×
Ad

ಪಾಕಿಸ್ತಾನ: ನೆರೆ ಸಂತ್ರಸ್ತರಿಗೆ ನೆಲೆ ಒದಗಿಸಿದ ದೇವಸ್ಥಾನ

Update: 2022-09-11 22:48 IST
PHOTO: PTI

ಕರಾಚಿ, ಸೆ.11: ವಿನಾಶಕಾರಿ ಪ್ರವಾಹದಿಂದ ಕಂಗೆಟ್ಟಿರುವ ಪಾಕಿಸ್ತಾನ, ಪರಿಹಾರ ಮತ್ತು ಪುನರ್ವಸತಿ ಕಾರ್ಯಕ್ಕೆ ಅಂತರಾಷ್ಟ್ರೀಯ ನೆರವಿಗೆ ಕೋರಿಕೆ ಮುಂದುವರಿಸಿರುವಂತೆಯೇ ಬಲೂಚಿಸ್ತಾನ ಪ್ರಾಂತದ ಸಣ್ಣ ಹಳ್ಳಿಯೊಂದರಲ್ಲಿ ಹಿಂದು ದೇವಾಲಯವೊಂದು ಸುಮಾರು 300ರಷ್ಟು ಪ್ರವಾಹ ಸಂತ್ರಸ್ತರಿಗೆ(ಬಹುತೇಕ ಮುಸ್ಲಿಮರು) ಆಹಾರ ಮತ್ತು ಆಶ್ರಯ ಒದಗಿಸಿದೆ ಎಂದು ವರದಿಯಾಗಿದೆ.

 ಕರಾಚಿ ಜಿಲ್ಲೆಯ ಜಲಾಲ್ ಖಾನ್ ಗ್ರಾಮದಲ್ಲಿ ಎತ್ತರದ ಪ್ರದೇಶದಲ್ಲಿರುವ ಬಾಬಾ ಮಾಧವದಾಸ್ ಮಂದಿರವು ನೆರೆನೀರಿನಿಂದ ಸುರಕ್ಷಿತವಾಗಿದ್ದು ನೆರೆ ಸಂತ್ರಸ್ತರಿಗೆ ಸಂಕಷ್ಟದ ಸಮಯದಲ್ಲಿ ನೆರವಿನ ಹಸ್ತ ಚಾಚಿದೆ. ನಾರಿ, ಬೋಲನ್ ಮತ್ತು ಲೆಹ್ರಿ ನದಿಗಳು ಉಕ್ಕಿ ಹರಿದ ಕಾರಣ ಈ ಗ್ರಾಮವು ಜಲಾವೃತಗೊಂಡಿದ್ದು ಇತರ ಪ್ರದೇಶಗಳಿಂದ ಸಂಪರ್ಕ ಕಳೆದುಕೊಂಡಿತ್ತು. ಈ ಕಷ್ಟಕಾಲದಲ್ಲಿ ಪ್ರವಾಹ ಪೀಡಿತ ಜನರು ಹಾಗೂ ಜಾನುವಾರುಗಳಿಗೆ ದೇವಸ್ಥಾನದಲ್ಲಿ ಆಶ್ರಯ ಕಲ್ಪಿಸಲಾಗಿದೆ ಎಂದು ‘ದಿ ಡಾನ್’ ವರದಿ ಮಾಡಿದೆ. ವಿಭಜನೆ ಪೂರ್ವದ ಹಿಂದೂ ಸಂತರಾಗಿದ್ದ ಬಾಬಾ ಮಾಧವದಾಸರನ್ನು ಆ ಪ್ರದೇಶದ ಹಿಂದೂ ಹಾಗೂ ಮುಸ್ಲಿಮರು ಸಮಾನವಾಗಿ ಗೌರವಿಸುತ್ತಿದ್ದರು. ಅವರು ಒಂಟೆಯ ಮೇಲೆ ಪ್ರಯಾಣಿಸುತ್ತಿದ್ದರು ಮತ್ತು ಜನರನ್ನು ಜಾತಿ, ಧರ್ಮದ ಬದಲು ಮಾನವೀಯತೆಯ ದೃಷ್ಟಿಯಿಂದ ಗುರುತಿಸುತ್ತಿದ್ದರು ಎಂದು ಸ್ಥಳೀಯರು ಹೇಳಿದ್ದಾರೆ.

ದೇವಾಲಯದ ಆವರಣದಲ್ಲಿ ಸುಮಾರು 300ರಷ್ಟು ಜನರಿಗೆ ಹಾಗೂ ಜಾನುವಾರುಗಳಿಗೆ ಆಶ್ರಯ ನೀಡಲಾಗಿದೆ. ಪ್ರವಾಹದಿಂದ ಸಂಕಷ್ಟಕ್ಕೆ ಒಳಗಾದ ಮುಸ್ಲಿಮರು ದೇವಸ್ಥಾನಕ್ಕೆ ತೆರಳುವಂತೆ ಸ್ಥಳೀಯ ಹಿಂದುಗಳು ಮೈಕ್ನಲ್ಲಿ ಘೋಷಿಸುತ್ತಿದ್ದರು. ಸಂಕಷ್ಟದ ಸಮಯದಲ್ಲಿ ಆಹಾರ ಮತ್ತು ಆಶ್ರಯ ಒದಗಿಸಿದ ಸ್ಥಳೀಯ ಸಮುದಾಯಕ್ಕೆ ಋಣಿಯಾಗಿದ್ದೇವೆ ಎಂದು ದೇವಸ್ಥಾನದಲ್ಲಿ ಆಶ್ರಯ ಪಡೆದವರು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News