ರಾಷ್ಟ್ರ ಧ್ವಜವನ್ನು ಬಿಜೆಪಿ ವೈಯುಕ್ತಿಕ ಸೊತ್ತೆಂದು ಭಾವಿಸಿದೆ: ರಾಹುಲ್ ಗಾಂಧಿ

Update: 2022-09-07 17:37 GMT

ಚೆನ್ನೈ, ಸೆ. 6: ಕಾಂಗ್ರೆಸ್‌ನ ಬೃಹತ್ ಜನ ಸಂಪರ್ಕ ಕಾರ್ಯಕ್ರಮ ‘ಭಾರತ್ ಜೋಡೊ ಯಾತ್ರೆ’ಗೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ತಮಿಳುನಾಡಿನ ಕನ್ಯಾಕುಮಾರಿಯಲ್ಲಿ ಬುಧವಾರ ಸಂಜೆ ಚಾಲನೆ ನೀಡಿದರು.

ಈ ಸಂದರ್ಭ ಮಾತನಾಡಿದ ರಾಹುಲ್ ಗಾಂಧಿ, ರಾಷ್ಟ್ರ ಧ್ವಜವನ್ನು ರಕ್ಷಿಸುವಂತಹ ಸಂಸ್ಥೆಗಳನ್ನು ಭಾರತ ಹೊಂದಿದೆ. ರಾಷ್ಟ್ರ ಧ್ವಜವನ್ನು ರಕ್ಷಿಸುವಂತಹ ಸ್ವತಂತ್ರ್ಯ ಮಾಧ್ಯಮವನ್ನು ಭಾರತ ಹೊಂದಿದೆ. ರಾಷ್ಟ್ರ ಧ್ವಜವನ್ನು ರಕ್ಷಿಸುವ ನ್ಯಾಯಾಂಗವನ್ನು ಭಾರತ ಹೊಂದಿದೆ. ಆದರೆ, ಇಂದು ನಮ್ಮ ಪ್ರತಿಯೊಂದು ಸಂಸ್ಥೆ ಕೂಡ ಬಿಜೆಪಿ, ಆರೆಸ್ಸೆಸ್ ನ ದಾಳಿಗೊಳಗಾಗಿವೆ. ರಾಷ್ಟ್ರಧ್ವಜ ತಮ್ಮ ವೈಯುಕ್ತಿಕ ಸೊತ್ತೆಂದು ಅವು ಭಾವಿಸಿವೆ. ಈ ದೇಶದ ಜನರನ್ನು, ಈ ದೇಶದ ಸ್ಥಿತಿಯನ್ನು ಏಕಾಂಗಿಯಾಗಿ ನಿರ್ಧರಿಸಬಹುದು ಎಂದು ಅವು ಭಾವಿಸಿವೆ’’ ಎಂದರು.  

ಜಾರಿ ನಿರ್ದೇಶನಾಲಯ, ಸಿಬಿಐ ಹಾಗೂ ಆದಾಯ ತೆರಿಗೆ ಇಲಾಖೆಯನ್ನು ಬಳಸಿಕೊಂಡು ಪ್ರತಿಪಕ್ಷವನ್ನು ಹೆದರಿಸಲು ಸಾಧ್ಯ ಎಂದು ಬಿಜೆಪಿ, ಆರೆಸ್ಸೆಸ್ ಭಾವಿಸಿದೆ. ಅವರು ಎಷ್ಟು ಗಂಟೆ ಬೇಕಾದರೂ ವಿಚಾರಣೆ ನಡೆಸಲಿ. ಪ್ರತಿಪಕ್ಷದ ಒಬ್ಬನೇ ಒಬ್ಬ ನಾಯಕ ಕೂಡ ಬಿಜೆಪಿಗೆ ಹೆದರುವುದಿಲ್ಲ ಎಂದು ಅವರು ಹೇಳಿದರು. 

ಈ ಯಾತ್ರೆಗೆ ಯಾವುದೇ ರೀತಿಯ ರಾಜಕೀಯ ಆಯಾಮವನ್ನು ಕಾಂಗ್ರೆಸ್ ನಾಯಕರು ನಿರಾಕರಿಸಿದ್ದಾರೆ. ಯಾತ್ರೆಯ ಸಂದರ್ಭ ನಾವು ಹಣದುಬ್ಬರ, ಬೆಲೆ ಏರಿಕೆ ಹಾಗೂ ನಿರುದ್ಯೋಗ  ಸೇರಿದಂತೆ ಹಲವು ವಿಷಯಗಳ ಕುರಿತು ಜನರಿಗೆ ಮನವರಿಕೆ ಮಾಡಲು ಪ್ರಯತ್ನಿಸಲಿದ್ದೇವೆ ಎಂದು ಅವರು ಹೇಳಿದ್ದಾರೆ. 
ಆರೋಗ್ಯ ಸಮಸ್ಯೆಯ ಹಿನ್ನೆಲೆಯಲ್ಲಿ ಯಾತ್ರೆಯ ಚಾಲನೆ ಕಾರ್ಯಕ್ರಮದಲ್ಲಿ ಅಧ್ಯಕ್ಷೆ ಸೋನಿಯಾ ಗಾಂಧಿ ಅವರಿಗೆ ಪಾಲ್ಗೊಳ್ಳಲು ಸಾಧ್ಯವಾಗಲಿಲ್ಲ. ಚೈತನ್ಯ ಹಾಗೂ ಚಿಂತನೆಯೊಂದಿಗೆ ತಾನು ನಿಮ್ಮೊಂದಿಗೆ ಇರುವುದಾಗಿ ಸೋನಿಯಾ ಗಾಂಧಿ ಅವರು ಹೇಳಿಕೆಯಲ್ಲಿ ತಿಳಿಸಿದ್ದಾರೆ. ಇದು ಭವ್ಯ ಪರಂಪರೆ ಇರುವ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‌ನ ಹೆಗ್ಗುರುತಿನ ಕಾರ್ಯಕ್ರಮ. ನಮ್ಮ ಪಕ್ಷ ಪುನರುಜ್ಜೀವನಗೊಳ್ಳುವ ಭರವಸೆ ನನಗಿದೆ ಎಂದು ಅವರು ಹೇಳಿದ್ದಾರೆ.

ಬಿಜೆಪಿ ವಿರುದ್ಧ ಪ್ರತಿಪಕ್ಷದ ಒಗ್ಗಟ್ಟು ರೂಪಿಸಲು  ಕಾಂಗ್ರೆಸ್ ಬಲಿಷ್ಠವಾಗಬೇಕು ಎಂದು ಪಕ್ಷದ ಹಿರಿಯ ನಾಯಕ ಜೈರಾಮ್ ರಮೇಶ್ ಹೇಳಿದರು. ಪ್ರಾದೇಶಿಕ ಪಕ್ಷಗಳಿಗೆ ಕಠಿಣ ಸಂದೇಶ ರವಾನಿಸಿದ ಅವರು, ಇನ್ನು ಮುಂದೆ ಇತರ ಪ್ರತಿಪಕ್ಷಗಳು ಕಾಂಗ್ರೆಸ್ ಅನ್ನು ಲಘುವಾಗಿ ಪರಿಗಣಿಸುವಂತಿಲ್ಲ ಎಂದಿದ್ದಾರೆ. 
ಕಾರ್ಯಕ್ರಮದಲ್ಲಿ ಪಕ್ಷದ ಹಿರಿಯ ನಾಯಕರಾದ ಪಿ. ಚಿದಂಬರಂ, ರಾಜಸ್ಥಾನದ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್, ರಾಜ್ಯ ಸಭಾ ಸದಸ್ಯ ಕೆ.ಸಿ. ವೇಣುಗೋಪಾಲ್, ಚತ್ತೀಸ್‌ಗಡ ಮುಖ್ಯಮಂತ್ರಿ ಭೂಪೇಶ್ ಬಾಘೇಲ್, ರಾಜ್ಯ ಕಾಂಗ್ರೆಸ್ ವರಿಷ್ಠ ಕೆ.ಎಸ್. ಅಳಗಿರಿ ಹಾಗೂ ಕರ್ನಾಟಕ ಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಮೊದಲಾದವರು ಉಪಸ್ಥಿತರಿದ್ದರು. 
ಯಾತ್ರೆಯನ್ನು ಆರಂಭಿಸುವ ಮುನ್ನ ರಾಹುಲ್ ಗಾಂಧಿ ಅವರು ತಮಿಳುನಾಡಿನ ಶ್ರೀಪೆರಂಬದೂರುನಲ್ಲಿರುವ ತನ್ನ ತಂದೆ ಹಾಗೂ ಮಾಜಿ ಪ್ರಧಾನಿ ರಾಜೀವ್ ಗಾಂಧಿ ಅವರ ಸ್ಮಾರಕಕ್ಕೆ ಭೇಟಿ ನೀಡಿ ಪ್ರಾರ್ಥನೆ ಸಲ್ಲಿಸಿದರು.

- 12 ರಾಜ್ಯಗಳು, 2 ಕೇಂದ್ರಾಡಳಿತ ಪ್ರದೇಶಗಳನ್ನು ಹಾದು ಹೋಗಲಿದೆ 
- ಐದು ತಿಂಗಳು ಕಾಲ, 3,570 ಕಿ.ಮೀ.ಯಾತ್ರೆ 
- ಯಾತ್ರೆ ಶ್ರೀನಗರದಲ್ಲಿ ಮುಕ್ತಾಯಗೊಳ್ಳುವ ಮುನ್ನ ತಿರುವನಂತಪುರ, ಕೊಚ್ಚಿ, ನೀಲಂಬೂರು, ಮೈಸೂರು, ಬಳ್ಳಾರಿ, ರಾಯಚೂರು, ವಿಕರಾಬಾದ್, ನಾಂದೇಡ್, ಜಲಗಾಂವ್, ಇಂದೋರ್, ಕೋಟಾ, ದೌಸಾ, ಆಲ್ವಾರ್, ಬುಲಂದ್‌ಶಹರ್, ದಿಲ್ಲಿ, ಅಂಬಾಲ, ಪಠಾಣ್‌ಕೋಠ್ ಹಾಗೂ ಜಮ್ಮು ಮೂಲಕ ಸಾಗಲಿದೆ

ದ್ವೇಷ ರಾಜಕಾರಣಕ್ಕೆ ತಂದೆಯನ್ನು ಕಳೆದುಕೊಂಡೆ: ರಾಹುಲ್ ಗಾಂಧಿ 

ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಬುಧವಾರ ಇಲ್ಲಿಗೆ ಸಮೀಪದ ಶ್ರೀಪೆರಂಬದೂರುನಲ್ಲಿರುವ ತನ್ನ ತಂದೆ ಹಾಗೂ ಮಾಜಿ ಪ್ರಧಾನಿ ರಾಜೀವ್ ಗಾಂಧಿ ಅವರ ಸ್ಮಾರಕಕ್ಕೆ ತೆರಳಿ ಪುಷ್ಪ ನಮನ ಸಲ್ಲಿಸಿದರು.
ಅನಂತರ ಮಾತನಾಡಿದ ಅವರು, ‘‘ದ್ವೇಷ ಹಾಗೂ ವಿಭಜನೆಯು ರಾಜಕಾರಣಕ್ಕೆ ನನ್ನ ತಂದೆಯನ್ನು ಕಳೆದುಕೊಂಡೆ. ನನ್ನ ಪ್ರೀತಿಯ ದೇಶವನ್ನು ಕೂಡ ಕಳೆದುಕೊಳ್ಳಲಾರೆ. ಪ್ರೀತಿ ದ್ವೇಷವನ್ನು ಜಯಿಸುತ್ತದೆ. ಭರವಸೆ ಭೀತಿಯನ್ನು ಸೋಲಿಸುತ್ತದೆ. ಒಟ್ಟಾಗಿ ನಾವು ಜಯಿಸುತ್ತೇವೆ’’ ಎಂದು ಅವರು ಟ್ವೀಟ್ ಮಾಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News