ಕೋಮು ಘರ್ಷಣೆ; 70 ರ ಹಿರಿಯ ವ್ಯಕ್ತಿ ಸೇರಿದಂತೆ ಅಪ್ರಾಪ್ತರನ್ನು ಬಂಧಿಸಿದ ಬಿಹಾರ ಪೊಲೀಸ್‌

Update: 2022-09-10 17:44 GMT
Photo: Twitter

ಪಾಟ್ನಾ: ಗುರುವಾರ ಬಿಹಾರದ ಸಿವಾನ್ ಜಿಲ್ಲೆಯಲ್ಲಿ ಮಹಾವೀರ ಅಖಾರಾ ಮೆರವಣಿಗೆಯ ಸಂದರ್ಭದಲ್ಲಿ ನಡೆದ ಕೋಮು ಘರ್ಷಣೆಗೆ ಸಂಬಂಧಿಸಿದಂತೆ 70 ವರ್ಷದ ಹಿರಿಯ ವ್ಯಕ್ತಿ ಮತ್ತು ಅಪ್ರಾಪ್ತರನ್ನು ಪೊಲೀಸರು ಬಂಧಿಸಿದ್ದಾರೆ ಎಂದು ವರದಿಯಾಗಿದೆ. 

  ಕೋಲು, ದೊಣ್ಣೆ ಹಿಡಿದು ಶಸ್ತ್ರಸಜ್ಜಿತರಾಗಿ ಮೆರವಣಿಗೆ ಸಾಗುತ್ತಿದ್ದ ಕೇಸರಿಧಾರಿ ಗುಂಪು ಮಸೀದಿಯೊಂದರ ಸಮೀಪ ಹಾದು ಹೋಗುತ್ತಿದ್ದಂತೆ ಕೋಮುವಾದಿ ಘೋಷಣೆಗಳನ್ನು ಕೂಗಿದರು. ಇದು ಬರ್ಹರಿಯಾ ಪಟ್ಟಣದ ಪುರಾನಿ ಬಜಾರ್ ಪ್ರದೇಶದಲ್ಲಿ ಕಲ್ಲು ತೂರಾಟಕ್ಕೆ ಕಾರಣವಾಯಿತು ಎನ್ನಲಾಗಿದೆ ಎಂದು TheWire.in ವರದಿ ಮಾಡ

ಮೆರವಣಿಗೆಯಲ್ಲಿದ್ದ ಸದಸ್ಯರು ಸಣ್ಣ ಅಂಗಡಿಗಳಿಗೆ ಬೆಂಕಿ ಹಚ್ಚಿದ್ದಾರೆ ಎಂದು ಮೂಲಗಳು ದಿ ವೈರ್‌ಗೆ ತಿಳಿಸಿವೆ.

ದಿ ವೈರ್ ಲಭಿಸಿರುವ ವೀಡಿಯೊಗಳಲ್ಲಿ ಹಿಂದುತ್ವ ಕಾರ್ಯಕರ್ತರು ಕಲ್ಲು ತೂರಾಟ ಮತ್ತು ಮುಸ್ಲಿಮರ ಮನೆಗಳನ್ನು ಧ್ವಂಸಗೊಳಿಸುವುದು ದಾಖಲಾಗಿದೆ. ಆದಾಗ್ಯೂ, ಅವರು ಯಾವ ಬಲಪಂಥೀಯ ಸಂಘಟನೆಗಳಿಗೆ ಸೇರಿದವರು ಎಂಬುದು ಸ್ಪಷ್ಟವಾಗಿಲ್ಲ.

ಟೈಮ್ಸ್ ಆಫ್ ಇಂಡಿಯಾದ ಪ್ರಕಾರ, ಸಿವಾನ್ ಪೊಲೀಸರು 25 ಮುಸ್ಲಿಮರು ಮತ್ತು 10 ಹಿಂದೂಗಳ ವಿರುದ್ಧ ಎಫ್‌ಐಆರ್ ದಾಖಲಿಸಿದ್ದು, ಘಟನೆಗೆ ಸಂಬಂಧಿಸಿದಂತೆ 20 ಜನರನ್ನು ಬಂಧಿಸಿದ್ದಾರೆ.

ಭಾರತೀಯ ದಂಡ ಸಂಹಿತೆ 147 (ಗಲಭೆ), 148 (ಮಾರಣಾಂತಿಕ ಆಯುಧದಿಂದ ಗಲಭೆ), 149 (ಕಾನೂನುಬಾಹಿರ ಸಭೆ), 188 (ಆದೇಶಕ್ಕೆ ಅವಿಧೇಯತೆ), 296 (ಧಾರ್ಮಿಕ ಸಭೆಗೆ ಅಡ್ಡಿಪಡಿಸುವುದು), 337, 338 (ಘೋರವಾದ ಗಾಯವನ್ನು ಉಂಟುಮಾಡುವುದು), 435 (ಹಾನಿ ಮಾಡುವ ಉದ್ದೇಶದಿಂದ ಕಿಡಿಗೇಡಿತನ), 427, 505 (ಶಾಂತಿ ಭಂಗವನ್ನು ಪ್ರಚೋದಿಸುವ ಉದ್ದೇಶದಿಂದ ಅವಮಾನ), 307 (ಕೊಲೆಯ ಪ್ರಯತ್ನ), 353 (ದಾಳಿ) ಮತ್ತು ವಿಭಾಗ 120B (ಕ್ರಿಮಿನಲ್ ಪಿತೂರಿ) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು thewire.in ವರದಿ ಮಾಡಿದೆ.

 
ಘರ್ಷಣೆ ಭುಗಿಲೆದ್ದ ನಂತರ ಪೊಲೀಸರು ಬಂಧಿಸಿದ 70 ವರ್ಷದ ವ್ಯಕ್ತಿ ಮತ್ತು ಅಪ್ರಾಪ್ತರ ಕುಟುಂಬ, ಅವರು ಮುಗ್ಧರು, ಘರ್ಷಣೆಗೂ ಅವರಿಗೂ ಯಾವುದೇ ಸಂಬಂಧವಿಲ್ಲ ಎಂದು ಹೇಳಿದೆ.

ಈ ವಿಷಯದ ಬಗ್ಗೆ ಪ್ರತಿಕ್ರಿಯಿಸಲು ಸಿವಾನ್ ಪೊಲೀಸ್ ವರಿಷ್ಠಾಧಿಕಾರಿ (ಎಸ್‌ಪಿ) ಶೈಲೇಶ್ ಕುಮಾರ್ ಸಿನ್ಹಾ ಅವರು ನಿರಾಕರಿಸಿದ್ದಾರೆ.

ಎಫ್‌ಐಆರ್‌ನಲ್ಲಿ ದೂರುದಾರರಾಗಿರುವ ಮ್ಯಾಜಿಸ್ಟ್ರೇಟ್ ಪ್ರೇಮ್ ಚಂದ್, “ನನ್ನನ್ನು ಒಂದು ದಿನದ ಮಟ್ಟಿಗೆ ಈ ಪ್ರದೇಶದ ದಂಡ ಅಧಿಕಾರಿ (ಮ್ಯಾಜಿಸ್ಟ್ರೇಟ್) ಮಾಡಲಾಯಿತು ಆದ್ದರಿಂದ ನಾನು ದೂರು ದಾಖಲಿಸಿದೆ. ಮಸೀದಿಯ ಮುಂಭಾಗದಲ್ಲಿ ಕಲ್ಲು ತೂರಾಟ ನಡೆಯಿತು,   ಇದಾದ ಬಳಿಕ ಘರ್ಷಣೆ ಉಂಟಾಗುತ್ತಿದ್ದಂತೆ ಆಡಳಿತ ಮಂಡಳಿ ಪರಿಸ್ಥಿತಿಯನ್ನು ನಿಭಾಯಿಸಿತು. ಕಲ್ಲು ತೂರಾಟದ ವೇಳೆ ಅಂಗಡಿಗೂ ಹಾನಿಯಾಗಿದೆ” ಎಂದು ದಿ ವೈರ್‌ ಗೆ ತಿಳಿಸಿದ್ದಾರೆ.

ಘರ್ಷಣೆಯ ನಂತರ, ಈ ಪ್ರದೇಶದಲ್ಲಿ ಶಾಂತಿಯನ್ನು ಖಚಿತಪಡಿಸಿಕೊಳ್ಳಲು ಪೊಲೀಸರು ಎರಡೂ ಸಮುದಾಯಗಳ ನಡುವೆ ಶಾಂತಿ ಸಭೆ ನಡೆಸಿದ್ದಾರೆ. ವಾತಾವರಣವು ಇನ್ನೂ ಉದ್ವಿಗ್ನವಾಗಿದೆ ಎಂದು ಸ್ಥಳೀಯ ನಿವಾಸಿಯೊಬ್ಬರು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News