ಕೊಲ್ಲೂರು | ನೀರಿನ ಸೆಳೆತಕ್ಕೆ ಸಿಲುಕಿದ ಮಗನನ್ನು ರಕ್ಷಿಸುವ ಯತ್ನದಲ್ಲಿ ನದಿಪಾಲಾದ ತಾಯಿ
ಕುಂದಾಪುರ, ಸೆ.11: ಶ್ರೀ ಮೂಕಾಂಬಿಕಾ ದೇಗುಲಕ್ಕೆ ಆಗಮಿಸಿದ ಕೇರಳದ ತಿರುವನಂತಪುರದ ಯಾತ್ರಾರ್ಥಿ ಕುಟುಂಬದ ಮಹಿಳೆಯೊಬ್ಬರು ಸೌಪರ್ಣಿಕಾ ನದಿಯಲ್ಲಿ ಕೊಚ್ಚಿ ಹೋದ ಘಟನೆ ಶನಿವಾರ ಸಂಜೆ ಸಂಭವಿಸಿದೆ.
ಮುರುಗನ್ ಎಂಬವರ ಪತ್ನಿ ಚಾಂದಿ ಶೇಖರನ್ (42) ನೀರುಪಾಲಾದವರಾಗಿದ್ದಾರೆ. ಮಹಿಳೆಗಾಗಿ ಅಗ್ನಿ ಶಾಮಕ ದಳ, ಕೊಲ್ಲೂರು ಪೊಲೀಸರು ಹಾಗೂ ಗ್ರಾಮಸ್ಥರು ಶೋಧ ಕಾರ್ಯ ನಡೆಸುತ್ತಿದಾರೆ.
ಇದನ್ನೂ ಓದಿ: ವಿಜಯನಗರ | ಗಣೇಶ ವಿಸರ್ಜನೆ ವೇಳೆ ಕಾಲುವೆಗೆ ಉರುಳಿದ ಕ್ರೇನ್: ಯುವಕ ಮೃತ್ಯು, ಇನ್ನೋರ್ವ ಗಂಭೀರ
ಓಣಂ ಹಬ್ಬದ ಪ್ರಯುಕ್ತ ಮುರುಗನ್ ಅವರು ಪತ್ನಿ ಚಾಂದಿ ಶೇಖರ್, ಮಗ ಆದಿತ್ಯನ್ ಹಾಗೂ ಸಂಬಂಧಿಕರು ಸೇರಿದಂತೆ 14 ಮಂದಿಯೊಂದಿಗೆ ಸೆ.10ರಂದು ತಿರುವನಂತಪುರದಿಂದ ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನಕ್ಕೆ ಆಗಮಿಸಿದ್ದಾರೆ. ಕೊಲ್ಲೂರು ಯಮುನಾ ವಿಹಾರ್ ವಸತಿ ಗೃಹದಲ್ಲಿ ಉಳಿದುಕೊಂಡಿದ್ದ ಇವರು ಶನಿವಾರ ಸಂಜೆ ವೇಳೆ ಸೌರ್ಪಾಣಿಕ ಸ್ನಾನ ಘಟ್ಟಕ್ಕೆ ಬಂದಿದ್ದಾರೆ. ಈ ವೇಳೆ ನೀರಿಗಿಳಿದ ಮುರುಗನ್ ನೀರಿನ ಸೆಳೆತಕ್ಕೆ ಸಿಲುಕಿದಾಗ ಪುತ್ರ ಆದಿತ್ಯ ರಕ್ಷಣೆಗೆ ಮುಂದಾಗಿದ್ದಾನೆ. ಈ ವೇಳೆ ಆದಿತ್ಯ ಕೂಡಾ ನೀರಿನ ಸೆಳೆತಕ್ಕೆ ಸಿಲುಕಿದ್ದನ್ನು ಗಮನಿಸಿದ ಚಾಂದಿ ನದಿ ನೀರಿಗೆ ಧುಮುಕಿದ್ದಾರೆನ್ನಲಾಗಿದೆ. ಆದರೆ ಈಜು ಬಾರದ ಅವರು ನೀರಿನ ಸೆಳತಕ್ಕೆ ಸಿಲುಕಿ ಕೊಚ್ಚಿಕೊಂಡು ಹೋಗಿ ನಾಪತ್ತೆಯಾಗಿದ್ದಾರೆನ್ನಲಾಗಿದೆ. ಇದೇವೇಳೆ ಬೊಬ್ಬೆ ಕೇಳಿ ಸ್ಥಳಕ್ಕಾಗಮಿಸಿದ ಸ್ಥಳೀಯರು ಮುರುಗನ್ ಮತ್ತು ಆದಿತ್ಯ ಅವರನ್ನು ರಕ್ಷಿಸಿದ್ದಾರೆ.
ಈ ಬಗ್ಗೆ ಕೊಲ್ಲೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.