ಏಶ್ಯಕಪ್: ಪಾಕ್ ವಿರುದ್ದ ಸೋತ ಬಳಿಕ ಕುರ್ಚಿ ಮುರಿದು ಕ್ರೀಡಾಂಗಣದಲ್ಲಿ ಗದ್ದಲ ನಡೆಸಿದ ಅಫ್ಘಾನ್ ಕ್ರಿಕೆಟ್ ಅಭಿಮಾನಿಗಳು

Update: 2022-09-08 05:17 GMT

ಶಾರ್ಜಾ: ಅಫ್ಘಾನಿಸ್ತಾನ ಹಾಗೂ  ಪಾಕಿಸ್ತಾನ ನಡುವೆ ಬುಧವಾರ ನಡೆದ  ಏಶ್ಯಕಪ್ ಸೂಪರ್ 4 ಪಂದ್ಯವು ಇದುವರೆಗೆ ಆಡಿದ ಅತ್ಯಂತ ರೋಚಕ ಟಿ20 ಪಂದ್ಯಗಳಲ್ಲಿ ಒಂದಾಗಿದೆ. ಭಾರೀ ಕುತೂಹಲ ಕೆರಳಿಸಿದ್ದ ಈ ಪಂದ್ಯವನ್ನು  ಅಂತಿಮವಾಗಿ ಪಾಕಿಸ್ತಾನವು ಒಂದು ವಿಕೆಟ್‌ನಿಂದ ಗೆದ್ದುಕೊಂಡಿತು. ವೇಗಿ ನಸೀಮ್ ಷಾ ಅವರು ಕೊನೆಯ ಓವರ್ ನ  ಮೊದಲೆರಡು ಎಸೆತಗಳನ್ನು ಸಿಕ್ಸರ್‌ಗೆ ಅಟ್ಟುವ ಮೂಲಕ ಪಾಕ್ ತಂಡವನ್ನು ಫೈನಲ್ ಗೆ ತಲುಪಿಸಿ  ಪಂದ್ಯದ ಸ್ಟಾರ್ ಆಗಿ ಹೊರಹೊಮ್ಮಿದ್ದರು. ಆದಾಗ್ಯೂ, ಪಂದ್ಯದ ನಂತರ ಅಫ್ಘಾನಿಸ್ತಾನದ ಅಭಿಮಾನಿಗಳು  ಕುರ್ಚಿಗಳನ್ನು ಕಿತ್ತು ಎಸೆಯುವ ಮೂಲಕ   (Afghanistan fans were seen breaking chairs) ಕ್ರೀಡಾಂಗಣದಲ್ಲಿ ದಾಂಧಲೆ ನಡೆಸಿದರು. ಅಫ್ಘಾನಿಸ್ತಾನ ಹಾಗೂ  ಪಾಕಿಸ್ತಾನವನ್ನು ಬೆಂಬಲಿಸುವ ಅಭಿಮಾನಿಗಳ ನಡುವೆ ವಾಗ್ವಾದವೂ  ನಡೆಯಿತು.

ಪಾಕಿಸ್ತಾನದ ಮಾಜಿ ವೇಗಿ ಶುಐಬ್ ಅಖ್ತರ್ ಅವರು ಟ್ವಿಟ್ಟರ್‌ನಲ್ಲಿ ಈ ಗದ್ದಲದ ವೀಡಿಯೊವನ್ನು ಹಂಚಿಕೊಂಡಿದ್ದಾರೆ . "ಇದು ಅಫ್ಘಾನ್ ಅಭಿಮಾನಿಗಳ ವರ್ತನೆ. ಅವರು ಈ ಹಿಂದೆ ಅನೇಕ ಬಾರಿ ಹೀಗೆ ಮಾಡಿದ್ದಾರೆ. ಇದೊಂದು ಆಟ, ಇದನ್ನು ಕ್ರೀಡಾಸ್ಫೂರ್ತಿಯಿಂದ ತೆಗೆದುಕೊಳ್ಳಬೇಕು.  @ShafiqStanikzai ನಿಮ್ಮ ಪ್ರೇಕ್ಷಕರು ಮತ್ತು ನಿಮ್ಮ ಆಟಗಾರರು   ಕ್ರೀಡೆಯಲ್ಲಿ ಬೆಳೆಯಲು ಬಯಸಿದರೆ ಇಬ್ಬರೂ ಕೆಲವು ವಿಷಯಗಳನ್ನು ಕಲಿಯಬೇಕು'' ಎಂದು ಟ್ವೀಟಿಸಿದ್ದಾರೆ.

ಅಖ್ತರ್ ತಮ್ಮ ಪೋಸ್ಟ್‌ನಲ್ಲಿ ಅಫ್ಘಾನಿಸ್ತಾನ ಕ್ರಿಕೆಟ್ ಮಂಡಳಿಯ ಮಾಜಿ ಸಿಇಒ ಆಗಿರುವ ಶಫೀಕ್ ಸ್ಟಾನಿಕ್‌ಝಾಯ್ ಅವರನ್ನು ಟ್ಯಾಗ್ ಮಾಡಿದ್ದಾರೆ.

ಅಖ್ತರ್ ಅವರ ಟ್ವೀಟ್‌ಗೆ, ಸ್ಟಾನಿಕ್‌ಝೈ ಕೂಡ ಉತ್ತರಿಸಿದ್ದಾರೆ: "ನೀವು ಪ್ರೇಕ್ಷಕರ ಭಾವನೆಗಳನ್ನು ನಿಯಂತ್ರಿಸಲು ಸಾಧ್ಯವಿಲ್ಲ ಮತ್ತು ಅಂತಹ ಘಟನೆಗಳು ಕ್ರಿಕೆಟ್ ಜಗತ್ತಿನಲ್ಲಿ ಹಲವು ಬಾರಿ ನಡೆದಿವೆ, ನೀವು ಕಬೀರ್ ಖಾನ್, ಇಂಝಿಮಾಮ್ ಭಾಯ್ ಹಾಗೂ  @iRashidLatif68 ಅವರನ್ನು ನಾವು ಹೇಗೆ ನಡೆಸಿಕೊಂಡಿದ್ದೇವೆ ಎಂದು ಕೇಳಬೇಕು. ಮುಂದಿನ ಬಾರಿ ಬಾತ್ ಕೋ ನೇಷನ್ ಪೆ ಮತ್ ಲೆನಾ ಎಂದು  ನಿಮಗೆ ಸಲಹೆ ನೀಡುತ್ತೇನೆ’’ ಎಂದು ಟ್ವೀಟಿಸಿದ್ದಾರೆ.

ಅಫ್ಘಾನಿಸ್ತಾನ ಹಾಗೂ  ಪಾಕಿಸ್ತಾನ ನಡುವಿನ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಅಫ್ಘಾನ್  20 ಓವರ್‌ಗಳಲ್ಲಿ 6 ವಿಕೆಟಿಗೆ 129 ರನ್ ಗಳಿಸಿತು. 130 ರನ್‌ಗಳನ್ನು ಬೆನ್ನಟ್ಟಿದ ಪಾಕಿಸ್ತಾನ ಒಂದು ಹಂತದಲ್ಲಿ 16ನೇ ಓವರ್‌ನಲ್ಲಿ 87 ರನ್ ಗೆ 3  ವಿಕೆಟ್ ಕಳೆದುಕೊಂಡಿತ್ತು, ಆದಾಗ್ಯೂ, ಪಾಕಿಸ್ತಾನ ಅಲ್ಲಿಂದ ಪತನದ ಹಾದಿ ಹಿಡಿಯಿತು.  ಅಂತಿಮ ಓವರ್‌ ವೇಳೆಗೆ 118 ರನ್ ಗೆ 9 ವಿಕೆಟ್ ಗಳನ್ನು ಕಳೆದುಕೊಂಡಿತು.

ಪಾಕಿಗೆ ಅಂತಿಮ ಓವರ್‌ನಲ್ಲಿ ಗೆಲುವಿಗೆ 11 ರನ್‌ಗಳ ಅಗತ್ಯವಿತ್ತು., ಪಾಕಿಸ್ತಾನದ ಹೀರೋ ಆಗಿ ಹೊರಹೊಮ್ಮಿದ ನಸೀಮ್ ಶಾ ಸತತ 2 ಸಿಕ್ಸರ್ ಸಿಡಿಸಿ ತಂಡಕ್ಕೆ ರೋಚಕ ಜಯ ತಂದರು.

19ನೇ ಓವರ್ ನಲ್ಲಿ   ಪಾಕಿಸ್ತಾನದ ಬ್ಯಾಟರ್ ಆಸಿಫ್ ಅಲಿ ಹಾಗೂ  ಅಫ್ಘಾನಿಸ್ತಾನದ ಫರೀದ್ ಅಹ್ಮದ್ ಮಲಿಕ್ ನಡುವೆ ವಾಗ್ವಾದ ನಡೆಯಿತು.  ಅಲಿ ವಿಕೆಟ್ ಪಡೆದ ಮಲಿಕ್ ಅಲಿ ಬಳಿ ಹೋಗಿ ಸಂಭ್ರಮಾಚರಣೆ ನಡೆಸಿದರು. ಇದನ್ನು ಇಷ್ಟಪಡದ ಅಲಿ ತನ್ನ ಬ್ಯಾಟ್‌ ಎತ್ತಿ ಅಫ್ಘಾನಿಸ್ತಾನದ ವೇಗಿಗೆ ಥಳಿಸಲು ಮುಂದಾದ ಘಟನೆ ನಡೆದಿದ್ದು, ಸಹ ಆಟಗಾರರು ಮಧ್ಯಪ್ರವೇಶಿಸಿ ಇಬ್ಬರನ್ನೂ ಸಮಾಧಾನಪಡಿಸಿದರು.

ಗೆಲುವಿನ ನಂತರ ಏಶ್ಯಕಪ್ ಫೈನಲ್‌ನಲ್ಲಿ ತನ್ನ ಸ್ಥಾನವನ್ನು ಭದ್ರಪಡಿಸಿದ ಪಾಕಿಸ್ತಾನದ ಆಟಗಾರರು ಮೈದಾನದತ್ತ ಧಾವಿಸಿ ಸಂಭ್ರಮಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News