ವಿದ್ಯುತ್ ಸ್ಥಾವರಕ್ಕೆ ರಶ್ಯ ದಾಳಿ: ಉಕ್ರೇನ್‌ನಾದ್ಯಂತ ವಿದ್ಯುತ್ ಕಡಿತ

Update: 2022-09-12 15:37 GMT

ಮಾಸ್ಕೊ, ಸೆ.12: ಉಕ್ರೇನ್ ಪಡೆಗಳ ಪ್ರಬಲ ಪ್ರತಿದಾಳಿಯಿಂದಾಗಿ ಈಶಾನ್ಯ ಮತ್ತು ದಕ್ಷಿಣ ಪ್ರಾಂತದಲ್ಲಿ ಆಕ್ರಮಿಸಿಕೊಂಡ ಭೂಪ್ರದೇಶದಿಂದ ಹಿಂದಕ್ಕೆ ಸರಿದ ಬಳಿಕ ರಶ್ಯವು ವಿದ್ಯುತ್ ಸ್ಥಾವರ ಮತ್ತು ಇತರ ಮೂಲಸೌಕರ್ಯಗಳನ್ನು ಗುರಿಯಾಗಿಸಿ ನಡೆಸಿದ ದಾಳಿಯಿಂದ ಉಕ್ರೇನ್ನಾದ್ಯಂತ ವಿದ್ಯುತ್ ಕಡಿತಗೊಂಡಿದೆ ಎಂದು ವರದಿಯಾಗಿದೆ.

ರಶ್ಯದ ಬಾಂಬ್ ದಾಳಿಯಿಂದ ಖಾರ್ಕಿವ್ನ ಪಶ್ಚಿಮ ಹೊರವಲಯದಲ್ಲಿನ ವಿದ್ಯುತ್ ಕೇಂದ್ರದಲ್ಲಿ ಭಾರೀ ಬೆಂಕಿ ಕಾಣಿಸಿಕೊಂಡಿದ್ದು ಒಬ್ಬ ವ್ಯಕ್ತಿ ಮೃತಪಟ್ಟಿದ್ದಾನೆ.  ಈ ಉದ್ದೇಶಪೂರ್ವಕ ಮತ್ತು ಸಿನಿಕತನದ ಕ್ಷಿಪಣಿ ದಾಳಿಯು ನಾಗರಿಕರನ್ನು ಗುರಿಯಾಗಿಸಿದ ಭಯೋತ್ಪಾದನೆಯ ಕೃತ್ಯಗಳು ಎಂದು ಉಕ್ರೇನ್ ಅಧ್ಯಕ್ಷ ವೊಲೊದಿಮಿರ್ ಝೆಲೆನ್ಸ್ಕಿ ಖಂಡಿಸಿದ್ದಾರೆ.

ಖಾರ್ಕಿವ್ನ ಜನತೆ  ರವಿವಾರ ರಾತ್ರಿಯಿಡೀ ವಿದ್ಯುತ್ ಇಲ್ಲದೆ ಕಳೆದಿದ್ದಾರೆ. ವಿದ್ಯುತ್ ಬೆಳಕಿಲ್ಲದ ರಸ್ತೆಯಲ್ಲೇ ವಾಹನಗಳು ಸಂಚರಿಸಿವೆ ಮತ್ತು ಪಾದಾಚಾರಿಗಳು ಟಾರ್ಚ್ ಅಥವಾ ಮೊಬೈಲ್‌ ಫೋನ್‌ನ ಬೆಳಕನ್ನು ಬಳಸಿದರು ಎಂದು ಮೂಲಗಳು ಹೇಳಿವೆ.

ಮುಂಚೂಣಿ ಕ್ಷೇತ್ರಗಳಲ್ಲಿ ಅದರಲ್ಲೂ ಖಾರ್ಕಿವ್ ವಲಯದಲ್ಲಿ ನಮ್ಮ ಪಡೆಗಳ ಯಶಸ್ಸಿಗೆ ವಿದ್ಯುತ್ ನಿಲುಗಡೆಯ ಮೂಲಕ ರಶ್ಯಾದ ಆಕ್ರಮಣಕಾರರು ಸೇಡು ತೀರಿಸಿಕೊಂಡಿದ್ದಾರೆ . ರಶ್ಯದ ಕ್ಷಿಪಣಿ ದಾಳಿಯಿಂದ ದೇಶದ 2ನೇ ಅತೀ ದೊಡ್ಡ ವಿದ್ಯುತ್ಸ್ಥಾವರ ಖಾರ್ಕಿವ್ ಟಿಇಸಿ-5 ಹಾನಿಗೊಂಡಿದೆ ಎಂದು ಖಾರ್ಕಿವ್ನ ಮೇಯರ್ ಇಗೋರ್ ಟೆರೆಖೋವ್ ಪ್ರತಿಕ್ರಿಯಿಸಿದ್ದಾರೆ.

ಬೆಂಕಿ ಹೊತ್ತಿಕೊಂಡಿರುವ ಖಾರ್ಕಿವ್ ವಿದ್ಯುತ್ ಸ್ಥಾವರದ ವೀಡಿಯೊವನ್ನು ಪೋಸ್ಟ್ ಮಾಡಿರುವ ಝೆಲೆನ್ಸ್ಕಿ ʼರಶ್ಯದ ಭಯೋತ್ಪಾದಕರು ಭಯೋತ್ಪಾದಕರಾಗಿಯೇ ಉಳಿಯುತ್ತಾರೆ ಮತ್ತು ನಿರ್ಣಾಯಕ ಮೂಲಸೌಕರ್ಯದ ಮೇಲೆ ದಾಳಿ ಮಾಡುತ್ತಾರೆ. ಇದು ಮಿಲಿಟರಿ ನೆಲೆಯಲ್ಲ, ಅವರ ಉದ್ದೇಶ ಜನರನ್ನು ಕಗ್ಗತ್ತಲಲ್ಲಿ ಮುಳುಗಿಸುವುದಾಗಿದೆ ಎಂದು ಟ್ವೀಟ್ ಮಾಡಿದ್ದಾರೆ. ರಶ್ಯವನ್ನುದ್ದೇಶಿಸಿ ಮತ್ತೊಂದು ಟ್ವೀಟ್ ಮಾಡಿರುವ  ಅವರು `ನೀವು ನಮ್ಮನ್ನು ಬೆದರಿಸಬಹುದು, ಒಡೆಯಬಹುದು, ಶರಣಾಗುವಂತೆ ಮಾಡಬಹುದು ಎಂದು ಈಗಲೂ ಯೋಚಿಸುತ್ತಿದ್ದೀರಾ? ನಮಗೆ ಶೀತ, ಹಸಿವು, ಕತ್ತಲೆ ಮತ್ತು ಬಾಯಾರಿಕೆ ನಿಮ್ಮ ಸ್ನೇಹ ಮತ್ತು ಸಹೋದರತ್ವದಷ್ಟು ಮಾರಕ ಮತ್ತು ಭಯಾನಕವಲ್ಲ. ಆದರೆ ಇತಿಹಾಸವು ಎಲ್ಲವನ್ನೂ ಸೂಕ್ತ ಜಾಗದಲ್ಲಿ ಇರಿಸುತ್ತದೆ. ನಾವು ಗ್ಯಾಸ್, ಬೆಳಕು, ನೀರು ಮತ್ತು ಆಹಾರದೊಂದಿಗೆ ಇರುತ್ತೇವೆ- ಮತ್ತು ನೀವು ಇಲ್ಲದೇ' ಎಂದು ಹೇಳಿದ್ದಾರೆ.

ಬಳಿಕ ಸಂಜೆಯ ವೇಳೆ ಕೆಲವು ಪ್ರದೇಶಗಳಲ್ಲಿ ವಿದ್ಯುತ್ ಪೂರೈಕೆಯನ್ನು ಮರುಸ್ಥಾಪಿಸಲಾಗಿದೆ. ಪ್ರತಿದಾಳಿ ಆರಂಭಿಸಿದ 10 ದಿನದೊಳಗೇ ತಮ್ಮ ಪಡೆ ಸುಮಾರು 3000 ಚದರ ಕಿ.ಮೀಯಷ್ಟು ಪ್ರದೇಶವನ್ನು ಮರುವಶಪಡಿಸಿಕೊಂಡಿವೆ. ಈಗ ಉಕ್ರೇನ್ ಸೇನೆ ರಶ್ಯ ಗಡಿಗಿಂತ ಕೇವಲ 50 ಕಿ.ಮೀ ದೂರದಲ್ಲಿದೆ  ಎಂದು ಉಕ್ರೇನ್ ಸೇನಾ ಮುಖ್ಯಸ್ಥ ಜನರಲ್ ವಲೇರಿ ಝಲುಝಿನಿಯ್ ಹೇಳಿದ್ದಾರೆ. ಖಾರ್ಕಿವ್ನ 40ಕ್ಕೂ ಹೆಚ್ಚು ಪ್ರದೇಶಗಳನ್ನು ಉಕ್ರೇನ್ ಸೇನೆ ಮರು ವಶಪಡಿಸಿಕೊಂಡಿದೆ ಎಂದು ಖಾರ್ಕಿವ್ನ ಗವರ್ನರ್ ಒಲೆಹ್ ಸಿನಿಹುಬೋವ್ ಹೇಳಿದ್ದಾರೆ.

ಈ ಮಧ್ಯೆ, ಝಪೋರಿಝಿಯಾ ಸ್ಥಾವರದ ಪ್ರದೇಶವನ್ನು ಸುರಕ್ಷಿತ ವಲಯವೆಂದು ಘೋಷಿಸುವ ನಿಟ್ಟಿನಲ್ಲಿ ಮಾತುಕತೆ ಮುಂದುವರಿದಿದೆ ಎಂದು ಅಂತರಾಷ್ಟ್ರೀಯ ಪರಮಾಣು ಇಂಧನ ಏಜೆನ್ಸಿ(ಐಎಇಎ)ಯ ಪ್ರಧಾನ ನಿರ್ದೇಶಕ ರಫೇಲ್ ಗ್ರಾಸಿ ಹೇಳಿದ್ದಾರೆ. ಐಎಇಎ ಪ್ರಸ್ತಾವನೆಯಂತೆ, ಝಪೋರಿಝಿಯಾ ಸ್ಥಾವರ ಪ್ರದೇಶದಿಂದ ಸೇನೆ ಮತ್ತು ಶಸ್ತ್ರಾಸ್ತ್ರ ದಾಸ್ತಾನನ್ನು ಹಿಂಪಡೆಯುವಂತೆ ಫ್ರಾನ್ಸ್ ಅಧ್ಯಕ್ಷ  ಇಮ್ಯಾನುವೆಲ್ ಮಾಕ್ರನ್ ರಶ್ಯ ಅಧ್ಯಕ್ಷರನ್ನು ಆಗ್ರಹಿಸಿದ್ದಾರೆ.

ಝಪೋರಿಝಿಯ ಸ್ಥಾವರದ ಕೊನೆಯ ರಿಯಾಕ್ಟರ್ ಸ್ಥಗಿತ

ಯುರೋಪ್ನ ಬೃಹತ್ ಪರಮಾಣು ಸ್ಥಾವರವಾದ ಉಕ್ರೇನ್ನ ಝಪೋರಿಝಿಯಾದಲ್ಲಿ ವಿಕಿರಣ ದುರಂತವನ್ನು ತಡೆಯುವ ನಿಟ್ಟಿನಲ್ಲಿ  ಕೊನೆಯ ರಿಯಾಕ್ಟರ್ ಅನ್ನೂ ಸ್ಥಗಿತಗೊಳಿಸಲಾಗಿದೆ  ಎಂದು ಉಕ್ರೇನ್ನ ಪರಮಾಣು ಇಂಧನ ನಿರ್ವಹಣಾ ಪ್ರಾಧಿಕಾರ ಹೇಳಿದೆ.

ಈ ಪ್ರದೇಶದಲ್ಲಿ ನಡೆಯುತ್ತಿರುವ ಹೋರಾಟದ ಪರಿಣಾಮವಾಗಿ 6 ರಿಯಾಕ್ಟರ್ಗಳ ಝಪೊರಿಝಿಯಾ ಸ್ಥಾವರ ಕಳೆದ ವಾರ ಗ್ರಿಡ್ನೊಂದಿಗೆ ಸಂಪರ್ಕ ಕಡಿದುಕೊಂಡಿದ್ದು ಅದರ ಎಲ್ಲಾ ವಿದ್ಯುತ್ ಲೈನ್ಗಳೂ ಕಡಿತಗೊಂಡಿದ್ದವು. ಬಳಿಕ ಸ್ಥಾವರವು ಹಲವು ದಿನ `ಐಲ್ಯಾಂಡ್ ಮೋಡ್'ನಲ್ಲಿ ಕಾರ್ಯ ನಿರ್ವಹಿಸಿತ್ತು(ಇತರ ವಿದ್ಯುತ್ ಸ್ಥಾವರಗಳು ಅಥವಾ ಉಪಯುಕ್ತತೆಯ ಮೂಲಕ್ಕೆ ಸಂಪರ್ಕ ಹೊಂದಿಲ್ಲದ ಅಥವಾ ಮುಂದೆಯೂ ಸಂಪರ್ಕ ಸಾಧ್ಯವಾಗದ ಸ್ಥಿತಿ).

ಶನಿವಾರ ಸ್ಥಾವರದ ಒಂದು ವಿದ್ಯುತ್‌ ಲೈನ್‌ ಅನ್ನು ಮರುಸ್ಥಾಪಿಸಿ, ಸ್ಥಾವರದ ಅಂತಿಮ ರಿಯಾಕ್ಟರ್ನ ಕಾರ್ಯಸ್ಥಗಿತಗೊಳಿಸಲಾಗಿದೆ ಎಂದು ಉಕ್ರೇನ್ನ ಪರಮಾಣು ಇಂಧನ ನಿರ್ವಾಹಕ `ಎನರ್ಗೋಟಮ್' ಹೇಳಿದೆ. ಆದರೆ ಈ ವಿದ್ಯುತ್ ಲೈನ್ ಕೂಡಾ ಸಂಪರ್ಕ ಕಡಿದುಕೊಳ್ಳುವ ಸಾಧ್ಯತೆ ಇರುವುದರಿಂದ ಅಪಾಯ ಇನ್ನೂ ಇದೆ. ಹಾಗೆ ಆದರೆ, ತುರ್ತು ಡೀಸೆಲ್ ಜನರೇಟರ್ ಚಾಲನೆಗೊಳಿಸಿ ರಿಯಾಕ್ಟರ್ ತಂಪಾಗಿರುವಂತೆ ಕ್ರಮ ಕೈಗೊಂಡು ಪರಮಾಣು ಕರಗುವಿಕೆಯನ್ನು ತಡೆಯಬೇಕು. ಸ್ಥಾವರದಲ್ಲಿ 10 ದಿನಗಳಿಗೆ ಆಗುವಷ್ಟು ಮಾತ್ರ ಡೀಸೆಲ್ ದಾಸ್ತಾನು ಇದೆ ಎಂದು ಸಂಸ್ಥೆಯ ಮುಖ್ಯಸ್ಥರು ಹೇಳಿದ್ದಾರೆ.

ವಿಶ್ವದ 10 ಅತೀ ದೊಡ್ಡ ಪರಮಾಣು ಸ್ಥಾವರಗಳಲ್ಲಿ ಒಂದಾಗಿರುವ ಝಪೋರಿಝಿಯಾ ಸ್ಥಾವರವನ್ನು ಯುದ್ಧದ ಪ್ರಾರಂಭಿಕ ಹಂತದಲ್ಲೇ ರಶ್ಯ ಸೇನೆ ವಶಕ್ಕೆ ಪಡೆದಿತ್ತು. ಸ್ಥಾವರದ ಸುತ್ತಮುತ್ತಲಿನ ಪ್ರದೇಶದಲ್ಲಿ ಗುಂಡಿನ ದಾಳಿ ನಡೆಸುವ ಮೂಲಕ ಸ್ಥಾ ವರಕ್ಕೆ ಅಪಾಯ ತಂದೊಡ್ಡಿರುವುದಾಗಿ ಉಕ್ರೇನ್ ಹಾಗೂ ರಶ್ಯ ಪರಸ್ಪರರ ಮೇಲೆ ಆರೋಪ ಮಾಡುತ್ತಿವೆ.

ಯುದ್ಧ ವಿರೋಧಿ ಪ್ರಜೆಗಳಿಗೆ ರಶ್ಯದಿಂದ ಬೆದರಿಕೆ: ವಿಶ್ವಸಂಸ್ಥೆ

ಉಕ್ರೇನ್ ಯುದ್ಧಕ್ಕೆ ವಿರೋಧ ವ್ಯಕ್ತಪಡಿಸುವ ರಶ್ಯದ ಪ್ರಜೆಗಳನ್ನು ಅಲ್ಲಿನ ಸರಕಾರ ಬೆದರಿಸುತ್ತಿದ್ದು ಇದು ಮೂಲಭೂತ ಸ್ವಾತಂತ್ರ್ಯವನ್ನು ದುರ್ಬಲಗೊಳಿಸುತ್ತದೆ  ಎಂದು ವಿಶ್ವಸಂಸ್ಥೆ   ಎಚ್ಚರಿಸಿದೆ

ವಿಶ್ವಸಂಸ್ಥೆ ಮಾನವ ಹಕ್ಕುಗಳ ಮಂಡಳಿಯ ಸಭೆಯಲ್ಲಿ ಮಾತನಾಡಿದ ವಿಶ್ವಸಂಸ್ಥೆ ಮಾನವ ಹಕ್ಕುಗಳ ಉಪಮುಖ್ಯಸ್ಥೆ  ನದಾ ಅಲ್ನಶೀಫ್,   ಉಕ್ರೇನ್ನಲ್ಲಿನ ಯುದ್ಧಕ್ಕೆ ವಿರೋಧ ವ್ಯಕ್ತಪಡಿಸುವ ಜನರ ವಿರುದ್ಧ ಬೆದರಿಕೆ ಮತ್ತು ನಿರ್ಬಂಧ ಕ್ರಮಗಳನ್ನು ಖಂಡಿಸಿದರು. ಈ ನಿರ್ಬಂಧಗಳು ಅಭಿವ್ಯಕ್ತಿ ಸ್ವಾತಂತ್ರ್ಯ, ಸಭೆ ಸೇರುವ ಸ್ವಾತಂತ್ರ್ಯ ಸೇರಿದಂತೆ ಸಂವಿಧಾನಾತ್ಮಕವಾಗಿ ಖಾತರಿಪಡಿಸಿದ ಮೂಲಭೂತ ಸ್ವಾತಂತ್ರ್ಯಗಳನ್ನು ದುರ್ಬಲಗೊಳಿಸುತ್ತದೆ ಎಂದರು. ಅಲ್ಲದೆ ಪತ್ರಕರ್ತರ ವಿರುದ್ಧದ ಒತ್ತಡ ಕ್ರಮ, ಇಂಟರ್ನೆಟ್  ವ್ಯವಸ್ಥೆಯ ಸ್ಥಗಿತ ಹಾಗೂ ಇತರ ರೀತಿಯ ಸೆನ್ಸಾರ್ಶಿಪ್ ಕ್ರಮಗಳೂ ಖಂಡನೀಯ. ಈ ಕ್ರಮಗಳು ಮಾಧ್ಯಮ ಬಹುತ್ವಕ್ಕೆ ಹೊಂದಿಕೆಯಾಗುವುದಿಲ್ಲ ಮತ್ತು ಮಾಹಿತಿ ಪಡೆಯುವ ಹಕ್ಕನ್ನು ಉಲ್ಲಂಘಿಸುತ್ತದೆ ಎಂದರು. ವಿಶ್ವಸಂಸ್ಥೆ ಮಾನವ ಹಕ್ಕುಗಳ ನೂತನ ಹೈಕಮಿಷನರ್ ವೋಕರ್ ಟಕ್ ಅಧಿಕಾರ ಸ್ವೀಕರಿಸುವ ತನಕ ನದಾ ಅಲ್ನಶೀಫ್ ಪ್ರಭಾರೀ ಮುಖ್ಯಸ್ಥೆಯಾಗಿ ಕಾರ್ಯ ನಿರ್ವಹಿಸಲಿದ್ದಾರೆ. 

ವಿದೇಶದ ಏಜೆಂಟ್ ಎಂಬ ಪಟ್ಟಿಯಡಿ ವಿದೇಶದ ಪ್ರಭಾವಕ್ಕೆ ಒಳಗಾದ ವ್ಯಕ್ತಿಗಳ'ನ್ನು ಸೇರಿಸಲು ತೆಗೆದುಕೊಂಡಿರುವ ಕ್ರಮಗಳನ್ನು ಮರುಪರಿಶೀಲಿಸುವಂತೆ ರಶ್ಯವನ್ನು ಅವರು ಒತ್ತಾಯಿಸಿದರು. ರಶ್ಯ ಒಕ್ಕೂಟದ ಭದ್ರತೆಯ ವಿರುದ್ಧ ನಿರ್ದೇಶಿಸಲಾಗಿದೆ ಎಂದು ಪರಿಗಣಿಸಲಾದ ಸರಕಾರಗಳು, ವಿದೇಶಿ ಅಥವಾ ಅಂತರಾಷ್ಟ್ರೀಯ ಸಂಘಟನೆಗಳನ್ನು ಅಪರಾಧೀಕರಿಸುವುದನ್ನು ತಡೆಯುವಂತೆ ರಶ್ಯ ಸರಕಾರವನ್ನು ಅವರು ಆಗ್ರಹಿಸಿದರು.

ಉಕ್ರೇನ್ನಲ್ಲಿ ರಶ್ಯದ ಪಡೆಯ ವಿರುದ್ಧ ಕೇಳಿಬಂದಿರುವ ಮಾನವ ಹಕ್ಕುಗಳ ಉಲ್ಲಂಘನೆ ಆರೋಪಗಳ ಬಗ್ಗೆ ತನಿಖೆ ನಡೆಸಲು ಇತ್ತೀಚೆಗೆ ವಿಶ್ವಸಂಸ್ಥೆ ಉನ್ನತ ಮಟ್ಟದ ತನಿಖೆಯನ್ನು ಆರಂಭಿಸಿದೆ. ಈ ಮಧ್ಯೆ, ರಶ್ಯ ದೇಶದೊಳಗೆ ಮಾನವ ಹಕ್ಕುಗಳ ವ್ಯಾಪಕ ಉಲ್ಲಂಘನೆಯಾಗುತ್ತಿದೆ ಎಂಬ ವರದಿಯ ಬಗ್ಗೆಯೂ ವಿಶ್ವಸಂಸ್ಥೆ ತನಿಖೆ ನಡೆಸಬೇಕು ಎಂಬ ಒತ್ತಡ ಹೆಚ್ಚಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News