ದಿಲ್ಲಿಯಲ್ಲಿ ಪಟಾಕಿ ನಿಷೇಧ ಈ ದೀಪಾವಳಿಯಲ್ಲೂ ಮುಂದುವರಿಯಲಿದೆ: ಸಚಿವ ಗೋಪಾಲ್ ರೈ
ಹೊಸದಿಲ್ಲಿ,ಸೆ.7: ದಿಲ್ಲಿ ಸರಕಾರವು ಬುಧವಾರ ಪಟಾಕಿಗಳ ಉತ್ಪಾದನೆ, ಮಾರಾಟ ಹಾಗೂ ಬಳಕೆಯನ್ನು 2023ರ ಜನವರಿ 1ರವರೆಗೆ ನಿಷೇಧಿಸಿದೆ. ಚಳಿಗಾಲದಲ್ಲಿ ರಾಜಧಾನಿ ವಾಯುಗುಣಮಟ್ಟವು ಕಳಪೆಯಾಗುವುದನ್ನು ತಡೆಗಟ್ಟುವ ಉದ್ದೇಶದಿಂದ ಈ ಕ್ರಮ ಕೈಗೊಳ್ಳಲಾಗಿದೆಯೆಂದು ಅಧಿಕೃತ ಮೂಲಗಳು ತಿಳಿಸಿವೆ.
ಆನ್‌ಲೈನ್ ಮೂಲಕ ಮಾರಾಟವಾಗುವ ಪಟಾಕಿಗಳಿಗೂ ಈ ನಿಷೇಧ ಅನ್ವಯವಾಗುತ್ತದೆಯೆಂದು ದಿಲ್ಲಿ ಪರಿಸರ ಸಚಿವರ ಗೋಪಾಲ್ ರಾಯ್ ಟ್ವೀಟ್ ಮಾಡಿದ್ದಾರೆ. ಈ ನಿಷೇಧವನ್ನು ಅನುಷ್ಠಾನಗೊಳಿಸುವಬಗ್ಗೆ ದಿಲ್ಲಿ ಪೊಲೀಸರು, ದಿಲ್ಲಿ ಮಾಲಿನ್ಯ ನಿಯಂತ್ರಣ ಸಮಿತಿ ಹಾಗೂ ಕಂದಾಯ ಇಲಾಖೆಯು ಯೋಜನೆಯನ್ನು ರೂಪಿಸಲಿದ್ದಾರೆಂದು ಅವರು ಹೇಳಿದ್ದಾರೆ.
ದಿಲ್ಲಿ ಸರಕಾರವು ವಾಯುಮಾಲಿನ್ಯವನ್ನು ತಡೆಗಟ್ಟಲು ಕಳೆದ ವರ್ಷದ ಸೆಪ್ಟೆಂಬರ್ ಹಾಗೂ ಜನವರಿ ನಡುವೆ ಪಟಾಕಿಗಳನ್ನು ಇಷೇಧಿಸಿತ್ತು.
ಈ ಅವಧಿಯಲ್ಲಿ ಪಂಜಾಬ್, ಹರ್ಯಾಣ ಹಾಗೂ ಉತ್ತರಪ್ರದೇಶದ ರೈತರು ಭತ್ತದ ಕೂಳೆಗಳನ್ನು ಸುಡುತ್ತಾರೆ. ಮುಂದಿನ ಬಿತ್ತನೆ ಸಮಯದ ವೇಳೆಗೆ ತಮ್ಮ ಹೊಲಗಳನ್ನು ಸಿದ್ಧಪಡಿಸುವುದಕ್ಕಾಗಿ ರೈತರು ಮಿತ ವ್ಯಯಕಾರಿ ಹಾಗೂ ಸಮಯ ಉಳಿತಾಯದ ಉದ್ದೇಶದಿಂದ ಭತ್ತದ ಕೂಳೆಗಳನ್ನು ಸುಡುತ್ತಾರೆ. ಆದರೆ ಇಂತಹ ಪದ್ಧತಿಯನ್ನು ಅನುಸರಿಸುವುದರಿಂದಾಗಿ ಉತ್ತರಪ್ರದೇಶದ ವಿಶಾಲ ಪ್ರದೇಶಗಳಲ್ಲಿ ವಾಯುಮಾಲಿನ್ಯದ ಮಟ್ಟದಲ್ಲಿ ಹೆಚ್ಚಳವುಂಟಾಗಿದೆ.
ಕಡಿಮೆ ತಾಪಮಾನ, ವೇಗವಾಗಿ ಬೀಸುವ ಗಾಳಿ ಹಾಗೂ ಕೈಗಾರಿಕಾ ಮಾಲಿನ್ಯದಂತಹ ಇತರ ಅಂಶಗಳು ಈ ಸಮಸ್ಯೆಯನ್ನು ಇನ್ನಷ್ಟು ಜಟಿಲಗೊಳಿಸಿದೆ. ದೀಪಾವಳಿ ಆಚರಣೆಯ ಸಂದರ್ಭ ಪಟಾಕಿಗಳನ್ನು ಸುಡುವುದರಿಂದ ಆ ಅವಧಿಯಲ್ಲಿ ದಿಲ್ಲಿ ಹಾಗೂ ಉತ್ತರಭಾರತದ ಹಲವು ರಾಜ್ಯಗಳಲ್ಲಿ ಸಾಮಾನ್ಯವಾಗಿ ವಾಯುವಿನ ಗುಣಮಟ್ಟದಸೂಚ್ಯಂಕವು ಕುಸಿಯುತ್ತಾ ಹೋಗುತ್ತದೆ.
ಇದರಿಂದಾಗಿ ದಿಲ್ಲಿಯು ಜಗತ್ತಿನಲ್ಲೇ ಅತ್ಯಂತ ಮಾಲಿನ್ಯಪೀಡಿತ ನಗರಗಳ ಪಟ್ಟಿಯಲ್ಲಿ 10 ಸ್ಥಾನ ಪಡೆದಿದೆ. ದಿಲ್ಲಿ ಸರಕಾರವುದೀಪಾವಳಿ ಸಂದರ್ಭ ಪಟಾಕಿಗಳಿಗೆ ನಿಷೇಧವನ್ನು ಹೇರಿದ ಹೊರತಾಗಿಯೂ ಕಳೆದ ನವೆಂಬರ್‌ನಲ್ಲಿ ವಾಯುವಿನ ಗುಣಮಟ್ಟವು ಕುಸಿದಿದ್ದು, 2015ನೇ ಇಸವಿಯಿಂದೀಚೆಗೆ ಅತ್ಯಂತ ಕಳಪೆಯಾಗಿತ್ತು.