ಉಕ್ರೇನ್ ಯುದ್ಧದಲ್ಲಿ ಹಿನ್ನಡೆ: ರಷ್ಯಾದಲ್ಲಿ ವ್ಯಾಪಕ ಆಕ್ರೋಶ

Update: 2022-09-12 03:38 GMT

ಲಂಡನ್: ಉಕ್ರೇನ್ ಮೇಲಿನ ದಾಳಿಯ ವೇಳೆ ವಶಪಡಿಸಿಕೊಂಡಿದ್ದ ಈಶಾನ್ಯ ಉಕ್ರೇನ್ ಪ್ರದೇಶದಿಂದ ರಷ್ಯಾ ಸೈನಿಕರನ್ನು ಓಡಿಸಿ, ಉಕ್ರೇನ್ ಯೋಧರು ಇಡೀ ಪ್ರದೇಶವನ್ನು ಮರು ಸ್ವಾಧೀನಪಡಿಸಿಕೊಂಡಿದ್ದಾರೆ.

ರಷ್ಯಾಗೆ ಇದು ಅತಿದೊಡ್ಡ ಮುಖಭಂಗ ಎನಿಸಿದ್ದು, ದೇಶಾದ್ಯಂತ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ. ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಯುದ್ಧ ತಂತ್ರವನ್ನು ತಕ್ಷಣ ಬದಲಿಸಿ ಅಂತಿಮ ವಿಜಯವನ್ನು ಖಾತರಿಪಡಿಸಬೇಕು ಎಂದು ರಾಷ್ಟ್ರೀಯವಾದಿಗಳು ಆಗ್ರಹಿಸಿದ್ದಾರೆ.

ಕಳೆದ ಮಾರ್ಚ್‍ನಲ್ಲಿ ಉಕ್ರೇನ್ ರಾಜಧಾನಿ ಕೀವ್‍ನಿಂದ ಹೊರಗಟ್ಟಲ್ಪಟ್ಟ ಬಳಿಕ ರಷ್ಯನ್ ಪಡೆಗಳ ಅತ್ಯಂತ ಹೀನಾಯ ಸೋಲು ಇದಾಗಿದೆ. ಕ್ಷಿಪ್ರ ಬೆಳವಣಿಗೆಯಲ್ಲಿ ರವಿವಾರ ಉಕ್ರೇನ್ ಯೋಧರು ಖರ್ಕೀವ್ ಪ್ರಾಂತ್ಯದ ಇಝಿಯಮ್ ಪ್ರದೇಶವನ್ನು ಮರು ಸ್ವಾಧೀನಪಡಿಸಿಕೊಂಡಿದ್ದರು.

ರಷ್ಯನ್ ಪಡೆಗಳು ಪಟ್ಟಣದಿಂದ ನಿರ್ಗಮಿಸುತ್ತಿದ್ದಂತೆ ಯೂರೋಪಿನಾದ್ಯಂತ ವ್ಯಾಪಕ ಸಂಭ್ರಮಾಚರಣೆ ಕಂಡುಬಂದಿದೆ. 1147ರಲ್ಲಿ ಸ್ಥಾಪನೆಯಾದ ಈ ಐತಿಹಾಸಿಕ ನಗರದ ರೆಡ್‍ಸ್ಕ್ವೇರ್‌ ನಲ್ಲಿ ಉಕ್ರೇನ್ ಯೋಧರು ಹಾಗೂ ಜನಸಾಮಾನ್ಯರು ಪಟಾಕಿ ಸಿಡಿಸಿ ಸಂಭ್ರಮಿಸಿದರು.

ಟೆಲಿಗ್ರಾಂನಲ್ಲಿ 11 ನಿಮಿಷದ ಧ್ವನಿ ಸಂದೇಶ ಕಳುಹಿಸಿರುವ ಚೆಚನ್ ಮುಖಂಡ ರಮಝಾನ್ ಖರ್ದಿರೋವ್, ಪಟ್ಟಣವನ್ನು ತಮ್ಮ ಪಡೆಗಳು ಕಳೆದುಕೊಂಡಿವೆ ಎಂಬ ವರದಿಗಳನ್ನು ನಿರಾಕರಿಸಿದ್ದಾರೆ. ಆದರೆ ಯೋಜಿತವಾಗಿ ದಾಳಿ ನಡೆಯುತ್ತಿಲ್ಲ ಎಂದು ಒಪ್ಪಿಕೊಂಡಿದ್ದಾರೆ.‌

ಈ ಅವಮಾನಕಾರಿ ಸೋಲಿನ ಬಗ್ಗೆ ರಷ್ಯಾ ಮೌನವಾಗಿದೆ. ಜತೆಗೆ ಇದು ಯುದ್ಧದ ಪರ ವಿಶ್ಲೇಷಕರ ಹಾಗೂ ರಷ್ಯಾದ ರಾಷ್ಟ್ರೀಯವಾದಿಗಳ ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ ಎಂದು ndtv.com ವರದಿ ಮಾಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News