×
Ad

ಸಫಾಯಿ ಕರ್ಮಚಾರಿಗಳಿಗೆ ಶೀಘ್ರವೇ ನಿವೇಶನ ಹಕ್ಕುಪತ್ರ ವಿತರಿಸಿ: ಉಡುಪಿ ಜಿಲ್ಲಾಧಿಕಾರಿ ನಿರ್ದೇಶನ

Update: 2022-09-07 22:20 IST

ಉಡುಪಿ, ಸೆ.7: ಜಿಲ್ಲೆಯ ಸಫಾಯಿ ಕರ್ಮಚಾರಿಗಳಿಗೆ ಶೀಘ್ರವೇ ನಿವೇಶನದ ಹಕ್ಕುಪತ್ರಗಳನ್ನು ವಿತರಿಸುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಕೂರ್ಮಾರಾವ್ ಎಂ. ನಿರ್ದೇಶನ ನೀಡಿದ್ದಾರೆ.

ಮಣಿಪಾಲದ ಜಿಲ್ಲಾಧಿಕಾರಿ ಕಚೇರಿಯ ಕೋರ್ಟ್ ಹಾಲ್‌ನಲ್ಲಿ ಬುಧವಾರ ನಡೆದ ಸಫಾಯಿ ಕರ್ಮಚಾರಿಗಳ ಜಿಲ್ಲಾ ಜಾಗೃತ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡುತಿದ್ದರು.

ಸರಕಾರದ ಸೌಲಭ್ಯಗಳು ಸಫಾಯಿ ಕರ್ಮಚಾರಿಗಳಿಗೆ ಸಿಗುವ ರೀತಿಯಲ್ಲಿ ಅವರಿಗೆ ಅರಿವು ಮೂಡಿಸಿ, ಫಲಾನುಭವಿಗಳನ್ನಾಗಿಸಿ ಎಂದ ಅವರು ಮ್ಯಾನ್ಯುವಲ್ ಸ್ಕ್ಯಾವೆಂಜರ್ ವೃತ್ತಿಯಿಂದ ಹೊರ ಬಂದಿರುವವರಿಗೆ ಸೂಕ್ತ ಪುರ್ನವಸತಿ ಕಲ್ಪಿಸಬೇಕು ಎಂದು ಸೂಚಿಸಿದರು. 

ಸಕ್ಕಿಂಗ್ ಹಾಗೂ ಜಟ್ಟಿಂಗ್ ಯಂತ್ರ, ವೈಯಕ್ತಿಕವಾಗಿ, ಸಫಾಯಿ ಕರ್ಮಚಾರಿ ಗಳ ಸ್ವ-ಸಹಾಯ ಗುಂಪುಗಳಿಂದ, ಖಾಸಗಿ ಏಜೆನ್ಸಿ ಗುತ್ತಿಗೆದಾರರಿಂದ ಹೊಸ ಯಂತ್ರಗಳನ್ನು ಖರೀದಿ ಮಾಡಲು ಅತಿ ಕಡಿಮೆ ಬಡ್ಡಿದರದಲ್ಲಿ ಸಾಲ ಸೌಲಭ್ಯವನ್ನು ನೀಡಲಾಗುವುದು. ಇದರ ಸದುಪಯೋಗ ಪಡೆದುಕೊಳ್ಳಲು ಪ್ರಚಾರಪಡಿಸಬೇಕು ಎಂದರು.

ಪೌರ ಕಾರ್ಮಿಕರ ಆರೋಗ್ಯದ ಹಿತದೃಷ್ಟಿಯಿಂದ ಪ್ರತಿ ೩ ತಿಂಗಳಿಗೊಮ್ಮೆ ಸಾಮಾನ್ಯ ಅರೋಗ್ಯ ತಪಾಸಣೆ ಹಾಗೂ ವಾರ್ಷಿಕವಾಗಿ ಎರಡು ಬಾರಿ ಸಂಪೂರ್ಣ ದೇಹ ಪರೀಕ್ಷೆಯನ್ನು ಸ್ಥಳೀಯ ಸಂಸ್ಥೆಗಳು ಕಡ್ಡಾಯವಾಗಿ ಮಾಡಿಸಿ ಎಂದು ಸೂಚನೆ ನೀಡಿದರು.

ಜಿಲ್ಲೆಯಲ್ಲಿ ತ್ಯಾಜ್ಯ ನಿರ್ವಹಣೆ ಸೇರಿದಂತೆ ಇತರ ಕಾರ್ಯಗಳಿಗೆ ಹೊರಗುತ್ತಿಗೆ ಮೂಲಕ ಕಾರ್ಯನಿರ್ವಹಿಸುತ್ತಿರುವ ಸಿಬ್ಬಂದಿಗಳ ಸಮಸ್ಯೆಗಳನ್ನು ಆಗಿಂದ್ದಾಗೆ ಚರ್ಚಿಸಿ ಬಗೆಹರಿಸಬೇಕು ಎಂದರು.

ಸಭೆಯಲ್ಲಿ ಜಿಲ್ಲಾ ಪಂಚಾಯತ್‌ನ ಉಪಕಾರ್ಯದರ್ಶಿ ಕಿರಣ್ ಫಡ್ನೇಕರ್, ಜಿಲ್ಲಾ ಸಮಾಜ ಕಲ್ಯಾಣಾಧಿಕಾರಿ ಅನಿತಾ ಮಡ್ಲೂರು, ಜಾಗೃತ ಸಮಿತಿ ಸದಸ್ಯರಾದ ವೈ.ಲಕ್ಷ್ಮಣ್, ಗಣೇಶ್, ಅನಿತಾ ಹಾಗೂ ಎಲ್ಲಾ ಅನುಷ್ಠಾನಾಧಿಕಾರಿ ಗಳು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News