ಪಿಎಂ-ಶ್ರೀ ಯೋಜನೆ ಮೂಲಕ 14,500 ಶಾಲೆಗಳು ಮೇಲ್ದರ್ಜೆಗೆ ಕೇಂದ್ರ ಸಂಪುಟ ಅನುಮೋದನೆ

Update: 2022-09-07 17:45 GMT

ಹೊಸದಿಲ್ಲಿ,ಆ.7: ದೇಶಾದ್ಯಂತ 14,500 ಶಾಲೆಗಳನ್ನು ಮೇಲ್ದರ್ಜೆಗೇರಿಸುವ ಪ್ರಧಾನಮಂತ್ರಿ -ಶ್ರೀ ಯೋಜನೆಗೆ ಕೇಂದ್ರ ಸಂಪುಟ ಬುಧವಾರ ಅನುಮೋದನೆ ನೀಡಿದೆ ಹಾಗೂ ಮುಂದಿನ ಐದು ವರ್ಷಗಳಿಗೆ 27,360 ಕೋಟಿ ರೂ.ಹಣವನ್ನು ಮೀಸಲಿಡಲಾಗುವುದು. ಈ ಯೋಜನೆಯಡಿ ಕೇಂದ್ರ ಸರಕಾರವು 18,128 ಕೋಟಿ ರೂ. ಅನುದಾನ ನೀಡಲಿದ್ದು, ಇದರಿಂದ 18 ಲಕ್ಷ ವಿದ್ಯಾರ್ಥಿಗಳಿಗೆ ಪ್ರಯೋಜನವಾಗಲಿದೆ.

  ಸೋಮವಾರ ನಡೆದ ಶಿಕ್ಷಕರ ದಿನಾಚರಣೆಯ ಸಂದರ್ಭದಲ್ಲಿ ಪ್ರಧಾನಿ ಮೋದಿ ಈ ಯೋಜನೆಯನ್ನು ಘೋಷಿಸಿದ್ದರು. ಪಿಎಂ-ಶ್ರೀ ಯೋಜನೆಯಡಿ ರೂಪಿಸಲಾಗುವ ಶಾಲೆಗಳು ಮಾದರಿ ಶಿಕ್ಷಣ ಸಂಸ್ಥೆಗಳಾಗಲಿವೆ ಹಾಗೂ 2020ರ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಸಂಪೂರ್ಣ ಚೈತನ್ಯದೊಂದಿಗೆ ಸಾಕಾರಗೊಳಿಸಲಿದೆ ಎಂದವರು ಹೇಳಿದ್ದರು.

 ಈಗ ಅಸ್ತಿತ್ವದಲ್ಲಿರುವ ಶಾಲೆಗಳನ್ನು ಪಿಎಂ-ಶ್ರೀ ಯೋಜನೆಯಡಿ ಕೇಂದ್ರ ಸರಕಾರ, ರಾಜ್ಯಗಳು, ಕೇಂದ್ರಾಡಳಿತ ಪ್ರದೇಶಗಳು ಹಾಗೂ ಸ್ಥಳೀಯಾಡಳಿತಗಳು ನಡೆಸುತ್ತಿರುವ ಶಾಲೆಗಳನ್ನು ಈ ಯೋಜನೆಯಡಿ ನಿರ್ವಹಿಸಲಾಗುವುದು ಎಂದು ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಸಂಪುಟ ಸಭೆಯ ಬಳಿಕ ತಿಳಿಸಿದರು.

     ನೇರ ಪ್ರಯೋಜನ ವರ್ಗಾವಣೆ ವಿಧಾನದ ಮೂಲಕ ಈ ಶಾಲೆಗಳಿಗೆ ಅನುದಾನವನ್ನು ನೇರವಾಗಿ ವರ್ಗಾಯಿಸಲಾಗುವುದು ಎಂದವರು ತಿಳಿಸಿದ್ದಾರೆ. ಪ್ರಾಂಶುಪಾಲರು ಹಾಗೂ ಶಾಲಾ ಸಮಿತಿಗಳು, ಮಂಜೂರಾದ ಅನುದಾನದ ಶೇ.40ರಷ್ಟನ್ನು ಹೇಗೆ ಬಳಸಿಕೊಳ್ಳಬೇಕೆಂದು ನಿರ್ಧರಿಸಲಿವೆ ಎಂದರು. ಈ ಉದ್ದೇಶಕ್ಕಾಗಿ ಪಾರದರ್ಶಕ ಮಾನದಂಡವನ್ನು ರೂಪಿಸಲಾಗುವುದು. ದೇಶಲ್ಲಿ ಇದೇ ಮೊದಲ ಬಾರಿಗೆ ಶಾಲೆಗಳಿಗೆ ಇಂತಹ ಅವಕಾಶವನ್ನು ನೀಡಲಾಗಿದೆಯೆಂದವರು ತಿಳಿಸಿದರು.

ಪಿಎಂ ಶ್ರೀ ಯೋಜನೆಗೆ ಶಾಲೆಗಳ ಆಯ್ಕೆ ಪ್ರಕ್ರಿಯೆ

 ಮೊದಲ ಹಂತದಲ್ಲಿ ರಾಜ್ಯಗಳು ಹಾಗೂ ಕೇಂದ್ರಾಡಳಿತಗಳು ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಸಂಪೂರ್ಣವಾಗಿ ಜಾರಿಗೊಳಿಸಲು ಒಪ್ಪಿಗೆ ಸೂಚಿಸಬೇಕು. ನಿರ್ದಿಷ್ಟಪಡಿಸಿದಂತಹ ಗುಣಮಟ್ಟದ ಖಾತರಿಯನನು ಸಾಧಿಸುವಲ್ಲಿ ಶಾಲೆಗಳಿಗೆ ಬೆಂಬಲ ನೀಡುವ ಕುರಿತಾಗಿ ಕೇಂದ್ರ ಸರಕಾರ ಸೂಚಿಸಿದ ಕ್ರಮಗಳಿಗೆ ತಮ್ಮ ಬದ್ಧತೆಯನ್ನು ವ್ಯಕ್ತಪಡಿಸಬೇಕು.

 ಎರಡನೆ ಹಂತದಲ್ಲಿ ಪಿಎಂ-ಶ್ರೀ ಯೋಜನೆಗೆ ಆಯ್ಕೆಯಾಗುವ ಅರ್ಹತೆಯಿರುವ ಶಾಲೆಗಳನ್ನು ಗುರುತಿಸಲಾಗುವುದು . ಅವುಗಳ ಪೈತಿ ಸೂಚಿಸಲಾದಂತಹ ಕನಿಷ್ಠ ಮಾನದಂಡಗಳನ್ನು ಹೊಂದಿರುವ ಶಾಲೆಗಳನ್ನು ಆಯ್ಕೆ ಮಾಡಲಾಗುವುದು.ಆನಂತರ ಭೌತಿಕ ಪರಿಶೀನೆಗಳ ಮೂಲಕ ಈ ಶಾಲೆಗಳಿಗೆ ಅರ್ಹತಾ ಪ್ರಮಾಣಪತ್ರವನ್ನು ನೀಡಲಾಗುವುದು.

  ದೇಶಾದ್ಯಂತ ಪ್ರತಿ ಬ್ಲಾಕ್/ ನಗರ ಸ್ಥಳೀಯಡಾಳಿತ ಸಂಸ್ಥೆಗಳ ವ್ಯಾಪ್ತಿಲ್ಲಿ ಕನಿಷ್ಠ ಎರಡು ಶಾಲೆಗಳನ್ನು ಆಯ್ಕೆ ಮಾಡಲಾಗುವುದು ( ಒಂದು ಪ್ರಾಥಮಿಕ, ಒಂದು ಮಾಧ್ಯಮಿ/ ಪ್ರೌಢ ಶಾಲೆ). ಜಿಯೋ ಟ್ಯಾಗಿಂಗ್ ವ್ಯವಸ್ಥೆಯ ಮೂಲಕ ಪಿಎಂ ಶ್ರೀ ಶಾಲೆಗಳ ಕಣ್ಗಾವಲು ನಡೆಸಲಾಗುವುದು ಎಂದು ಕೇಂದ್ರ ಸರಕಾರದ ಹೇಳಿಕೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News