ಮಧ್ಯಪ್ರದೇಶ: ಬರಿಗೈಯಲ್ಲಿ ಹುಲಿಯೊಂದಿಗೆ ಹೋರಾಡಿ ಒಂದು ವರ್ಷದ ಮಗನನ್ನು ರಕ್ಷಿಸಿದ ತಾಯಿ!

Update: 2022-09-07 09:36 GMT

ಜಬಲ್ಪುರ: ಮಧ್ಯಪ್ರದೇಶದ(Madhya Pradesh) ಬಾಂಧವ್ಗಢ ಹುಲಿ(Tiger) ಸಂರಕ್ಷಿತ ಪ್ರದೇಶದ ಜಬಲ್ಪುರದಲ್ಲಿ ಮಹಿಳೆಯೊಬ್ಬರು ಬರಿಗೈಯಲ್ಲಿ ಹುಲಿಯೊಂದಿಗೆ ಹೋರಾಡಿ ತನ್ನ ಒಂದು ವರ್ಷದ ಮಗನನ್ನು ರಕ್ಷಿಸಿ ಸಾಹಸ ಮೆರೆದಿದ್ದಾರೆ.

ಈ ವಾರದ ಆರಂಭದಲ್ಲಿ ರೊಹನಿಯಾ ಗ್ರಾಮದಲ್ಲಿ ಹುಲಿ ದಾಳಿಯಲ್ಲಿ ಮಹಿಳೆ ಹಾಗೂ ಆಕೆಯ ಮಗ ಇಬ್ಬರೂ ಗಾಯಗೊಂಡಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಇಬ್ಬರ ಸ್ಥಿತಿ ಸ್ಥಿರವಾಗಿದೆ ಎಂದು ವರದಿಯಾಗಿದೆ.

"ಹುಲಿಯು ಹುಲಿ ಸಂರಕ್ಷಿತ ಪ್ರದೇಶದ ಹೊರಗೆ ಸುತ್ತಾಡುತ್ತಿದೆ ಹಾಗೂ ಜನರು ಹುಲಿಯನ್ನು ನೋಡಲು ಬರುತ್ತಿದ್ದಾರೆ ಎಂದು ನಮಗೆ ಮಾಹಿತಿ ನೀಡಲಾಯಿತು. ಆದರೆ ಮಹಿಳೆಗೆ ಹುಲಿ ಇರುವಿಕೆಯ ಬಗ್ಗೆ ತಿಳಿದಿರಲಿಲ್ಲ. ಹುಲಿ ದಾಳಿಯಲ್ಲಿ ಇಬ್ಬರೂ ಗಾಯಗೊಂಡು ಸರಕಾರಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ನಂತರ ಅವರನ್ನು ಜಬಲ್ಪುರ್ ವೈದ್ಯಕೀಯ ಕಾಲೇಜಿಗೆ ಸ್ಥಳಾಂತರಿಸಲಾಯಿತು. ಪ್ರಸ್ತುತ, ತಾಯಿ ಮತ್ತು ಮಗು ಇಬ್ಬರೂ ಆರೋಗ್ಯವಾಗಿದ್ದಾರೆ" ಎಂದು ಬಾಂಧವ್ಗಢ ಹುಲಿ ಸಂರಕ್ಷಿತ ಪ್ರದೇಶದ ವ್ಯವಸ್ಥಾಪಕ ಲವಿತ್ ಭಾರ್ತಿ ಸುದ್ದಿ ಸಂಸ್ಥೆ ANI ಗೆ ತಿಳಿಸಿದರು.

ಒಂದೂವರೆ ವರ್ಷದ ಬಾಲಕನ ಜೊತೆ ಮಹಿಳೆಯು ಜಮೀನಿನಲ್ಲಿ ಕೆಲಸ ಮಾಡುತ್ತಿದ್ದಾಗ ಹುಲಿ ದಾಳಿ ನಡೆಸಿದೆ. ಹುಲಿಯ ದಾಳಿಯನ್ನು ದಿಟ್ಟವಾಗಿ ಎದುರಿಸಿದ ಮಹಿಳೆ ತನ್ನ ಮಗುವನ್ನು ರಕ್ಷಿಸಿದರು. ಹುಲಿಯಿಂದ ರಕ್ಷಿಸಿಕೊಳ್ಳಲು ಮಹಿಳೆಯ ಬಳಿ ಯಾವುದೇ ಆಯುಧ ಕೂಡ ಇರಲಿಲ್ಲ.

ಹುಲಿ ಹೊರಗೆ ಇರುವ ಬಗ್ಗೆ ಆಕೆಗೆ ಯಾವುದೇ ಕಲ್ಪನೆ ಇರಲಿಲ್ಲ. ಅವಳು ಹುಲಿ ಅಡಗಿರುವ ಜಮೀನಿಗೆ ಮಗುವನ್ನು ಕರೆದೊಯ್ದಳು. ಹುಲಿ  ಅವಳ ಮೇಲೆ ದಾಳಿ ಮಾಡಿತು ಹಾಗೂ ಅವಳು ತೀವ್ರವಾಗಿ ಗಾಯಗೊಂಡಳು" ಎಂದು ಗಾಯಗೊಂಡ ಮಹಿಳೆಯ ಪತಿ ಭೋಲಾ ಚೌಧರಿ ಹೇಳಿದ್ದಾರೆ. 

ಮಹಿಳೆಯು ಸಹಾಯಕ್ಕಾಗಿ ಕೂಗಾಡಿದ್ದು, ಇದರಿಂದ ಎಚ್ಚತ್ತ ಗ್ರಾಮಸ್ಥರು ಪ್ರಾಣಿಯನ್ನು ಓಡಿಸಿದರು. ಘಟನೆಯಿಂದ ಮಗುವಿನ ತಲೆಗೆ ಗಾಯಗಳಾಗಿದ್ದರೆ, ತಾಯಿಗೆ ದೇಹದಾದ್ಯಂತ ಗಾಯಗಳಾಗಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News