ಭೀಕರ ಪ್ರವಾಹ: ಪಾಕ್ ಗೆ 18 ಶತಕೋಟಿ ಡಾಲರ್ ಆರ್ಥಿಕ ನಷ್ಟ

Update: 2022-09-10 15:40 GMT

ಇಸ್ಲಮಾಬಾದ್, ಸೆ.10: ಪಾಕಿಸ್ತಾನವನ್ನು ಕಂಗೆಡಿಸಿದ್ದ ಅಸಾಮಾನ್ಯ ಪ್ರವಾಹದಿಂದ ಆಗಿರುವ ಆರ್ಥಿಕ ನಷ್ಟ ಸುಮಾರು 18 ಶತಕೋಟಿ ಡಾಲರ್ಗೆ ಹೆಚ್ಚಿದೆ ಎಂದು ಸರಕಾರದ ಮೂಲವನ್ನು ಉಲ್ಲೇಖಿಸಿ `ದಿ ನ್ಯೂಸ್ ಇಂಟರ್ನ್ಯಾಷನಲ್' ವರದಿ ಮಾಡಿದೆ. ವಿನಾಶಕಾರಿ ಪ್ರವಾಹವು ಕೃಷಿ ಬೆಳವಣಿಗೆಯ ಮೇಲೆ ತೀವ್ರ ಪರಿಣಾಮ ಬೀರಿದೆ. ಪ್ರವಾಹದಿಂದ 8.25 ಮಿಲಿಯನ್ ಎಕರೆ ಪ್ರದೇಶದ ಬೆಳೆಗಳು ನಾಶಗೊಂಡಿದ್ದು , ಹತ್ತಿ, ಭತ್ತ ಮತ್ತಿತರ ಅಲ್ಪಾವಧಿಯ ಬೆಳೆಗಳು ನಷ್ಟಗೊಂಡಿವೆ. ಕೃಷಿ ಭೂಮಿಯಲ್ಲಿ ನಿಂತಿರುವ ನೆರೆ ನೀರನ್ನು ಬರಿದುಗೊಳಿಸದಿದ್ದರೆ ಗೋಧಿ ಬಿತ್ತನೆಗೂ ಗಂಭೀರ ಸಮಸ್ಯೆಯಾಗಲಿದೆ.

ದೇಶದ ಬಹುತೇಕ ಭಾಗಗಳಲ್ಲಿ ಹತ್ತಿಬೆಳೆ ನಾಶಗೊಂಡಿದ್ದು ಇದೀಗ ಗೋಧಿ ಬಿತ್ತನೆಯೂ ಸವಾಲಿನ ಕಾರ್ಯವಾಗಲಿದೆ. ಮುಂದಿನ ಕೃಷಿ ಸೀಸನ್ನಲ್ಲಿ ಗೋಧಿಯ ಬೆಂಬಲ ಬೆಲೆ ಹೆಚ್ಚಿಸುವ ಬಗ್ಗೆ ವರದಿ ನೀಡುವಂತೆ ರಾಷ್ಟ್ರೀಯ ಆಹಾರ ಭದ್ರತಾ ಇಲಾಖೆಗೆ ಸೂಚಿಸಲಾಗಿದೆ.

ಅಂತಾರಾಷ್ಟ್ರೀಯ ದೇಣಿಗೆದಾರರ ಜತೆ ಸರಣಿ ಸಭೆ ನಡೆಸಿರುವ ಅಧಿಕಾರಿಗಳು, ಪಾಕಿಸ್ತಾನಕ್ಕೆ ಕೊಡುಗೆಯಾಗಿ ನೀಡಿರುವ ಪ್ರತೀ ರೂಪಾಯಿಯನ್ನೂ ಪ್ರವಾಹದ ನಷ್ಟವನ್ನು ತಗ್ಗಿಸುವ ನಿಟ್ಟಿನಲ್ಲಿ ಪಾರದರ್ಶಕವಾಗಿ ಬಳಸಲು ಪರಿಣಾಮಕಾರಿ ಮೇಲ್ವಿಚಾರಣೆ ಮತ್ತು ಮೌಲ್ಯಮಾಪನ ವ್ಯವಸ್ಥೆಯ ಬಗ್ಗೆ ಭರವಸೆ ನೀಡಿದ್ದಾರೆ ಎಂದು ವರದಿಯಾಗಿದೆ.

ಈ ಮಧ್ಯೆ, ಆರ್ಥಿಕ ಬಿಕ್ಕಟ್ಟಿಗೆ ಸಿಲುಕಿರುವ ಪಾಕಿಸ್ತಾನಕ್ಕೆ ವಿನಾಶಕಾರಿ ಪ್ರವಾಹವು ಗಾಯದ ಮೇಲೆ ಬರೆ ಎಳೆದಂತಾಗಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಎಚ್ಚರಿಸಿದೆ. ವಿನಾಶಕಾರಿ ಮುಂಗಾರು ಪ್ರವಾಹದಿಂದಾಗಿ ಪಾಕಿಸ್ತಾನದ ಜನತೆಗೆ ಎದುರಾಗಿರುವ ಮಾನವೀಯ ಬಿಕ್ಕಟ್ಟಿನ ಬಗ್ಗೆ ತೀವ್ರ ಕಳವಳಗೊಂಡಿದ್ದೇವೆ. ಪ್ರವಾಹದಿಂದಾಗಿ ಪ್ರಸ್ತುತ ಪ್ರಮಾಣದ ಹಾನಿ ಮತ್ತು ವಿನಾಶವು ಹಿಂದೆಂದೂ ಕಾಣದ ರೀತಿಯಲ್ಲಿದೆ. ದೀರ್ಘಾವಧಿಯ ಜಾಗತಿಕ ಹವಾಮಾನ ಬದಲಾವಣೆಯ ಪರಿಣಾಮ ಇಂತಹ ತೀವ್ರ ಸಮಸ್ಯೆ ಎದುರಾಗಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆಯ ಪೂರ್ವ ಮೆಡಿಟರೇನಿಯನ್ ವಿಭಾಗದ ಪ್ರಾದೇಶಿಕ ನಿರ್ದೇಶಕ ಡಾ. ಅಹ್ಮದ್ ಅಲ್-ಮಂಧಾರಿ ಹೇಳಿದ್ದಾರೆ.

ಪ್ರವಾಹದ ಪರಿಣಾಮ ಬಡತನ ಮತ್ತು ನಿರುದ್ಯೋಗದ ಪ್ರಮಾಣ ಈಗಿನ 21.9%ದಿಂದ 36%ಕ್ಕೆ ಏರಿಕೆಯಾಗಲಿದೆ. 118 ಜಿಲ್ಲೆಗಳನ್ನು ಕಂಗೆಡಿಸಿದ ಪ್ರವಾಹದಿಂದ ದೇಶದ ಸುಮಾರು 37% ಜನತೆ ಸಮಸ್ಯೆಗೆ ಸಿಲುಕಿದ್ದಾರೆ ಎಂದು ಪಾಕ್ ಸರಕಾರ ನೇಮಿಸಿದ ಉನ್ನತ ಮಟ್ಟದ ಸಮಿತಿ ಅಂದಾಜು ಮಾಡಿದೆ.

ವಿತ್ತ ಸಚಿವಾಲಯ, ಯೋಜನಾ ಸಚಿವಾಲಯ, ಸ್ಟೇಟ್ ಬ್ಯಾಂಕ್ ಆಫ್ ಪಾಕಿಸ್ತಾನ, ಎಫ್ಬಿಆರ್ ನ ಪ್ರತಿನಿಧಿಗಳು ಈ ಸಮಿತಿಯ ಸದಸ್ಯರಾಗಿದ್ದಾರೆ. ಪ್ರಾಂತೀಯ ಸರಕಾರಗಳು, ಸೇನೆ, ಎನ್ಜಿಒ ಸಂಸ್ಥೆಗಳ ಸಂಘಟಿತ ಕಾರ್ಯಾಚರಣೆ ಬಿರುಸಿನಿಂದ ಸಾಗಿದ್ದು ಪ್ರಾಂತೀಯ ಮಟ್ಟದಲ್ಲಿ ನಾಶ-ನಷ್ಟದ ಸಮೀಕ್ಷೆ ಮತ್ತು ಪರಿಹಾರ ಕಾರ್ಯಾಚರಣೆ ಸೋಮವಾರದಿಂದ ಆರಂಭವಾಗಲಿದೆ ಎಂದು ರಾಷ್ಟೀಯ ವಿಪತ್ತು ನಿರ್ವಹಣಾ ಘಟಕದ ಅಧಿಕಾರಿಗಳು ಹೇಳಿದ್ದಾರೆ.

ಜಿಡಿಪಿ 3%ಕ್ಕೆ ಕುಸಿತದ ನಿರೀಕ್ಷೆ

ದೇಶವನ್ನು ಕಂಗೆಡಿಸಿದ ವಿನಾಶಕಾರಿ ಪ್ರವಾಹ, ಉಕ್ರೇನ್ ಯುದ್ಧ ಹಾಗೂ ಇತರ ಕೆಲವು ವಿಷಯಗಳು 2022-23 ಆರ್ಥಿಕ ವರ್ಷದಲ್ಲಿ  ಪಾಕಿಸ್ತಾನದ ಜಿಡಿಪಿ ಬೆಳವಣಿಗೆ ದರವನ್ನು 3%ಕ್ಕೆ ಇಳಿಸುವ ನಿರೀಕ್ಷೆಯಿದೆ ಎಂದು ವರದಿಯಾಗಿದೆ. ಈ ಹಿಂದೆ ಜಿಡಿಪಿ ಬೆಳವಣಿಗೆ ದರವನ್ನು 5% ಎಂದು ಅಂದಾಜಿಸಲಾಗಿತ್ತು.

ಶನಿವಾರ ಸುದ್ಧಿಗೋಷ್ಟಿಯಲ್ಲಿ ಮಾತನಾಡಿದ ರಾಷ್ಟ್ರೀಯ ವಿಪತ್ತು ಪರಿಹಾರ ಮತ್ತು ಸಮನ್ವಯ ಕೇಂದ್ರ(ಎನ್ಎಫ್ಆರ್ಸಿಸಿ)ದ ಅಧ್ಯಕ್ಷ ಮೇಜರ್ ಜನರಲ್ ಝಾಫರ್ ಇಕ್ಬಾಲ್, ಪ್ರವಾಹದಿಂದ ಒಟ್ಟು 30 ಶತಕೋಟಿ ಡಾಲರ್ನಷ್ಟು ನಷ್ಟ ಸಂಭವಿಸಿದೆ .  ಅನಿರೀಕ್ಷಿತ ಪ್ರವಾಹ ದೇಶದಾದ್ಯಂತ 33 ಮಿಲಿಯನ್ಗೂ ಅಧಿಕ ಜನತೆಯ ಮೇಲೆ ಪರಿಣಾಮ ಬೀರಿದೆ.

60 ಲಕ್ಷಕ್ಕೂ ಅಧಿಕ ಮಂದಿಯನ್ನು  ಪರಿಹಾರ ಶಿಬಿರಕ್ಕೆ ಸ್ಥಳಾಂತರಿಸಲಾಗಿದೆ ಎಂದು ಹೇಳಿದ್ದಾರೆ. ಮಾನವ ಜೀವನ, ಮೂಲಸೌಕರ್ಯ ಮತ್ತು ಬೆಳೆಗಳಿಗೆ ಅಪಾರ ಹಾನಿಯನ್ನುಂಟು ಮಾಡಿದ ವಿಪತ್ತನ್ನು ಎದುರಿಸಲು ಸಮರ್ಥ ಮೂಲಸೌಕರ್ಯಗಳ ಕೊರತೆಯ ನಡುವೆ ಪರ್ವತದಿಂದ ಧುಮ್ಮುಕ್ಕಿ ಹರಿದ ಪ್ರವಾಹಗಳು ಸವಾಲಾಗಿ ಪರಿಣಮಿಸಿವೆ ಎಂದವರು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News