ಉಡುಪಿ; ಏರ್‌ಲಿಫ್ಟ್‌ಗಾಗಿ 3 ಲಕ್ಷ ರೂ. ಪಡೆದು ವಂಚನೆ: ಪ್ರಕರಣ ದಾಖಲು
Update: 2022-09-07 21:58 IST
ಉಡುಪಿ, ಸೆ.7: ಅಪಘಾತದ ಗಾಯಾಳನ್ನು ಏರ್‌ಲಿಫ್ಟ್ ಮಾಡಲು ಹಣ ಪಡೆದು ಮೋಸ ಮಾಡಿರುವ ಬಗ್ಗೆ ಸೆನ್ ಅಪರಾಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಮಂದಾರ್ತಿಯ ಪ್ರಮೋದ್ ಕುಮಾರ್ ಶೆಟ್ಟಿ(39) ಎಂಬವರು ಅಲ್ಯೂಮಿನಿಯಂ ಫ್ಯಾಬ್ರಿಕೇಷನ್ ವ್ಯವಹಾರ ಮಾಡಿಕೊಂಡಿದ್ದು ಸೆ.4ರಂದು ಇವರಿಗೆ ಅಪರಿಚಿತ ವ್ಯಕ್ತಿ ಮೊಬೈಲ್ ಕರೆ ಮಾಡಿ ತಾನು ರಾಜೇಶ್ ಶಾ, ಇರೋ ಬಾಂಡ್ ಕಂಪನಿಯ ಮಾಲಕನೆಂದು ನಂಬಿಸಿ ತನ್ನ ಮಗನಿಗೆ ಕಾರವಾರ-ಗೋವಾ ಮಾರ್ಗದ ನಡುವೆ ರಸ್ತೆ ಅಪಘಾತವಾಗಿದ್ದು ಆತನನ್ನು ಏರ್‌ಲಿಫ್ಟ್ ಮೂಲಕ ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲು ತುರ್ತಾಗಿ 3 ಲಕ್ಷ ರೂ. ಹಣ ಬೇಕಾಗಿದೆ. ಆದುದರಿಂದ ಬ್ಯಾಂಕ್ ಖಾತೆಗೆ ಹಣ ವರ್ಗಾಯಿಸುವಂತೆ ತಿಳಿಸಿದ್ದನು.
ಅದನ್ನು ನಂಬಿದ ಪ್ರಮೋದ್ ಅವರು ತನ್ನ ಗೆಳೆಯರಿಂದ ಒಟ್ಟು 3 ಲಕ್ಷ ರೂ. ಹಣವನ್ನು ಜಿಪೇ ಮೂಲಕ ವರ್ಗಾಯಿಸಿದ್ದು ಬಳಿಕ ಆತ ಮೋಸ ಮಾಡಿರುವುದಾಗಿ ತಿಳಿದುಬಂತ್ತೆಂದು ದೂರಿನಲ್ಲಿ ತಿಳಿಸಲಾಗಿದೆ.