ಅತಿಕುರ್‌ ‌ರಹ್ಮಾನ್ ರನ್ನು ಉಳಿಸಿ, ಕೂಡಲೇ ಬಿಡುಗಡೆ ಮಾಡಿ: ಕುಟುಂಬಸ್ಥರ ಆಗ್ರಹ

Update: 2022-09-10 16:36 GMT

ಹೊಸದಿಲ್ಲಿ: ʼಅತಿಕುರ್ ‌ರಹ್ಮಾನ್ ಅವರ ಸ್ಥಿತಿ ನಿಜವಾಗಿಯೂ ಕೆಟ್ಟದಾಗಿದೆ, ಲಕ್ನೋ ಆಸ್ಪತ್ರೆಯಲ್ಲಿ ಅವರನ್ನು ನೋಡಲು ಹೋದಾಗ ಅವರ ಮುಂದೆ ಮೃತದೇಹವೊಂದು ಬಿದ್ದಿತ್ತುʼ ಎಂದು ಅತಿಕುರ್  ‌ರಹ್ಮಾನ್ ಅವರ ಪತ್ನಿ ಸಂಜಿದಾ  ‌ರಹ್ಮಾನ್ ಹೇಳಿದ್ದಾರೆ.

 "ಅತಿಕುರ್‌ಗೆ ಮಾತನಾಡಲು ಮತ್ತು ನಮ್ಮನ್ನು ಗುರುತಿಸಲು ಸಹ ಸಾಧ್ಯವಾಗುತ್ತಿಲ್ಲ, ನಮ್ಮ ತಂದೆ ಯಾವಾಗ ಹಿಂತಿರುಗುತ್ತಾರೆ ಎಂದು ನಮ್ಮ ಮಕ್ಕಳು ಕೇಳುತ್ತಿದ್ದಾರೆ, ಅವರಿಗೆ ನೀಡಲು ನನ್ನ ಬಳಿ ಉತ್ತರವಿಲ್ಲ. ನೀವೆಲ್ಲರೂ ಅತಿಕುರ್ ಅವರ ಪರವಾಗಿ ಧ್ವನಿ ಎತ್ತಲು ಮತ್ತು ಅವರಿಗೆ ನ್ಯಾಯ ದೊರಕಲು ಸಹಾಯ ಮಾಡಲು ನಾನು ಬಯಸುತ್ತೇನೆ", ಎಂದು ಅತಿಕುರ್‌ ಪತ್ನಿ ಮನವಿ ಮಾಡಿದ್ದಾರೆ.

 ದಿಲ್ಲಿಯ ಪ್ರೆಸ್ ಕ್ಲಬ್ ಆಫ್ ಇಂಡಿಯಾದಲ್ಲಿ ಅತಿಕುರ್  ‌ರಹ್ಮಾನ್ ಅವರ ಕುಟುಂಬ ಸದಸ್ಯರು ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಸಂಜಿದಾ ಅವರು ತಮ್ಮ ಪತಿಯ ಬಿಡುಗಡೆಗಾಗಿ ಆಗ್ರಹಿಸಿದ್ದಾರೆ.

ಅತಿಕುರ್  ‌ರಹ್ಮಾನ್ ತಾಯಿ ರಾಬಿಯಾ ತಮ್ಮ ಮಗನ ಬಗ್ಗೆ ಮಾತನಾಡುತ್ತಾ ಕಣ್ಣೀರಿಟ್ಟರು. "ನನ್ನ ಮಗ ಬಾಲ್ಯದಿಂದಲೂ ಅನಾರೋಗ್ಯದಿಂದ ಬಳಲುತ್ತಿದ್ದನು, ಅವನಿಗೆ ನ್ಯಾಯ ಸಿಗಬೇಕು, ಅವನು ಯಾವುದೇ ತಪ್ಪು ಮಾಡಿಲ್ಲ, ಆದರೂ ಅವನು ನರಳುತ್ತಿದ್ದಾನೆ, ಈ ಸ್ಥಿತಿಯಲ್ಲಿ ಅವನು ಸ್ನಾನಗೃಹಕ್ಕೆ ಸಹ ಹೋಗಲಾರನು, ಆದರೂ ಅವನನ್ನು ಜೈಲಿಗೆ ಮತ್ತೆ ಕಳುಹಿಸಲಾಗಿದೆ. ಇದು ಅಮಾನವೀಯ" ಎಂದು ರಾಬಿಯಾ ಹೇಳಿದ್ದಾರೆ.

ದಿಲ್ಲಿ ವಿಶ್ವವಿದ್ಯಾನಿಲಯದ ಪ್ರಾಧ್ಯಾಪಕಿ ನಂದಿತಾ ನರೇನ್ ಅವರು ಮಾತನಾಡಿ, ಅತಿಕುರ್‌ಗೆ ಆಗಿರುವ ಅನ್ಯಾಯವನ್ನು ಎತ್ತಿ ತೋರಿಸಿದರು ಮತ್ತು ಅವರಿಗೆ ತಕ್ಷಣದ ಜಾಮೀನಿನ ಅಗತ್ಯವನ್ನು ಪ್ರತಿಪಾದಿಸಿದರು.

 "ಅತಿಕುರ್  ‌ರಹ್ಮಾನ್ ಅವರಂತಹ ವಿದ್ಯಾರ್ಥಿ ನಾಯಕರು ತಮ್ಮ ಕೆಟ್ಟ ಆರೋಗ್ಯದ ನಡುವೆಯೂ ನ್ಯಾಯ ಸಿಗದವರಿಗಾಗಿ ಕೆಲಸ ಮಾಡುತ್ತಲೇ ಇದ್ದಾರೆ, ಅವರು ರಾಷ್ಟ್ರದ ಯೋಗಕ್ಷೇಮಕ್ಕೆ ಕೆಲಸ ಮಾಡುತ್ತಿದ್ದಾರೆ." ಎಂದು ನರೇನ್‌ ಹೇಳಿದರು

 ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ ಜಾಮಿಯಾ ಮಿಲಿಯಾ ಇಸ್ಲಾಮಿಯಾ ಅಧ್ಯಕ್ಷೆ ಫೌಝಿಯಾ, ಜಾಮಿಯಾ ಮಿಲಿಯಾ ಇಸ್ಲಾಮಿಯಾ ಸಿಎಫ್‌ಐ ಘಟಕದ ಕಾರ್ಯದರ್ಶಿ ಝಕಿ ಹಮ್ದಾನ್ ಮೊದಲಾದವರು ಪತ್ರಿಕಾಗೋಷ್ಟಿಯಲ್ಲಿ ಭಾಗವಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News