ವಿಜಯನಗರ | ಗಣೇಶ ವಿಸರ್ಜನೆ ವೇಳೆ ಕಾಲುವೆಗೆ ಉರುಳಿದ ಕ್ರೇನ್: ಯುವಕ ಮೃತ್ಯು, ಇನ್ನೋರ್ವ ಗಂಭೀರ

ವಿಜಯನಗರ, ಸೆ.11: ಗಣೇಶನ ಮೂರ್ತಿಯ ವಿಸರ್ಜನೆ ವೇಳೆ ಕ್ರೇನ್ ವೊಂದು ಕಾಲುವೆಗೆ ಉರುಳಿಬಿದ್ದ ಪರಿಣಾಮ ಯುವಕನೋರ್ವ ಸ್ಥಳದಲ್ಲೇ ಮೃತಪಟ್ಟ ಘಟನೆ ಹೊಸಪೇಟೆಯ ತುಂಗಭದ್ರಾ ಜಲಾಶಯ ಸಮೀಪದ ಪವರ್ ಕಾಲುವೆಯಲ್ಲಿ ಕಳೆದ ಮದ್ಯರಾತ್ರಿ 1:30ರ ಸುಮಾರಿಗೆ ನಡೆದಿದೆ. ಘಟನೆಯಲ್ಲಿ ಇನ್ನೋರ್ವ ಬಾಲಕ ಗಂಭೀರವಾಗಿ ಗಾಯಗೊಂಡಿದ್ದಾನೆ.
ಟಿ.ಬಿ. ಡ್ಯಾಂ ನಿವಾಸಿ ಅಶೋಕ (18) ಮೃತಪಟ್ಟ ಯುವಕ. ಅದೇ ಕಾಲನಿ ನಿವಾಸಿ ಸಾಯಿ ನಿಖಿಲ್ (17) ಗಂಭೀರವಾಗಿ ಗಾಯಗೊಂಡಿದ್ದು, ಆತನನ್ನು ಕೊಪ್ಪಳದ ಸರಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಇದನ್ನೂ ಓದಿ: ಬೆಳಗಾವಿ | ಗಣೇಶ ವಿಸರ್ಜನೆ ವೇಳೆ ಚಾಕುವಿನಿಂದ ಚುಚ್ಚಿ ಯುವಕನ ಕೊಲೆ
ಇ.ವಿ. ಕ್ಯಾಂಪ್ ಮಹಾಗಣಪತಿ ಗಣೇಶ ಮಂಡಳಿಯವರು ಶನಿವಾರ ರಾತ್ರಿ 1.30 ರ ಸುಮಾರಿಗೆ 34 ಅಡಿ ಎತ್ತರದ ಬೃಹತ್ ಗಣೇಶನ ಮೂರ್ತಿಯನ್ನು ವಿರ್ಜನೆಗೆಂದು ಪವರ್ ಕಾಲುವೆ ಬಳಿ ಕೊಂಡೊಯ್ದಿದ್ದಾರೆ. ವಿಸರ್ಜನೆಗೆ ಮುಂದಾಗುತ್ತಿದ್ದಂತೆ ಭಾರ ತಾಳಲಾರದೇ ಕ್ರೇನ್ ಗಣಪನ ಮೂರ್ತಿ ಜೊತೆಗೆ ಕಾಲುವೆಗೆ ಉರುಳಿ ಬಿದ್ದಿದೆ. ಈ ವೇಳೆ ಕ್ರೇನ್ ಮತ್ತು ತಡೆಗೋಡೆ ಮಧ್ಯೆ ಸಿಲುಕಿದ ಅಶೋಕ ಸ್ಥಳದಲ್ಲೇ ಮೃತಪಟ್ಟರೆ, ಸಾಯಿ ನಿಖಿಲ್ ಗಂಭೀರ ಗಾಯಗೊಂಡಿದ್ದಾರೆ.
ಬಳಿಕ ಮತ್ತೆರಡು ಕ್ರೇನ್ಗಳ ಸಹಾಯದಿಂದ ಕಾಲುವೆಗೆ ಬಿದ್ದ ಕ್ರೇನ್ ಅನ್ನು ಹೊರತೆಗೆಯಲಾಯಿತು.
ಕ್ರೇನ್ ಆಪರೇಟರ್ ರಾಜು ಹಾಗೂ ಸುರಕ್ಷತಾ ಕ್ರಮ ಕೈಗೊಳ್ಳದ ಇ.ವಿ. ಕ್ಯಾಂಪ್ ಮಹಾಗಣಪತಿ ಮಂಡಳಿ ಮುಖಂಡ ನೂಕರಾಜ ವಿರುದ್ಧ ಟಿ.ಬಿ. ಡ್ಯಾಂ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.







