ಅಕ್ರಮ ಕ್ವಾರಿಗಳ ವಿರುದ್ಧ ಹೋರಾಟ ನಡೆಸುತ್ತಿದ್ದ ಸಾಮಾಜಿಕ ಕಾರ್ಯಕರ್ತನಿಗೆ ಟ್ರಕ್ ಢಿಕ್ಕಿ ಹೊಡೆಸಿ ಕೊಂದ ಮಾಲಕನ ಬಂಧನ

Update: 2022-09-12 09:47 GMT

ಚೆನ್ನೈ: ತಮಿಳುನಾಡಿನಾದ್ಯಂತ(Tamilnadu) ಅಕ್ರಮವಾಗಿ ಕಾರ್ಯಾಚರಿಸುತ್ತಿರುವ ಕಲ್ಲಿನ ಕ್ವಾರಿಗಳನ್ನು(Quarry) ಮುಚ್ಚಬೇಕೆಂಬ ಆಗ್ರಹದೊಂದಿಗೆ ಹೋರಾಟನಡೆಸುತ್ತಿದ್ದ ರಾಜ್ಯದ ಸಾಮಾಜಿಕ ಕಾರ್ಯಕರ್ತ ಆರ್ ಜಗನ್ನಾಥನ್ ಅವರು ಚಲಾಯಿಸುತ್ತಿದ್ದ ದ್ವಿಚಕ್ರ ವಾಃನವೊಂದಕ್ಕೆ ಕಳೆದ ಶನಿವಾರ ಕ್ವಾರಿ ಮಾಲೀಕರೊಬ್ಬರಿಗೆ ಸೇರಿದ್ದೆನ್ನಲಾದ ಟ್ರಕ್(Truck) ಒಂದು ಢಿಕ್ಕಿ ಹೊಡೆದ ಪರಿಣಾಮ ಅವರು ಅಸುನೀಗಿದ್ದಾರೆ. ಘಟನೆ ರಾಜ್ಯದ ಕರೂರು ಜಿಲ್ಲೆಯ ಕೆ ಪರಾಮತಿ ಗ್ರಾಮದಲ್ಲಿ ಸಂಭವಿಸಿದೆ. ಘಟನೆ ಸಂಬಂಧ ಕ್ವಾರಿ ಮಾಲೀಕನ ಸಹಿತ ಮೂವರನ್ನು ಬಂಧಿಸಲಾಗಿದೆ.

ಅಪಘಾತ ನಡೆದ ತಕ್ಷಣ ಜಗನ್ನಾಥನ್ ಅವರನ್ನು ಸ್ಥಳೀಯ ಸರಕಾರಿ ವೈದ್ಯಕೀಯ ಕಾಲೇಜಿಗೆ ಸಾಗಿಸಲಾಯಿತಾದರೂ  ಅವರು ಅದಾಗಲೇ ಮೃತಪಟ್ಟಿದ್ದಾರೆಂದು ವೈದ್ಯರು ಘೋಷಿಸಿದರು. ಜಗನ್ನಾಥನ್ ಅವರ ಮೇಲೆ ಹರಿದ ಟ್ರಕ್ ಅಣ್ಣೈ ಕಲ್ಲಿನ ಕ್ವಾರಿಗೆ ಸೇರಿದ್ದೆಂದು ಹೇಳಲಾಗಿದೆ. ಅಕ್ರಮವಾಗಿ ಕಾರ್ಯಾಚರಿಸುತ್ತಿರುವ ಈ ಕ್ವಾರಿಯನ್ನು ಮುಚ್ಚಬೇಕೆಂದು ಜಗನ್ನಾಥನ್ ಹೋರಾಡುತ್ತಿದ್ದರು.

ಅಪಘಾತ ನಡೆದ ತಕ್ಷಣ ಟ್ರಕ್ಕಿನಲ್ಲಿದ್ದ ಕೆಲವರು ರಸ್ತೆಗಿಳಿದು ಜಗನ್ನಾಥನ್ ಅವರು ಮೃತಪಟ್ಟಿದ್ದಾರೆಂದು ದೃಢಪಟ್ಟ ನಂತರ ತಾವಾಗಿಯೇ ಅಂಬುಲೆನ್ಸ್ ಗೆ ಕರೆ ಮಾಡಿದರೆಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ಜಗನ್ನಾಥನ್ ಅವರ ಮನೆ ಸಮೀಪ ಅಕ್ರಮವಾಗಿ ಕಾರ್ಯಾಚರಿಸುತ್ತಿದ್ದ ಕ್ವಾರಿಯೊಂದನ್ನು ದೂರುಗಳ ಹಿನ್ನೆಲೆಯಲ್ಲಿ ಗಣಿ ಇಲಾಖೆ ಅಧಿಕಾರಿಗಳು ಮುಚ್ಚಿದ ಮರುದಿನವೇ ಈ ಅಪಘಾತ ನಡೆದಿದೆ.

ಜಗನ್ನಾಥನ್ ಅವರ ಸಾವಿನ ಸುದ್ದಿ ತಿಳಿಯುತ್ತಿದ್ದಂತೆಯೇ ಅವರ ಕುಟುಂಬ ಸದಸ್ಯರು ಹಾಗೂ ಸ್ಥಳೀಯ ಹೋರಾಟಗಾರರು ಆಸ್ಪತ್ರೆಯ ಹೊರಗೆ ಪ್ರತಿಭಟನೆ ನಡೆಸಿದರು. ಅವರ ಸಾವಿನ ಕುರಿತು ತನಿಖೆ ನಡೆಸಬೇಕೆಂದು ಆಗ್ರಹಿಸಿದ ತಮಿಳುನಾಡು ಪರಿಸರ ರಕ್ಷಣೆ ಹೋರಾಟದ ಸಂಚಾಲಕ ಆರ್.ಎಸ್ ಮುಗಿಲನ್, ಅಣ್ಣೈ ಕ್ವಾರಿ ಮುಚ್ಚಿಸಲು ಜಗನ್ನಾಥನ್ ಅವರು ನಡೆಸುತ್ತಿದ್ದ ಹೋರಾಟಕ್ಕೆ ಪ್ರತೀಕಾರವಾಗಿ ಅಪಘಾತ ನಡೆಸಲಾಗಿದೆ ಎಂದು ಆರೋಪಿಸಿದ್ದಾರೆ.

ತನ್ನ ಪತಿಯ ಸಾವಿಗೆ ಕಾರಣರಾದವರ ವಿರುದ್ಧ ಕ್ರಮಕೈಗೊಳ್ಳದ ಹೊರತು ಅವರ ಮೃತದೇಹವನ್ನು ಸ್ವೀಕರಿಸುವುದಿಲ್ಲ ಎಂದು ಜಗನ್ನಾಥನ್ ಅವರ ಪತ್ನಿ ರೇವತಿ ಪಟ್ಟು ಹಿಡಿದ ಘಟನೆಯೂ ನಡೆದಿದೆ. ಆಕೆ ನೀಡಿದ ದೂರಿನ ಆಧಾರದಲ್ಲಿ ಅಣ್ಣೈ ಕ್ವಾರಿ ಮಾಲೀಕ ಎಸ್ ಸೆಲ್ವಕುಮಾರ್, ಲಾರಿ ಚಾಲಕ ಶಕ್ತಿವೇಲ್ ಮತ್ತು ರಂಜಿತ್ ಕುಮಾರ್ ಎಂಬವರನ್ನು ಬಂಧಿಸಲಾಗಿದೆ.

2019ರಲ್ಲಿ ಜಗನ್ನಾಥನ್ ಅವರ ಮೇಲೆ ನಡೆದ ಮಾರಣಾಂತಿಕ ದಾಳಿಯಲ್ಲಿ ಬಂಧಿತರ ಪೈಕಿ ಸೆಲ್ವಕುಮಾರ್ ಮತ್ತು ಕುಮಾರ್ ಆರೋಪಿಗಳಾಗಿದ್ದರು. ಆದರೆ ಈ ದಾಳಿಯಲ್ಲಿ ಗಂಭೀರ ಗಾಯಗೊಂಡಿದ್ದರೂ ಜಗನ್ನಾಥನ್ ಬದುಕುಳಿದಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News