ನಲ್ಲಿ ಸಂಜೀವ್ ಭಟ್ ಪರ ವಕೀಲರು ವಾದ ಮಂಡಿಸಿದ್ದಾರೆ.

ಅದಾಗ್ಯೂ, ಎಲ್ಲಾ ವಿಷಯಗಳನ್ನು ಆಲಿಸಿದ ನ್ಯಾಯಾಲಯವು ಈ ವಿಷಯದಲ್ಲಿ ಮತ್ತು ಹೈಕೋರ್ಟ್‌ನ ಆದೇಶದಲ್ಲಿ ಮಧ್ಯಪ್ರವೇಶಿಸುವ ಅಗತ್ಯವಿಲ್ಲ ಎಂದು ನಿರ್ಧರಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News