×
Ad

ಕಾಂಗ್ರೆಸ್ ನ 'ಭಾರತ್ ಜೋಡೋ ಯಾತ್ರೆ'ಗೆ ಇಂದು ರಾಹುಲ್ ಗಾಂಧಿ ಚಾಲನೆ

Update: 2022-09-07 10:09 IST
Photo:Twitter/Congress

ಚೆನ್ನೈ: 2024ರ ಸಾರ್ವತ್ರಿಕ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ (Congress MP Rahul Gandhi)ಅವರು ಇಂದು ಕನ್ಯಾಕುಮಾರಿಯಿಂದ ಪಕ್ಷದ 'ಭಾರತ್ ಜೋಡೋ ಯಾತ್ರೆ'ಗೆ ('Bharat Jodo Yatra)ಚಾಲನೆ ನೀಡಲಿದ್ದಾರೆ. 3,500 ಕಿಲೋಮೀಟರ್ ದೂರ ಸಾಗಲಿರುವ ಯಾತ್ರೆ ಸುಮಾರು 150 ದಿನಗಳಲ್ಲಿ ಕ್ರಮಿಸಲಿದೆ.

ತಮಿಳುನಾಡಿನ ಶ್ರೀಪೆರಂಬದೂರಿನಲ್ಲಿರುವ ತಮ್ಮ ತಂದೆ ರಾಜೀವ್ ಗಾಂಧಿ ಅವರ ಸ್ಮಾರಕಕ್ಕೆ ಭೇಟಿ ನೀಡುವ ಮೂಲಕ ರಾಹುಲ್ ಗಾಂಧಿ ಬುಧವಾರ ತಮ್ಮ ದಿನವನ್ನು ಆರಂಭಿಸಿದರು. 1991 ರಲ್ಲಿ ಮಾಜಿ ಪ್ರಧಾನಿ ರಾಜೀವ್ ಗಾಂಧಿ ಆತ್ಮಾಹುತಿ ಬಾಂಬ್ ದಾಳಿಯಲ್ಲಿ ಸಾವನ್ನಪ್ಪಿದ್ದರು.

ತಮ್ಮ ತಂದೆಯ ಸ್ಮಾರಕಕ್ಕೆ ಭೇಟಿ ನೀಡಿದ ನಂತರ ಟ್ವೀಟ್ ಮಾಡಿದ ರಾಹುಲ್ ಗಾಂಧಿ, "ದ್ವೇಷ ಮತ್ತು ವಿಭಜನೆಯ ರಾಜಕಾರಣದಿಂದ ನಾನು ನನ್ನ ತಂದೆಯನ್ನು ಕಳೆದುಕೊಂಡೆ. ನನ್ನ ಪ್ರೀತಿಯ ದೇಶವನ್ನು ನಾನು ಕಳೆದುಕೊಳ್ಳುವುದಿಲ್ಲ. ಪ್ರೀತಿ ಗೆಲ್ಲುತ್ತದೆ’’ ಎಂದು ಬರೆದಿದ್ದಾರೆ.

ಬಿಜೆಪಿ ಆಡಳಿತದ ಅಡಿಯಲ್ಲಿ ಭಾರತದಲ್ಲಿ ಸಾಮಾಜಿಕ ಧ್ರುವೀಕರಣ ಮತ್ತು ರಾಜಕೀಯ ಕೇಂದ್ರೀಕರಣ ಇದೆ ಎಂದು  ರಾಹುಲ್ ಗಾಂಧಿ ಆರೋಪಿಸಿದರು.

 'ಭಾರತ್ ಜೋಡೋ ಯಾತ್ರೆ' ದೇಶವನ್ನು ಒಂದುಗೂಡಿಸುವ 'ತಪಸ್ಸು'. ಭರವಸೆ ಭಯವನ್ನು ಸೋಲಿಸುತ್ತದೆ. ಒಟ್ಟಾಗಿ, ನಾವು ಜಯಿಸುತ್ತೇವೆ ಎಂದು ರಾಹುಲ್ ಈ ಹಿಂದೆ ಹೇಳಿದ್ದರು.

ಇಂದು ಸಂಜೆ ಮಹಾತ್ಮಾ ಗಾಂಧಿ ಮಂಟಪದಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ರಾಹುಲ್ ಭಾಗವಹಿಸಲಿದ್ದಾರೆ. ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರು ಯಾತ್ರೆಯ ಉದ್ಘಾಟನೆಗೆ ರಾಹುಲ್ ಗೆ ರಾಷ್ಟ್ರಧ್ವಜವನ್ನು ಹಸ್ತಾಂತರಿಸಲಿದ್ದಾರೆ.

ಇಂದು  ಸಂಜೆ 5 ಗಂಟೆಗೆ 3,500 ಕಿಲೋಮೀಟರ್ ಉದ್ದದ ಯಾತ್ರೆಯನ್ನು ರ್ಯಾಲಿಯೊಂದಿಗೆ ಪ್ರಾರಂಭಿಸಲಾಗುವುದು ಹಾಗೂ ಗುರುವಾರ ಬೆಳಗ್ಗೆ ಪಾದಯಾತ್ರೆಯು ಆರಂಭವಾಗುತ್ತದೆ.

ಮುಂದಿನ 150 ದಿನಗಳಲ್ಲಿ 12 ರಾಜ್ಯಗಳು ಮತ್ತು ಎರಡು ಕೇಂದ್ರಾಡಳಿತ ಪ್ರದೇಶಗಳನ್ನು ಹಾದುಹೋಗಲಿರುವ ಯಾತ್ರೆಯಲ್ಲಿ  ರಾಹುಲ್ ಗಾಂಧಿ ನೇತೃತ್ವದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಮತ್ತು ನಾಯಕರು ಪ್ರತಿದಿನ ಆರು-ಏಳು ಗಂಟೆಗಳ ಕಾಲ ಪಾದಯಾತ್ರೆ ನಡೆಸಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News